ಜಿಲ್ಲೆ

ಚುನಾವಣಾ ಪರ್ವ ದೇಶದ ಗರ್ವ ಜಾಗೃತಿ ಜಾಥಕ್ಕೆ ಡಿಸಿ.ಸತ್ಯಭಾಮಾ ಚಾಲನೆ

ಹಾಸನ: ಯಾರು ಕೂಡ ಮತದಾನದಿಂದ ಹಿಂದೆ ಉಳಿಯದೆ ಮತ್ತು ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ ಆತ್ಮಸಾಕ್ಷಿಗೆ ಅನುಗುಣವಾಗಿ ಎಲ್ಲರೂ ಮತ ಚಲಾಯಿಸುವ ಮೂಲಕ ನೂರರಷ್ಟು ಮತದಾನ ಮಾಡುವಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಕರೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಲೋಕಸಭಾ ಚುನಾವಣೆ 2024 ಅಂಗವಾಗಿ ಜಿಲ್ಲಾ ಸ್ವೀಪ್ ಸಮಿತಿ ಬುಧವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ‘ಚುನಾವಣಾ ಪರ್ವ ದೇಶದ ಗರ್ವ’ ಘೋಷಣೆಯೊಂದಿಗೆ ಮತದಾನ ಜಾಗೃತಿ ಜಾಥಕ್ಕೆ ಜಿಲ್ಲಾಧಿಕಾರಿ ಚಾಲನೆ ನೀಡಿ ನಂತರ ಮಾತನಾಡಿದ ಅವರು, ಎಲ್ಲರೂ ಕೂಡ ಮತಗಟ್ಟೆಗೆ ಹೋಗಿ ಮತ ಚಲಾಯಿಸಬೇಕು. 85 ವರ್ಷ ಮೇಲ್ಪಟ್ಟವರು ಮನೆಯಲ್ಲೇ ಮತ ಚಲಾಯಿಸುವ ಅವಕಾಶ ಕೊಡಲಾಗಿದೆ. ಕೆಲವರು ತುಂಬಾ ಹಿರಿಯ ನಾಗರಿಕರು ಮತಗಟ್ಟೆಗೆ ಬಂದು ಮತ ಹಾಕುವುದಾಗಿ ಹೇಳಿದ್ದು, ಕಳೆದ ಲೋಕಾಸಭಾ ಚುನಾವಣೆಗಿಂತ ಈ ಬಾರಿ ಹೆಚ್ಚು ಮತದಾನ ಮಾಡಬೇಕು. ಮತದಾನ ದಿನದಂದು ರೆಸಾರ್ಟ್, ಹೋಂ ಸ್ಟೇ ಎಲ್ಲವನ್ನೂ ರದ್ದುಪಡಿಸಿ ನಿಮ್ಮ ಹಕ್ಕನ್ನು ಚಲಾಯಿಸಿ ಎಂದು ಹೇಳಿದರು.
ಅಂಬಾನಿಯಿಂದ ಹಿಡಿದು ಸಾಮಾನ್ಯ ಮನುಷ್ಯನಿಗೂ ಕೂಡ ಇರುವುದು ಒಂದೇ ಮತ. ಭಾರತದ ಪ್ರಜೆ ಆಗಿರುವುದಕ್ಕೆ ಹೆಮ್ಮೆ ಪಡಬೇಕು. ಸ್ವೀಪ್ ಸಮಿತಿ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯಿತಿ ಸಿಇಒ ಇರುತ್ತಾರೆ. ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮವನ್ನು ಮಾಡಲಾಗಿದೆ. ಪೊಲೀಸರು ಸೇರಿದಂತೆ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ತಪ್ಪದೆ ಮತದಾನ ಮಾಡಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ಬಿ.ಆರ್. ಪೂರ್ಣಿಮಾ ಮಾತನಾಡಿ, ಜಿಲ್ಲಾ ಸ್ವೀಪ್ ಸಮಿತಿಯಿಂದ ಪ್ರತಿ ತಾಲೂಕಿನಲ್ಲೂ ಜಾಗೃತಿ ಜಾಥವನ್ನು ಹಮ್ಮಿಕೊಳ್ಳಲಾಗಿದ್ದು, 2019 ಲೋಕಾಸಭಾ ಚುನಾವಣೆಯಲ್ಲಿ ಶೇ.77.19ರಷ್ಟು ಮತದಾನವಾಗಿತ್ತು. ಈ ಬಾರಿ ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಶೇಕಡವಾರು ನೂರರಷ್ಟು ಮತದಾನ ಮಾಡುವುದರ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಯಶಸ್ವಿಗೊಳಿಸಬೇಕು. ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಆತ್ಮಸಾಕ್ಷಿಗೆ ಅನುಗುಣವಾಗಿ ಮತದಾನ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಚುನಾವಣೆಯ ಪ್ರಚಾರದ ಅಂಬಾಸಿಡರ್ ಸುಷ್ಮಾ ಅವರು ಮಾತನಾಡಿ, ಮತದಾನ ಮಾಡಲು ಅಂಗವಿಕಲರಿಗೂ ಸೌಲಭ್ಯ ಕೊಡಲಾಗಿದೆ. ಎಲ್ಲರೂ ಮರೆಯದೇ ಮತ ಹಾಕುವಂತೆ ಹೇಳಿದರು.
ಇದೆ ವೇಳೆ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಜಿಲ್ಲಾ ಪಂಚಾಯತಿ ಪರಪ್ಪಸ್ವಾಮಿ, ಜಿಲ್ಲಾ ಆರೋಗ್ಯಧಿಕಾರಿ ಡಾ. ಅನಿಲ್, ಯುವಜನ ಮತ್ತು ಕ್ರಿಡಾ ಇಲಾಖೆ ಸಹಾಯಕ ನಿರ್ದೇಶಕ ಸಿ.ಕೆ. ಹರೀಶ್, ಹಿಮ್ಸ್ ಜಿಲ್ಲಾ ಸರ್ಜನ್ ಡಾ.ಲೋಕೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ತಮ್ಮಯ್ಯ, ನಗರಸಭೆ ಜೂನಿಯರ್ ಇಂಜಿನಿಯರ್ ಕೆ.ಆರ್. ಕವಿತಾ, ಕಲಾವಿದ ಬಿ.ಟಿ. ಮಾನವ ಇತರರು ಉಪಸ್ಥಿತರಿದ್ದರು.