ಜಿಲ್ಲೆ

ಚುನಾವಣಾ ಕರ್ತವ್ಯದಲ್ಲಿ ದಕ್ಷತೆ ಪ್ರದರ್ಶಿಸಿ

ಮೈಸೂರು: ವಿಧಾನಸಭೆ ಚುನಾವಣಾ ಕರ್ತವ್ಯದಲ್ಲಿ ಪೊಲೀಸರು ದಕ್ಷತೆ ಪ್ರದರ್ಶಿಸಬೇಕು ಎಂದು ನಿವೃತ್ತ ಐಜಿಪಿ ಕೆ.ಟಿ.ಬಾಲಕೃಷ್ಣ ಹೇಳಿದರು.

ಮೈಸೂರು ನಗರ, ಜಿಲ್ಲಾ ಪೊಲೀಸ್ ಇಲಾಖೆ, ಕರ್ನಾಟಕ ಪೊಲೀಸ್ ಅಕಾಡೆಮಿ ಸೇರಿದಂತೆ ಇನ್ನಿತರ ವಿಭಾಗಗಳ ಪೊಲೀಸ್ ಘಟಕಗಳ ಸಹಯೋಗದಲ್ಲಿ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ನೀತಿಸಂಹಿತೆ ಸಹ ಜಾರಿಯಾಗಿದೆ. ಈಗಾಗಲೇ ಪೊಲೀಸ್ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಈ ಕೆಲಸವನ್ನು ದಕ್ಷತೆಯಿಂದ ನಿರ್ವಹಿಸಬೇಕು ಎಂದರು.

ಈ ಹಿಂದೆ ಆಯಾ ಠಾಣಾ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿ ಸ್ಥಳೀಯ ಜನರೊಂದಿಗೆ ಹೊಂದಾಣಿಕೆಯಿಂದ ಕರ್ತವ್ಯ ನಿರ್ವಹಿಸಬೇಕಾಗಿತ್ತು. ಆದರೆ, ಇದೀಗ ಎಲ್ಲೆಡೆ ಒಂದೇ ಮಾದರಿಯ ಕೆಲಸ ನಿರ್ವಹಿಸಬೇಕಾಗಿದೆ ಎಂದರು.

ಇತ್ತೀಚಿನ ದಿನದಲ್ಲಿ ಪೊಲೀಸ್ ಧ್ವಜ ದಿನದ ಮಹತ್ವ ಕಳೆದುಕೊಳ್ಳುತ್ತಿದೆ. ಈ ಹಿಂದೆ ಪೊಲೀಸ್ ಧ್ವಜ ದಿನಾಚರಣೆ ಎಂದರೆ ಸಾಕು ಸಡಗರ ಇತ್ತು. ದೇಣಿಗೆ ಸಂಗ್ರಹಿಸಲು ಪೊಲೀಸರು ಉತ್ಸುಕರಾಗಿರುತ್ತಿದ್ದರು. ಹಬ್ಬದ ರೀತಿಯಲ್ಲಿ ಪೊಲೀಸ್ ಧ್ವಜ ದಿನವನ್ನು ಆಚರಿಸಲಾಗುತ್ತಿತ್ತು. ಆದರೀಗ ಈ ಹಿಂದಿನಷ್ಟು ವೈಭವವಿಲ್ಲವಾಗಿದೆ. ಇದಕ್ಕೆ ಸರ್ಕಾರ ನೀಡುತ್ತಿರುವ ಸೌಲಭ್ಯವೂ ಒಂದು ಕಾರಣವಾದರೆ, ದೇಣಿಗೆ ಸಂಗ್ರಹಿಸಲು ಪೊಲೀಸರಿಗೆ ನಿರಾಸಕ್ತಿ ಹಾಗೂ ಭಯ, ದೇಣಿಗೆ ನೀಡಲು ಸಾರ್ವಜನಿಕರ ನಿರಾಕರಣೆಯೂ ಕಾರಣವಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಧ್ವಜ ದಿನಾಚರಣೆಯ ಮಹತ್ವ ಮರುಳಿಸುವಂತಾಗಬೇಕು. ಪೊಲೀಸರು ದೇಣಿಗೆ ಸಂಗ್ರಹಿಸಿ, ಪೊಲೀಸರು ಹಾಗೂ ನಿವೃತ್ತ ಪೊಲೀಸರ ಕಲ್ಯಾಣ ನಿಧಿಯ ಮೊತ್ತವನ್ನು ಇನ್ನಷ್ಟು ಬೆಳೆಸುವತ್ತ ಗಮನ ಹರಿಸಬೇಕು ಎಂದರು.

