ಹಾಸನ: ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ ಹಾಗೂ ಚುನಾಯಿತ ಸದಸ್ಯರ ಸಂಖ್ಯೆಯನ್ನು ಪರಿಷ್ಕರಣೆ ಮಾಡಿ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಕರಡು ಪ್ರಸ್ತಾವನೆ ಹೊರಡಿಸಿದೆ.
2022 ಫೆಬ್ರವರಿಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 160 ಮತ್ತು 161ರ ಅನ್ವಯ ರಾಜ್ಯ ಚುನಾವಣಾ ಆಯೋಗವು, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಎಲ್ಲೆ ಹಾಗೂ ಸದಸ್ಯರ ಸಂಖ್ಯೆಯನ್ನು ಅಂತಿಮಗೊಳಿಸಿ ಆದೇಶ ಹೊರಡಿಸಿತ್ತು. ಇದೀಗ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಮತ್ತೊಮ್ಮೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾಯಿತರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನು ವಿಂಗಡಿಸಿ ಅವುಗಳ ಸೀಮಾ/ಗಡಿ ವ್ಯಾಪ್ತಿ ನಿಗದಿಪಡಿಸಿದೆ.
ಈ ಹಿಂದೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ಪುನರ್‌ವಿಂಗಡಣೆ ಮಾರ್ಗಸೂಚಿ ಸಿದ್ಧಪಡಿಸುವಂತೆ ಚುನಾವಣಾ ಆಯೋಗ ಆಯಾಯ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿತ್ತು. ಆಯೋಗದ ಮಾರ್ಗಸೂಚಿ ಆಧರಿಸಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಸಂಖ್ಯೆಯನ್ನು ಜನಸಂಖ್ಯೆಗೆ ಅನುಗುಣವಾಗಿ ನಕ್ಷೆ ಸಹಿತ ಸಿದ್ಧಪಡಿಸಿ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದ ನಂತರ, ಆಯೋಗ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರ ಹಾಗೂ ಸದಸ್ಯರ ಸಂಖ್ಯೆಯನ್ನು ಅಂತಿಮಗೊಳಿಸಿ ಆದೇಶ ಹೊರಡಿಸಿತ್ತು. ಆದರೆ ಇದಕ್ಕೆ ವಿವಿಧ ರಾಜಕೀಯ ಪಕ್ಷಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಲೋಪ ಸರಿಪಡಿಸಲು ಸೀಮಾ ನಿರ್ಣಯ ಆಯೋಗ ರಚನೆ ಮಾಡಲಾಗಿತ್ತು.
ಇದೀಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳನ್ನು ಪುನರ್‌ವಿಂಗಡಿಸಿ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ಜಾಲತಾಣದಲ್ಲಿ ಮತ್ತು ಕರ್ನಾಟಕ ರಾಜ್ಯ ವಿಶೇಷ ರಾಜ್ಯಪತ್ರದಲ್ಲಿ ಜ.2 ರಂದು ಪ್ರಕಟಿಸಲಾಗಿದೆ. ಅಲ್ಲದೆ, ಜಿಲ್ಲ ಮತ್ತು ತಾಲೂಕು ಪಂಚಾಯಿತಿ ಸೂಚನಾ ಫಲಕಗಳಲ್ಲೂ ಈ ಕರಡು ಪ್ರತಿಯನ್ನು ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳಿದ್ದಲ್ಲಿ ಜನವರಿ 16 ಸಂಜೆ 5 ಗಂಟೆಯ ಒಳಗೆ ಆನ್‌ಲೈನ್ ಮೂಲಕ, ಅಂಚೆ ಮೂಲಕ ಅಥವಾ ಖುದ್ದಾಗಿ ಬೆಂಗಳೂರು ಅಂಬೇಡ್ಕರ್ ವೀಧಿಯಲ್ಲಿರುವ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ಕಚೇರಿಗೆ ಸಲ್ಲಿಸಲು ಸೂಚಿಸಲಾಗಿದೆ.
