ಶಿಕಾರಿಪುರ: ತಿಮ್ಲಾಪುರ, ದೂಪದಹಳ್ಳಿ, ಸುತ್ತಮುತ್ತ ಪ್ರದೇಶದಲ್ಲಿ ಚಿರತೆ ಕಂಡುಬಂದಿದೆ ಎನ್ನಲಾಗಿದ್ದು, ಚಿರತೆ ಸೆರೆಗೆ ಆರ್‌ಎಫ್‌ಒ ರಾಘವೇಂದ್ರ ನೇತೃತ್ವದಲ್ಲಿ ಫಾರೆಸ್ಟರ್ ಅಮಿತ್, ಅಂಬರೀಷ್ ಮತ್ತು ಸಿಬ್ಬಂದಿ ತಿಮ್ಲಾಪುರದ ಬಳಿ ಬೋನು ಇರಿಸಿ ನಿಗಾ ವಹಿಸಿದ್ದಾರೆ. ಹೊನ್ನಾಳಿ ತಾಲೂಕಿನ ಪಾಲೇನಹಳ್ಳಿಯಲ್ಲಿ ಮಹಿಳೆಯೋರ್ವರ ಮೇಲೆ ಚಿರತೆ ದಾಳಿ ನಡೆಸಿದ ಬಳಿಕ, ಸ್ಥಳೀಯರಲ್ಲಿ ಆತಂಕ ಶುರುವಾಗಿದೆ. ಅಲ್ಲದೆ ಕೆಲ ದಿನಗಳ ಹಿಂದೆ ಶ್ರೀ ಭ್ರಾಂತೇಶ್ ಪಾರ್ಕ್‌ನಲ್ಲಿ ಮಹಿಳೆಯೊಬ್ಬರು ಚಿರತೆ ನೋಡಿದ್ದರು ಎಂಬ ಸುದ್ದಿ ವೈರಲ್ ಆಗಿತ್ತು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಚಿರತೆ ಹೆಜ್ಜೆ ಗುರುತು ಹಾಗೂ ಚಲನವಲನಗಳ ಬಗ್ಗೆ ಪರಿಶೀಲನೆ ನಡೆಸಿದ್ದರು. ಹೊಲ ಗದ್ದೆಗಳ ಬದು, ಬಯಲು, ಕಾಡಲ್ಲಿ ಎತ್ತರಕ್ಕೆ ಹುಲ್ಲು ಬೆಳೆದಿದೆ. ಇದರಿಂದಾಗಿ ಹೊಲ ಗದ್ದೆಗಳಿಗೆ ಹೋಗುವ ಮತ್ತು ಹುಲ್ಲು ಕೊಯ್ಯಲು ತೆರಳುವ ರೈತರಲ್ಲಿ ಚಿರತೆ ಭೀತಿ ಆವರಿಸಿದೆ.
ಚಿರತೆ ನಿಖರವಾಗಿ ಯಾರ ಕಣ್ಣಿಗೂ ಕಂಡಿಲ್ಲ. ಕಳೆದ ಹದಿನೈದು ದಿನಗಳಿಂದ ಅಲ್ಲಿದೆ, ಇಲ್ಲಿದೆ ಎಂದು ನಮ್ಮ ಇಲಾಖೆಗೆ ಫೋನ್‌ಗಳು ಬರುತ್ತಲೇ ಇವೆ. ಚಿರತೆಯ ಇರುವಿಕೆಯ ಬಗ್ಗೆ ಹೆಜ್ಜೆ ಗುರುತಾಗಲಿ, ಯಾವುದೆ ಕುರುವಾಗಲಿ ನಮಗೆ ಕಂಡು ಬಂದಿಲ್ಲ. ಆದಾಗ್ಯೂ ಚಿರತೆ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ. ಕೆಲವು ಕಡೆಗಳಲ್ಲಿ ಗಸ್ತು ನಡೆಸಲಾಗುತ್ತಿದೆ. ತಿಮ್ಲಾಪುರದ ಬಳಿ ಬೋನ್ ಇರಿಸಲಾಗಿದೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಹೊತ್ತಿಗೆ ಅನಗತ್ಯವಾಗಿ ಒಬ್ಬೊಬ್ಬರೇ ಓಡಾಡಬೇಡಿ ಎಂದು ಆರ್‌ಎಫ್‌ಒ ರಾಘವೇಂದ್ರ ತಿಳಿಸಿದ್ದಾರೆ.