ಅರಸೀಕೆರೆ: ಸ್ಥಳೀಯ ನಗರಸಭೆಯ ಏಳು ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಮುಂದಿನ ಆದೇಶದವರೆಗೆ ಅಧಿಸೂಚನೆ ಹೊರಡಿಸದಂತೆ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿಗೆ ಮತ್ತು ಚುನಾವಣಾ ಆಯೋಗಕ್ಕೆ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠ ಗುರುವಾರ ನಿರ್ದೇಶನ ನೀಡಿದೆ.
ಸದಸ್ಯತ್ವ ಅನರ್ಹತೆಯಿಂದಾಗಿ ತೆರವಾಗಿರುವ ನಗರಸಭೆಯ 1, 9, 15, 18, 19, 25 ಮತ್ತು 28ನೇ ವಾರ್ಡ್‌ಗಳಿಗೆ ಉಪ ಚುನಾವಣೆ ದಿನಾಂಕ ನಿಗದಿಪಡಿಸಿ ಅ.10 ರಂದು ಅಧಿಸೂಚನೆ ಹೊರಡಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗೆ ಕಳೆದ ಅ.3 ರಂದು ರಾಜ್ಯ ಚುನಾವಣಾ ಅಧಿಸೂಚನೆ ನೀಡಿತ್ತು. ಆದರೆ ಈಗಾಗಲೇ ತಮ್ಮ ಅನರ್ಹತೆ ಪ್ರಶ್ನಿಸಿ ಉಚ್ಚ ನ್ಯಾಯಾಲಯದ ಮೊರೆ ಹೋಗಿರುವ ಸದಸ್ಯರು, ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಉಪ ಚುನಾವಣೆ ನಡೆಸದಂತೆ ರಾಜ್ಯ ಚುನಾವಣಾ ಆಯೋಗಕ್ಕೆ ತಡೆಯಾಜ್ಞೆ ನೀಡಬೇಕೆಂದು ಮತ್ತೊಂದು ಮನವಿ ಸಲ್ಲಿಸಿದ್ದರು.
ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠವು ಅರ್ಜಿದಾರರ ಮನವಿಯನ್ನು ಸ್ವೀಕರಿಸಿ, ‘ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸುವುದರಿಂದ ಈ ಪ್ರಕರಣದ ವಿಚಾರಣೆ ಮೇಲೆ ಆಗುವ ಪರಿಣಾಮವನ್ನು ಗಮನದಲ್ಲಿರಿಸಿಕೊಂಡು, ಮುಂದಿನ ಆದೇಶದವರೆಗೆ ರಾಜ್ಯ ಚುನಾವಣಾ ಆಯೋಗ ಅ.3 ರಂದು ಹೊರಡಿಸುವ ಆದೇಶದ ಅನುಸಾರ ಯಾವುದೇ ಕ್ರಮ ಕೈಗೊಳ್ಳಬಾರದು’ ಎಂಬುದಾಗಿ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ತಾತ್ಕಾಲಿಕ ರಿಲೀಫ್:
ಸದ್ಯದ ಬೆಳವಣಿಗೆಯಿಂದಾಗಿ ಸ್ಥಳೀಯ ಜೆಡಿಎಸ್ ಮುಖಂಡರ ವಿರುದ್ಧ ಬಂಡಾಯ ಎದ್ದು ಸದಸ್ಯತ್ವ ಕಳೆದುಕೊಂಡಿದ್ದ ವಾರ್ಡ್ ಸಂಖ್ಯೆ 1ರ ಹರ್ಷವರ್ಧನ್, 9ರ ಚಂದ್ರಶೇಖರ್, 15ರ ಪಕ್ಷೇತರ ಸದಸ್ಯ ಪುಟ್ಟಸ್ವಾಮಿ, 18ರ ಕವಿತಾ ರಾಘವೇಂದ್ರ, 19ರ ದರ್ಶನ್‌ದಾಸ್, 25 ರ ಬಿ.ಎನ್. ವಿದ್ಯಾಧರ್ ಮತ್ತು ವಾರ್ಡ್ ಸಂಖ್ಯೆ 28ರ ಆಯೇಷಾ ಸಿಕಂದರ್ ಅವರಿಗೆ ತಾತ್ಕಾಲಿಕ ರಿಲೀಪ್ ದೊರಕಿದೆ.