ಕುಗ್ಗಿದ ಜಿಪಂ, ಹಿಗ್ಗಿದ ತಾಪಂ:
ಕ್ಷೇತ್ರ ಪುನರ್ವಿಂಗಡೆ ನಂತರ ಹಾಸನ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ 40 ರಿಂದ 39 ಕ್ಕೆ ಕುಸಿದಿದೆ. ಆದರೆ ತಾಲೂಕು ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಿದೆ. ಜಿಲ್ಲೆಯ 8 ತಾಲೂಕುಗಳ ವ್ಯಾಪ್ತಿಯಲ್ಲಿ 40 ಜಿಪಂ ಕ್ಷೇತ್ರಗಳು ಮತ್ತು 153 ತಾಪಂ ಕ್ಷೇತ್ರಗಳಿದ್ದವು. ಈ ಮೊದಲು ನಡೆದಿದ್ದ ಕ್ಷೇತ್ರ ಪುನರ್‌ವಿಂಗಡಣೆ ಕಾರ್ಯದಲ್ಲಿ ಜಿಪಂ ಕ್ಷೇತ್ರಗಳ ಸಂಖ್ಯೆ 40 ರಿಂದ 44 ಕ್ಕೆ ಏರಿಕೆಯಾಗಿತ್ತು. ತಾಪಂ ಕ್ಷೇತ್ರಗಳ ಸಂಖ್ಯೆ 153 ರಿಂದ 120ಕ್ಕೆ ಇಳಿಕೆಯಾಗಿತ್ತು. ಆದರೀಗ ಜಿಪಂ ಕ್ಷೇತ್ರಗಳ ಸಂಖ್ಯೆ 39ಕ್ಕೆ ಕುಸಿದಿದ್ದರೆ, ತಾಪಂ ಕ್ಷೇತ್ರಗಳ ಸಂಖ್ಯೆ 136 ಕ್ಕೆ ಏರಿಕೆಯಾಗಿದೆ.
ನಗರಪಾಲಿಕೆ ಪರಿಣಾಮ:
ಹಾಸನ ನಗರದ ಸುತ್ತಮತ್ತಲ ಗ್ರಾಮಗಳನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿ ನಗರಸಭೆಯನ್ನು ನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿರುವುದರಿಂದ ಹಾಸನ ತಾಲೂಕಿನ ಒಂದು ಜಿಪಂ ಕ್ಷೇತ್ರ ಕಡಿಮೆ ಆಗಿದೆ. ಹಾಸನ ತಾಲೂಕಿನಲ್ಲಿ ಈ ಮೊದಲು 7 ಜಿಪಂ ಕ್ಷೇತ್ರಗಳಿದ್ದವು. ಅದರಲ್ಲಿ ಬೂವನಹಳ್ಳಿ ಜಿಪಂ ಕ್ಷೇತ್ರ ವ್ಯಾಪ್ತಿಯ ಬೂವನಹಳ್ಳಿ ಸೇರಿದಂತೆ ಕೆಲ ಗ್ರಾಮಗಳು ಹಾಸನ ನಗರಸಭೆ ವ್ಯಾಪ್ತಿಗೆ ಸೇರ್ಪಡೆಗೊಂಡಿರುವುದರಿಂದ ಬೂವನಹಳ್ಳಿ ಕ್ಷೇತ್ರವನ್ನು ರದ್ದುಗೊಳಿಸಲಾಗಿದೆ. ಉಳಿದ ತಾಲೂಕುಗಳ ಜಿಪಂ ಕ್ಷೇತ್ರಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದರೆ ಕೆಲ ಕ್ಷೇತ್ರಗಳ ಹೆಸರು ಬದಲಾಗಿದೆ.
ನೂತನ 39 ಜಿಪಂ ಕ್ಷೇತ್ರಗಳ ವಿವರ:
ಹಾಸನ ತಾಲೂಕು: 1. ಕಟ್ಟಾಯ-ಗೊರೂರು, 2. ಸಾಲಗಾಮೆ, 3. ಕಂದಲಿ, 4. ಮೊಸಳೆ ಹೊಸಹಳ್ಳಿ, 5. ಶಾಂತಿಗ್ರಾಮ, 6. ದುದ್ದ.
