ಕಲಬುರಗಿ: ಭೀಮಾ ನದಿ ತೀರದ ಜೇವರ್ಗಿ ತಾಲೂಕಿನ ಕೆಲ ಹಳ್ಳಿಗಳ ಅಡವಿಯಲ್ಲಿ ಮೂರ್ನಾಲ್ಕು ದಿನಗಳಿಂದ ಓಡಾಡುತ್ತಿರುವ ಚಿರತೆ ಮೂರು ಹಸುಗಳನ್ನು ಬಲಿ ಪಡೆದಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಹಂಚಿನಾಳ (ಎಸ್.ಎನ್), ಅಂಕಲಗಾ, ಬೋಸಗಾ (ಬಿ) ಗ್ರಾಮಗಳ ಹೊಲಗಳಲ್ಲಿ ಮೇಯಲು ಹೋಗಿದ್ದ ಆಕಳುಗಳ ಮೇಲೆ ಚಿರತೆ ದಾಳಿ ಮಾಡಿ ಕೊಂದಿದ್ದು, ಹೆಜ್ಜೆಗುರುತುಗಳು ಚಿರತೆಯದ್ದೇ ಎಂದು ಅರಣ್ಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಮೂರು ಗ್ರಾಮಗಳ ಸೀಮಾಂತರದಲ್ಲಿ ಚಿರತೆ ಕಾಣಿಸಿಕೊಂಡು ನದಿ ತೀರದ ದಟ್ಟನೆಯ ಗಿಡಗಳಲ್ಲಿ ಮರೆಯಾಗುತ್ತಿದೆ. ಚಿರತೆ ದಾಳಿ ವಿಷಯ ಅರಿಯುತ್ತಲೇ ದೌಡಾಯಿಸಿದ ಅರಣ್ಯಾಧಿಕಾರಿಗಳು, ಹಸುಗಳು ಸತ್ತು ಬಿದ್ದ ಸ್ಥಳದ ಸುತ್ತ ಹೆಜ್ಜೆಗುರುತು ನೋಡಿದ ಬಳಿಕ ಇದು ಚಿರತೆಯದ್ದೇ ಎಂದು ಹೇಳಿದ್ದಾರೆ. ಇದರಿಂದಾಗಿ ಭಯದಲ್ಲಿರುವ ಗ್ರಾಮಸ್ಥರು ಚಿರತೆಯನ್ನು ಬೇಗ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.
ಒಂದೆಡೆ ಕರೊನಾ ಭೀತಿ, ಇನ್ನೊಂದೆಡೆ ಚಿರತೆ ಭಯದಿಂದ ಈ ಹಳ್ಳಿ ಜನರು ಮನೆಯಿಂದ ಹೊರಬರಲು ಹೆದರುವಂತಾಗಿದ್ದು, ಗಾಬರಿಗೊಳ್ಳಬೇಡಿ. ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಅರಣ್ಯಾಧಿಕಾರಿಗಳು ನೀಡಿದ್ದಾರೆ.
ಚಿರತೆ ಜಾಡು ಪತ್ತೆಗೆ ಕ್ಯಾಮರಾ ಟ್ರ್ಯಾಕ್
ಜೇವರ್ಗಿ ತಾಲೂಕಿನ ಮೂರ್ನಾಲ್ಕು ಹಳ್ಳಿಗಳಲ್ಲಿ ಹಸುಗಳನ್ನು ಬಲಿ ಪಡೆದಿರುವ ಚಿರತೆ ಸೆರೆ ಹಿಡಿಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಎಂ.ವಾನತಿ ಹೇಳಿದ್ದಾರೆ. ಚಿರತೆ ಜಾಡು ಹಿಡಿಯಲು ಆ ಪ್ರದೇಶದಲ್ಲಿ ಕ್ಯಾಮರಾ ಟ್ರ್ಯಾಕ್ ಅಳವಡಿಸಲಾಗುವುದು. ಅದರಲ್ಲಿ ಸೆರೆಯಾಗುವ ದೃಶ್ಯಗಳನ್ನು ಆಧರಿಸಿ ಸೆರೆ ಹಿಡಿಯಲಾಗುವುದು. ಸೇಡಂ ತಾಲೂಕಿನ ಅರಣ್ಯ ಮತ್ತು ಹತ್ತಿಕುಣಿ ಅರಣ್ಯದಲ್ಲಿ ಚಿರತೆ ಇದ್ದು, ಇದೇ ಈಗ ಭೀಮಾ ನದಿ ತೀರಕ್ಕೆ ಹೋಗಿರುವ ಸಾಧ್ಯತೆ ಇದೆ. ಅಲ್ಲದೆ ಚಿರತೆ ಬಹುದಿನ ಒಂದೇ ಕಡೆ ಇರುವುದಿಲ್ಲ. ಕ್ಯಾಮರಾ ಟಾ್ರೃಕ್ ಹಾಕಿದರೆ ಜಾಡು ಪತ್ತೆಯಾಗುತ್ತದೆ ಎಂದು ವಾನತಿ ವಿಜಯವಾಣಿಗೆ ತಿಳಿಸಿದ್ದಾರೆ.
ಜೇವರ್ಗಿ ತಾಲೂಕಿನಲ್ಲಿ ಚಿರತೆ ಕಾಣಿಸಿಕೊಂಡಿದ್ದಕ್ಕೆ ಜನರು ಆತಂಕಪಡಬಾರದು. ಹಿಡಿಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಚಿರತೆ ಒಂದೇ ಕಡೆ ಇರಲ್ಲ. ಬೇರೆಡೆ ಹೋಗಿರುವ ಸಾಧ್ಯತೆ ಇರುತ್ತದೆ. ಚಿರತೆ ದಾಳಿಗೆ ಬಲಿಯಾಗಿರುವ ಹಸುಗಳ ಮಾಲೀಕರಿಗೆ ಅರಣ್ಯ ಇಲಾಖೆ ನಿಯಮದಂತೆ ಸೂಕ್ತ ಪರಿಹಾರ ನೀಡಲಿದೆ.
| ಎಂ.ವಾನತಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕಲಬುರಗಿ