ಮೈಸೂರು: ಟಿಬೆಟ್ ಧರ್ಮಗುರು ಹನ್ನೊಂದನೇ ಪಂಚೆನ್ ಲಾಮಾ ಗೆಂಡುನ್ ಚೋಯ್ಕಿ ಅವರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಟಿಬೆಟ್ ಯುವ ಸಂಘಟನೆ ಹಾಗೂ ಧಾರ್ಮಿಕ ಟಿಬೆಟ್ ಮಹಿಳಾ ಸಂಘಟನೆ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಅಕ್ರಮವಾಗಿ ಬಂಧನದಲ್ಲಿ ಇಟ್ಟಿರುವ ಪಂಚೆನ್ ಲಾಮಾ ಗೆಂಡುನ್ ಚೋಯ್ಕಿ ಅವರ ಬಿಡುಗಡೆಗೆ ಆಗ್ರಹಿಸಿ ಚೀನಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಚೀನಾ ಸರ್ಕಾರ 1995ರ ಮೇ 17ರಂದು ಪಂಚೆನ್ ಲಾಮಾ ಅವರನ್ನು ಅಕ್ರಮವಾಗಿ ಬಂಧಿಸಿ ಅನುಮಾನಾಸ್ಪದವಾಗಿ ಅಸುನೀಗುವಂತೆ ಮಾಡಿದೆ. ಬಳಿಕ ಟಿಬೆಟ್ ಧರ್ಮಗುರು ದಲೈಲಾಮ ಅವರು ಗೆಂಡುನ್ ಚೋಯ್ಕಿ ಅವರನ್ನು 11ನೇ ಪಂಚೆನ್ ಲಾಮಾ ಎಂದು ಘೋಷಿಸಿದರು. ಇದಾದ 4 ತಿಂಗಳಲ್ಲಿ 6 ವರ್ಷದವರಾಗಿದ್ದ ಗೆಂಡುನ್ ಚೋಯ್ಕಿ ಅವರನ್ನು ಚೀನಾ ಸರ್ಕಾರ ಕುಟುಂಬ ಸಮೇತ ಅಪಹರಣ ಮಾಡಿ, ಬಂಧನದಲ್ಲಿ ಇಟ್ಟಿದೆ. ಅಂದಿನಿಂದ ಇಲ್ಲಿಯವರೆಗೆ ಅವರ ಇರುವಿಕೆ ಬಗ್ಗೆ ಯಾವುದೇ ಮಾಹಿತಿಯನ್ನು ಸರ್ಕಾರ ಕೊಡಲು ಒಪ್ಪುತ್ತಿಲ್ಲ ಎಂದು ಕಿಡಿಕಾರಿದರು.
ಅತ್ಯಂತ ಕಿರಿಯ ವಯಸ್ಸಿನ, ರಾಜಕೀಯ ಕೈದಿಯನ್ನಾಗಿ ಇಟ್ಟುಕೊಂಡಿರುವ ಪಂಚೆನ್ ಲಾಮಾ ಗೆಂಡುನ್ ಚೋಯ್ಕಿ ಅವರನ್ನು ಬಿಡುಗಡೆಗೊಳಿಸಲು ಸಂಯುಕ್ತ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಧ್ಯಸ್ಥಿಕೆ ನಡೆದರೂ ಚೀನಾ ಸರ್ಕಾರ ಪಂಚೆನ್ ಲಾಮಾ ಅವರ ಬಗ್ಗೆ ಯಾವುದೇ ಸುಳಿವು ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಅವಧಿಯಲ್ಲಿ ಲಾಮಾ ಅವರು ಧಾರ್ಮಿಕ ಹಾಗೂ ಟಿಬೆಟ್ ಬೌದ್ಧ ಧರ್ಮಿಯ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಚೀನಾ ಸರ್ಕಾರ ಕೂಡಲೇ ಪಂಚೆನ್ ಲಾಮಾ ಅವರ ಇರುವಿಕೆ ಹಾಗೂ ಧಾರ್ಮಿಕ ಶಿಕ್ಷಣದ ಬಗ್ಗೆ ಖಾತ್ರಿ ಪಡಿಸಬೇಕು. ಅವರನ್ನು ಕೂಡಲೇ ಬಿಡುಗಡೆಗೊಳಿಸಿ, ಸಹಜ ಜೀವನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮೂಲಕ ವಿಶ್ವಸಂಸ್ಥೆಗೆ ಮನವಿ ಸಲ್ಲಿಸಿದರು.
ಮುಖಂಡರಾದ ತೆಂಜಿನ್ ಡೋಲ್ಮಾ, ಸಂಘಟನೆಯ ಇನ್ನಿತರ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.