ನಿವೃತ್ತರಿಗೆ ಸನ್ಮಾನ:
ನಿವೃತ್ತ ಐಜಿಪಿ ಕೆ.ಟಿ.ಬಾಲಕೃಷ್ಣ, ನಿವೃತ್ತ ಪಿಎಸ್‌ಐಗಳಾದ ಪಿ.ಮಹದೇವ, ಛಾಯಾಪತಿ, ನಿವೃತ್ತ ಸಹಾಯಕ ಆಡಳಿತಾಧಿಕಾರಿ ವೈ.ವೈ.ಬಗಲಿ, ನಿವೃತ್ತ ಪ್ರಥಮ ದರ್ಜೆ ಸಹಾಯಕ ಶ್ರೀನಿವಾಸ್ ರಾಜು, ನಿವೃತ್ತ ಎಎಸ್‌ಐಗಳಾದ ಮಂಜಪ್ಪ, ಮುಕುಂದ್ ಸಿಂಗ್, ನಿವೃತ್ತ ಸಿಎಚ್‌ಸಿ ವಿ.ನಾರಾಯಣ, ನಿವೃತ್ತ ಆರ್‌ಎಸ್‌ಐ ಎನ್.ಮುರುಳಿಧರ ಮಾನೆ, ನಿವೃತ್ತ ಎಆರ್‌ಎಸ್‌ಐ ಅಕ್ತರ್ ಷರೀಷ್(ಡಿಎಆರ್), ನಿವೃತ್ತ ಎಎಚ್‌ಸಿ ಎಚ್.ಎಂ.ಪ್ರಕಾಶ್(ಮೌಂಟೆಡ್), ನಿವೃತ್ತ ಎಎಚ್‌ಸಿ ತಿಬ್ಬಣ್ಣ(ಡಿಎಆರ್), ಕರ್ನಾಟಕ ಶಾಸ್ತ್ರೀಯ ವಾದ್ಯವೃಂದದ ನಿವೃತ್ತ ವಾದ್ಯಗಾರ ಎಂ.ಆರ್.ಉದಯ್‌ಕುಮಾರ್, ಆಂಗ್ಲ ವಾದ್ಯವೃಂದ ನಿವೃತ್ತ ವಾದ್ಯಗಾರ ಆರ್.ಕೃಷ್ಣಮೂರ್ತಿ ಇನ್ನಿತರರನ್ನು ಸನ್ಮಾನಿಸಲಾಯಿತು.

ಆಕರ್ಷಕ ಪಥಸಂಚಲನ:
ಪೊಲೀಸ್ ಸಿಬ್ಬಂದಿಯ ಆಕರ್ಷಕ ಪಥಸಂಚಲನ ಗಮನ ಸೆಳೆಯಿತು. ಮೈಸೂರಿನ ವಿವಿಧ ತುಕಡಿಗಳ ಪೊಲೀಸರು ಪಥಸಂಚಲನ ನಡೆಸಿ, ಗೌರವ ವಂದನೆ ಸಲ್ಲಿಸಿದರು. ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಡಿಸಿಪಿಗಳಾದ ಮುತ್ತುರಾಜ್, ಎಸ್.ಜಾಹ್ನವಿ, ಸಿಎಆರ್ ಡಿಸಿಪಿ ಮಾರುತಿ, ಮೌಂಟೆಡ್ ಡಿಸಿಪಿ ಶಿವರಾಜು, ಮೌಂಟೆಡ್ ಕಮಾಂಡೆಂಟ್ ಜನಾರ್ಧನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.