ಜಿಲ್ಲೆ

ಚುಂಚಶ್ರೀಗಳ ವಿಜೃಂಭಣೆಯ ತೆಪ್ಪೋತ್ಸವ

ಚನ್ನರಾಯಪಟ್ಟಣ: ತಾಲೂಕಿನ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ಧನುರ್ಮಾಸ ಪೂಜಾ ಸಂಪನ್ನ ಹಾಗೂ ಬಸವಮಾಲಾ ವಿಸರ್ಜನಾ ಕಾರ್ಯಕ್ರಮದ ಅಂಗವಾಗಿ ದೇವತೆಗಳ ಉತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ತೆಪ್ಪೋತ್ಸವ ಶನಿವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.


ಶನಿವಾರ ಸಂಜೆಯಿಂದಲೇ ಶ್ರೀ ಬಸವೇಶ್ವರಸ್ವಾಮಿಗೆ ಜರುಗಿದ ಅಭಿಷೇಕ, ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು. ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
ರಾತ್ರಿ ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಪಾದಪೂಜೆ ಮೂಲಕ ಸ್ವಾಗತಿಸಲಾಯಿತು.

ಶ್ರೀಗಳು ಶ್ರೀ ಬಸವೇಶ್ವರಸ್ವಾಮಿಗೆ ಪ್ರಥಮ ಪೂಜೆ ಸಲ್ಲಿಸಿದರಲ್ಲದೆ, ದೇಗುಲ ಆವರಣದಲ್ಲಿರುವ ಬಿಲ್ವಪತ್ರೆ ಮರ ಹಾಗೂ ನಾಗ ಶಿಲೆಗಳಿಗೆ ಪೂಜೆ ಸಲ್ಲಿಸಿ ದೇಗುಲದ ಹಿಂಭಾಗದಲ್ಲಿರುವ ಬಸವ ಮೂರ್ತಿಗೆ ಕ್ಷೀರಾಭಿಷೇಕ ನೆರವೇರಿಸಿದರು. ಜಗದ್ಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮುತ್ತಿನ ಪಲ್ಲಕ್ಕಿ ಉತ್ಸವ ಜರುಗಿತು. ಭಕ್ತರಿಗೆ ಆಶೀರ್ವಚನ ನೀಡಿದರು. ಅನ್ನದಾಸೋಹ ಕಾರ್ಯಕ್ಕೆ ಚಾಲನೆ ನೀಡಿದರು.


ವೈಭವದ ತೆಪ್ಪೋತ್ಸವ: ರಾತ್ರಿ 10.45ರ ಸುಮಾರಿನಲ್ಲಿ ಶ್ರೀಕ್ಷೇತ್ರದ ಪುಷ್ಕರಣಿಯಲ್ಲಿ ವಿದ್ಯುತ್ ಹಾಗೂ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿದ್ದ ವೈಭವದ ತೆಪ್ಪದಲ್ಲಿ ಶ್ರೀ ಚೌಡೇಶ್ವರಿ ದೇವಿ, ಶ್ರೀ ಬಸವೇಶ್ವರಸ್ವಾಮಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಪುಷ್ಪಸಿಂಹಾಸನದ ಮೇಲೆ ಅಲಂಕರಿಸಿದರು. ಕಬ್ಬಳಿ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ ಆರತಿ ಬೆಳಗಿ ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು. ಪುಷ್ಕರಣಿಯಲ್ಲಿ ಚುಂಚಶ್ರೀಗಳ ತೆಪ್ಪೋತ್ಸವ ಆರಂಭಗೊಳ್ಳುತಿದ್ದಂತೆಯೇ ನೆರೆದಿದ್ದ ಭಕ್ತರು ಜಯಘೋಷ ಕೂಗಿದರು. ಪುಷ್ಕರಣಿಯಲ್ಲಿ ಮೂರು ಸುತ್ತು ತೆಪ್ಪೋತ್ಸವ ನಡೆಯಿತು.


ಬಸವಮಾಲಾ ವಿಸರ್ಜನೆ: ಡಿ.16ರಿಂದ ಬಸವ ಮಾಲೆ ಧರಿಸಿ ಧನುರ್ಮಾಸದಲ್ಲಿ ಪಾಲ್ಗೊಂಡಿದ್ದ ಮಾಲಾಧಾರಿಗಳು ತೆಪ್ಪೋತ್ಸವ ಪೂರ್ಣಗೊಂಡ ನಂತರ ಗುರುಗಳ ಮಾರ್ಗದರ್ಶನದಂತೆ ಕಲ್ಯಾಣಿಯಲ್ಲಿ ಮಿಂದು, ಬಸನ ಮಾಲೆ ವಿಸರ್ಜನೆಗೊಳಿಸಿ ಧನುರ್ಮಾಸ ವ್ರತ ಮುಕ್ತಾಯಗೊಳಿಸಿದರು.


ಭಕ್ತರ ದಂಡು: ಚುಂಚಶ್ರೀಗಳ ತೆಪ್ಪೋತ್ಸವ ವೀಕ್ಷಿಸಲು ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ತುಮಕೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತ ಸ್ತೋಮವೇ ಹರಿದುಬಂದಿತ್ತು. ಹಿರೀಸಾವೆ ಪೊಲೀಸರು ಕಾರ್ಯಕ್ರಮಕ್ಕೆ ಬಿಗಿ ಬಂದೂಬಸ್ತ್ ಒದಗಿಸಿದ್ದರು.


51 ದೇವತೆಗಳ ಭಾಗಿ: ಧನುರ್ಮಾಸ ಪೂಜಾ ಸಲುವಾಗಿ ಶ್ರೀಕ್ಷೇತ್ರಕ್ಕೆ 51 ಗ್ರಾಮಗಳಿಂದ ದೇವತೆಗಳು ಹಾಗೂ 57ಕ್ಕೂ ಹೆಚ್ಚು ಬಸವ ಕಳಶಗಳೊಂದಿಗೆ ಭಕ್ತರು ಆಗಮಿಸಿದ್ದರು. ತೆಪ್ಪೋತ್ಸವದ ಬಳಿಕ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.

ಹಾಸನ ಶಾಖಾಮಠದ ಶ್ರೀಶಂಭುನಾಥಸ್ವಾಮೀಜಿ, ಕಬ್ಬಳಿ ಶಾಖಾಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಶಾಸಕ ಸಿ.ಎನ್.ಬಾಲಕೃಷ್ಣ, ಭಾರತದ ತೆಂಗು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕಬ್ಬಳಿ ರಂಗೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಪೃಥ್ವಿಕುಮಾರ್, ಮಾಜಿ ಅಧ್ಯಕ್ಷ ಶಿವನಂಜೇಗೌಡ, ಗುಡಿಗೌಡ ಪ್ರಕಾಶ್, ಪ್ರಮುಖರಾದ ಕೆಂಪೇಗೌಡ, ಗಣೇಶ್‌ಗೌಡ, ಬಸವ ಮಾಲಾಧಾರಿಗಳು ಹಾಗೂ ಭಕ್ತರು ಪಾಲ್ಗೊಂಡಿದ್ದರು.