ಭಾಲ್ಕಿ: ಪಟ್ಟಣದಲ್ಲಿ 25ರಂದು ಮೊದಲ ಬಾರಿಗೆ ರಾಜ್ಯ ಮಟ್ಟದ 11ನೇ ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ಅದ್ದೂರಿ ಆಯೋಜನೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಇಲ್ಲಿಯ ಹಿರೇಮಠ ಸಂಸ್ಥಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಸಾಣೇಹಳ್ಳಿಯ ಶ್ರೀ ಡಾ.ಪಂಡಿತಾರಾಧ್ಯ ಸ್ವಾಮೀಜಿ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಮಾಡಲಾಗುವುದು ಎಂದರು.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಮತ್ತು ಹಿರೇಮಠ ಸಂಸ್ಥಾನದ ಸಹಯೋಗದಡಿ 25ರಂದು ಪಟ್ಟಣದ ಚನ್ನಬಸವಾಶ್ರಮ ಪರಿಸರದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಸಮ್ಮೇಳನ ನಿಮಿತ್ತ ಬೆಳಗ್ಗೆಯಿಂದ ರಾತ್ರಿವರೆಗೆ ವಿವಿಧ ಕಾರ್ಯಕ್ರಮ ನಡೆಯಲಿವೆ. ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಪರಿಷತ್ ತಾಲೂಕು ಅಧ್ಯಕ್ಷ ಕಾಶೀನಾಥ ಭೂರೆ ಮಾತನಾಡಿ, ಅಂದು ಬೆಳಗ್ಗೆ 8ಕ್ಕೆ ಧ್ವಜರೋಹಣ, 9ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ, 10ಕ್ಕೆ ಶಾಸಕ ಈಶ್ವರ ಖಂಡ್ರೆ ಸಮ್ಮೇಳನ ಉದ್ಘಾಟಿಸುವರು. ಬೀದರ್ ವಿಶ್ವವಿದ್ಯಾಲಯ ಕುಲಪತಿ ಡಾ.ಬಿ.ಎಸ್. ಬಿರಾದಾರ್, ಪರಿಷತ್ ಪ್ರಸಾರಾಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡ ಶೆಟ್ಟರ್ ಭಾಗವಹಿಸುವರು. ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಆಶಯ ನುಡಿ ನುಡಿಯುವರು. ಹಿರಿಯ ಸಾಹಿತಿ ಡಾ.ಸೋಮನಾಥ ಯಾಳವಾರ ಗ್ರಂಥ ಬಿಡುಗಡೆ ಮಾಡುವರು. ಮಧ್ಯಾಹ್ನ 12ಕ್ಕೆ ವಿಚಾರ ಗೊಷ್ಠಿ, 2ಕ್ಕೆ ಕವಿಗೋಷ್ಠಿ, 3ಕ್ಕೆ ಸರ್ವಾಧ್ಯಕ್ಷರೊಂದಿಗೆ ಸಂವಾದ ಸೇರಿ ನಾನಾ ಕಾರ್ಯಕ್ರಮಗಳು ಜರುಗಲಿವೆ ಎಂದು ವಿವರಿಸಿದರು.
ಶ್ರೀ ಬಸವಲಿಂಗ ದೇವರು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಸಂಗಮೇಶ ಗುಮ್ಮೆ, ರಾಜು ಜುಬರೆ ಇದ್ದರು.
ಕೋಟ್ರಾಜ್ಯ ಮಟ್ಟದ 11ನೇ ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಶ್ರೀಮಠದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಉದ್ಘಾಟನೆ, ಸಮಾರೋಪ ಸೇರಿ ದಿನವಿಡೀ ವಿವಿಧ ಕಾರ್ಯಕ್ರಮಗಳು ಜರುಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಬೇಕು.| ಶ್ರೀ ಗುರುಬಸವ ಪಟ್ಟದ್ದೇವರುಭಾಲ್ಕಿ ಹಿರೇಮಠ ಸಂಸ್ಥಾನ ಪೀಠಾಧಿಪತಿ