ಆಲೂರು ತಾಲೂಕು: 1. ಪಾಳ್ಯ, 2. ಮಗ್ಗೆ.
ಅರಕಲಗೂಡು ತಾಲೂಕು: 1. ಹೊನ್ನವಳ್ಳಿ, 2. ಮಲ್ಲಿಪಟ್ಟಣ, 3. ದೊಡ್ಡಮಗ್ಗೆ, 4. ಕೊಣನೂರು, 5. ರಾಮನಾಥಪುರ.
ಅರಸೀಕೆರೆ ತಾಲೂಕು: 1. ಹಾರನಹಳ್ಳಿ, 2. ಕಣಕಟ್ಟೆ, 3. ಗಂಡಸಿ, 4. ಅಗ್ಗುಂದ, 5. ಬಾಗೇಶಪುರ, 6. ಬಾಣಾವರ, 7. ಜಾವಗಲ್.
ಬೇಲೂರು ತಾಲೂಕು: 1. ಅಡಗೂರು, 2. ಹಳೇಬೀಡು, 3. ಇಬ್ಬೀಡು, 4. ನಾಗೇನಹಳ್ಳಿ, 5. ಅರೇಹಳ್ಳಿ.
ಚನ್ನರಾಯಪಟ್ಟಣ ತಾಲೂಕು: 1. ಬಾಗೂರು, 2. ನುಗ್ಗೇಹಳ್ಳಿ, 3. ದಂಡಿಗನಹಳ್ಳಿ, 4. ಡಿ. ಕಾಳೇನಹಳ್ಳಿ, 5. ಗೌಡಗೆರೆ, 6. ಶ್ರವಣಬೆಳಗೊಳ, 7. ಹಿರೀಸಾವೆ.
ಹೊಳೆನರಸೀಪುರ ತಾಲೂಕು: 1. ಹಳೇಕೋಟೆ, 2. ಮೂಡಲಹಿಪ್ಪೆ, 3. ನಿಡುವಣಿ, 4. ಹಳ್ಳಿಮೈಸೂರು.
ಸಕಲೇಶಪುರ ತಾಲೂಕು: 1. ಬೆಳಗೋಡು, 2. ಹಾನುಬಾಳು, 3. ಯಸಳೂರು.
ನೂತನ ತಾಪಂ ಕ್ಷೇತ್ರಗಳ ಸಂಖ್ಯೆ:
ಹಾಸನ: 21
ಆಲೂರು: 9
ಸಕಲೇಶಪುರ: 11
ಹೊಳೆನರಸೀಪುರ: 16
ಬೇಲೂರು: 17
ಅರಕಲಗೂಡು: 19
ಚನ್ನರಾಯಪಟ್ಟಣ: 21
ಅರಸೀಕೆರೆ: 22
‘‘ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯ ಮಾಡಿ ಹೊರಡಿಸಿರುವ ಕರಡು ಪ್ರತಿಯನ್ನು ಜಿಪಂ ಮತ್ತು ತಾಪಂ ಕಚೇರಿಗಳ ಸೂಚನಾ ಫಲಕಗಳಲ್ಲಿ ಪ್ರಕಟಿಸುವುದರ ಜೊತೆಗೆ ಸಾರ್ವಜನಿಕರ ನಡುವೆ ಪ್ರಚಾರ ಕೈಗೊಳ್ಳಲು ಸೂಚಿಸಲಾಗಿದೆ. ಸಾರ್ವಜನಿಕರ ಅಭಿಪ್ರಾಯ ಮತ್ತು ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ಅಥವಾ ಬೆಂಗಳೂರಿನ ಆಯೋಗದ ಕಚೇರಿಯಲ್ಲಿ ಮಾತ್ರ ಖುದ್ದಾಗಿ ಸಲ್ಲಿಸಲು ಅವಕಾಶ ಇದೆ.’’