ಏನಿದು ಪ್ರಕರಣ:
ಜೆಡಿಎಸ್ ಶಾಸಕ ಕೆ.ಎಂ .ಶಿವಲಿಂಗೇಗೌಡ ಹಾಗೂ ಅವರ ಕೆಲ ಬೆಂಬಲಿಗರ ನಡೆಯಿಂದ ಬೇಸತ್ತು ತಿರುಗಿಬಿದ್ದ ಜೆಡಿಎಸ್‌ನ 6 ಹಾಗೂ ಒಬ್ಬ ಪಕ್ಷೇತರ ಸದಸ್ಯರು ನಗರಸಭೆಯಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ ಕೋರಿ ಜಿಲ್ಲಾಧಿಕಾರಿಗೆ ಪತ್ರ ನೀಡಿದ್ದರು. ತಿರುಗಿಬಿದ್ದ ಸದಸ್ಯರಿಗೆ ಬುದ್ಧಿ ಕಲಿಸಲು ಇದನ್ನೇ ಆಧಾರ ಮಾಡಿಕೊಂಡ ಜೆಡಿಎಸ್ ರಾಜ್ಯ, ಜಿಲ್ಲೆ ಮತ್ತು ತಾಲೂಕು ಘಟಕಗಳ ಅಧ್ಯಕ್ಷರು ಬಂಡಾಯ ಸದಸ್ಯರನ್ನು ಅನರ್ಹಗೊಳಿಸುವಂತೆ ಕೋರಿ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
ಸುದೀರ್ಘ ವಿಚಾರಣೆ ನಡೆಸಿದ ಅಂದಿನ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು, ಜೆಡಿಎಸ್ ವಿರುದ್ಧ ಬಂಡಾಯ ಸಾರಿದ್ದ ಏಳು ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿ ತೀರ್ಪು ನೀಡಿದ್ದರು. ಜಿಲ್ಲಾಧಿಕಾರಿ ನೀಡಿದ ತೀರ್ಪು ಪ್ರಶ್ನಿಸಿ ಅನರ್ಹ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಾದ, ಪ್ರತಿವಾದ ಆಲಿಸಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠ ಕಳೆದ ಆಗಸ್ಟ್‌ನಲ್ಲಿ ಹಾಸನ ಜಿಲ್ಲಾಧಿಕಾರಿ ನೀಡಿದ್ದ ತೀರ್ಪುನ್ನು ಎತ್ತಿಹಿಡಿದಿತ್ತು. ಆದರೆ ಈ ತೀರ್ಪನ್ನೂ ಪ್ರಶ್ನಿಸಿ ಹೈಕೋರ್ಟ್ ದ್ವಿಸದಸ್ಯ ಪೀಠದ ಮೊರೆ ಹೋಗಿದ್ದರು. ಇದೀಗ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿ, ಚುನಾವಣೆ ಪ್ರಕ್ರಿಯೆ ನಡೆಸದಂತೆ ಜಿಲ್ಲಾಧಿಕಾರಿ ಹಾಗೂ ಚುನಾವಣಾ ಆಯೋಗಕ್ಕೆ ಗುರುವಾರ ನಿರ್ದೇಶನ ನೀಡಿ, ಪ್ರಕರಣದ ವಿಚಾರಣೆಯನ್ನು ಅ.12ಕ್ಕೆ ಮುಂದೂಡಿದೆ.
ಆಯೋಗದ ಘೋಷಿತ ವೇಳಾಪಟ್ಟಿ:
ಉಪ ಚುನಾವಣೆ ಸಂಬಂಧ ಅ.10 ರಂದು ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಬೇಕಾಗಿತ್ತು. ನಾಮಪತ್ರ ಸಲ್ಲಿಕೆಗೆ ಅ.17 ಸೋಮವಾರ ಕಡೆ ದಿನವಾಗಿತ್ತು. 18 ರಂದು ಪರಿಶೀಲನೆ ನಡೆದು, ಉಮೇದುವಾರಿಕೆ ಹಿಂಪಡೆಯಲು ಅ.20 ಕಡೇ ದಿನವಾಗಿತ್ತು. ಅ.28ರಂದು ಶುಕ್ರವಾರ ಮತದಾನ ನಿಗದಿಯಾಗಿತ್ತು. 31ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಬೇಕಿತ್ತು. ಇದೀಗ ಪ್ರಕ್ರಿಯೆ ಕೈಗೆತ್ತಿಕೊಳ್ಳದಂತೆ ಕೋರ್ಟ್ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಅ.12 ರಂದು ನಡೆಯಲಿರುವ ವಿಚಾರಣೆಯತ್ತ ನೆಟ್ಟಿದೆ.
‘‘ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಅರಸೀಕೆರೆ ನಗರಸಭೆಯ 7 ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಅ.10 ರಂದು ಅಧಿಸೂಚನೆ ಹೊರಡಿಸಬೇಕಾಗಿತ್ತು. ಆದರೆ ಮುಂದಿನ ಆದೇಶದವರೆಗೆ ಪ್ರಕ್ರಿಯೆ ನಡೆಸದಂತೆ ಹೈಕೋರ್ಟ್ ಆದೇಶ ನೀಡಿರುವುದಿಂದ ಈ ಸಂಬಂಧ ಯಾವ ಕ್ರಮ ಕೈಗೊಳ್ಳಬೇಕು ಎಂಬ ಕುರಿತು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗುವುದು. ಆಯೋಗದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’’
‘‘ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಪ್ರಕರಣ ಹೈಕೋರ್ಟ್ ದ್ವಿಸದಸ್ಯ ಪೀಠದ ಮೆಟ್ಟಿಲೇರಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಉನ್ನತಾಧಿಕಾರಿಗಳ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು’’