ಜಿಲ್ಲೆ

ಚಿರತೆ ಹಾವಳಿ ನಿಯಂತ್ರಣಕ್ಕೆ ಕ್ರಮ

ಮದ್ದೂರು: ತಾಲೂಕಿನ ಆತಗೂರು ಹೋಬಳಿಯಲ್ಲಿ ಚಿರತೆಗಳ ಹಾವಳಿ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಭರವಸೆ ನೀಡಿದರು.


ತಾಲೂಕಿನ ಚಿಕ್ಕಅಂಕನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪಾಲಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಸರ್ಕಾರ ಹಾಗೂ ಸಂಬಂಧಿಸಿದ ಸಚಿವರ ಗಮನಕ್ಕೆ ತಂದು ಚಿರತೆಗಳನ್ನು ನಿಯಂತ್ರಿಸಲಾಗುವುದು ಎಂದು ಭರವಸೆ ನೀಡಿದರು.


ಶಾಲೆ ಆರಂಭವಾಗಿ ಹಲವು ದಿನಗಳು ಕಳೆದರೂ ಚಿರತೆ ಭೀತಿಯಿಂದ ವಿದ್ಯಾರ್ಥಿಗಳು ಶಾಲೆಯತ್ತ ಹೆಜ್ಜೆ ಹಾಕದಿರುವುದರಿಂದ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಪಾಲಕರು ಹಾಗೂ ಗ್ರಾಮಸ್ಥರು ಶಾಸಕರ ಗಮನ ಸೆಳೆದರು.


ಎರಡು ವರ್ಷಗಳಿಂದ ಈಚೆಗೆ ಚಿಕ್ಕ ಅಂಕನಹಳ್ಳಿ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿದ್ದು, ಈಗಾಗಲೇ 6 ಚಿರತೆಗಳನ್ನು ಸೆರೆ ಹಿಡಿದು ಬೇರೆ ಕಡೆಗೆ ಬಿಡಲಾಗಿದೆ. ನಂತರ, ಚಿರತೆಗಳನ್ನು ಸೆರೆ ಹಿಡಿಯಲು ಅಧಿಕಾರಿಗಳು ಸೂಕ್ತ ಕ್ರಮವಹಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.


ಸಮಸ್ಯೆಗಳನ್ನು ಆಲಿಸಿದ ಶಾಸಕ ಉದಯ್ ಮಾತನಾಡಿ, ಚಿರತೆ ಸೆರೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು, ಪಾಲಕರು ಆತಂಕಪಡದಂತೆ ಧೈರ್ಯ ತುಂಬಿದರು. ಗ್ರಾಮದ ಮುಖಂಡರಾದ ಶಂಕರ್, ಧರ್ಮ, ಭಾಗ್ಯಮ್ಮ ರಾಜು, ವಿದ್ಯಾರ್ಥಿಗಳು ಇದ್ದರು.