ಜಿಲ್ಲೆ

ಚುನಾವಣಾ ವಿಚಾರದಲ್ಲಿ ಗೊಂದಲಗಳಿಗೆ ಆಸ್ಪದ ಬೇಡ

ಚಿಕ್ಕಬಳ್ಳಾಪುರ/ಚಿಂತಾಮಣಿ/ಶಿಡ್ಲಘಟ್ಟ:  ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಗುರುವಾರ ಜಿಲ್ಲೆಯ ಚಿಂತಾಮಣಿ, ಶಿಡ್ಲಘಟ್ಟ ಸೇರಿ ವಿವಿಧೆಡೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು.

ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಚುನಾವಣಾ ವಿಚಾರದಲ್ಲಿ ಗೊಂದಲಗಳಿಗೆ ಆಸ್ಪದಕೊಡಬಾರದು. ಪ್ರತಿಯೊಬ್ಬರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.

ಈಗಾಗಲೇ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆ ಗುರುತಿಸಲಾಗಿದೆ. ಇವುಗಳ ಮೇಲೆ ಪೊಲೀಸ್ ಇಲಾಖೆ ಸಹಕಾರದೊಂದಿಗೆ ಹೆಚ್ಚಿನ ನಿಗಾ ವಹಿಸಬೇಕು. ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್, ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್, ಮಸ್ಟರಿಂಗ್ ಸೆಂಟರ್‌ನಿಂದ ಚೆಕ್ ಲೀಸ್ಟ್ ಪ್ರಕಾರ ಪರಿಕರಗಳ ಪೂರೈಕೆ, ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗೆ ಮಾರ್ಗದರ್ಶನ, ಅಂಚೆ ಮತಪತ್ರ ವ್ಯವಸ್ಥೆ, ದೂರು ವಿಭಾಗ ಸ್ಥಾಪನೆ ಸೇರಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಚುನಾವಣಾ ಆಯೋಗದ ನಿಯಮಗಳನ್ವಯ ಪ್ರತಿಯೊಬ್ಬರು ಕಾರ್ಯ ನಿರ್ವಹಿಸಬೇಕು. ಮತಗಟ್ಟೆಗಳಿಗೆ ನಿಯೋಜಿಸಲಾಗಿರುವ ಅಧಿಕಾರಿ ಮತ್ತು ಸಿಬ್ಬಂದಿಗೆ ಸ್ಥಳೀಯ ಮಟ್ಟದಲ್ಲಿ ತರಬೇತಿ ನೀಡಬೇಕು ಎಂದು ತಹಸೀಲ್ದಾರ್‌ಗಳಿಗೆ ಸೂಚಿಸಿದರು.

ಮತದಾನದ ದಿನ ಮತ್ತು ಮತಎಣಿಕೆ ದಿನ ಯಾವುದೇ ಸಮಸ್ಯೆ ಎದುರಾಗಬಾರದು. ಮತಗಟ್ಟೆಗಳ ಸುಸ್ಥಿತಿಗಳ ಬಗ್ಗೆ ಪಿಡಿಒಗಳು ಪರಿಶೀಲಿಸಿ ವರದಿ ನೀಡಬೇಕು. ಅಲ್ಲದೇ ಕೋವಿಡ್ ಮುಂಜಾಗ್ರತಾ ಕ್ರಮಗಳ ಪಾಲನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಚಿಂತಾಮಣಿ ತಾಲೂಕಿನ 35 ಗ್ರಾಪಂ ವ್ಯಾಪ್ತಿಯ 572 ಸ್ಥಾನಗಳಿಗೆ ಹಾಗೂ ಶಿಡ್ಲಘಟ್ಟ ತಾಲೂಕಿನ 24 ಗ್ರಾಪಂ ವ್ಯಾಪ್ತಿಯ 374 ಸ್ಥಾನಗಳಿಗೆ ಶಾಂತಿಯುತ ಮತ್ತು ನ್ಯಾಯಸಮ್ಮತವಾಗಿ ಚುನಾವಣೆ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಬೇಕು ಎಂದರು. ಶಿಡ್ಲಘಟ್ಟ ತಹಸೀಲ್ದಾರ್ ಅರುಂಧತಿ, ಚಿಂತಾಮಣಿ ನಗರಸಭೆ ಪ್ರಭಾರ ಆಯುಕ್ತ ಉಮಾಶಂಕರ್, ಶಿರಸ್ತೇದಾರ್‌ರಾದ ಮುಜಾಮಿಲ್ ಅಹಮದ್, ಚೇತನ್ ಮತ್ತಿತರರು ಇದ್ದರು.