ಜಿಲ್ಲೆ

ಚಿರತೆ ಬಂತು ಚಿರತೆ..., ಕಾಡಂಚಿನ ಗ್ರಾಮಗಳಲ್ಲಿ ಭೀತಿ, ಸೆರೆ ಹಿಡಿಯಲು ಅರಣ್ಯ ಇಲಾಖೆ ಕಸರತ್ತು

ಬೆಂಗಳೂರು ಗ್ರಾಮಾಂತರ: ನಾಲ್ಕೈದು ತಿಂಗಳಿಂದೀಚೆಗೆ ಜಿಲ್ಲೆಯ ಹಲವು ಕಡೆಗಳಲ್ಲಿ ಚಿರತೆ ಹಾವಳಿ ಹೆಚ್ಚುತ್ತಿದೆ. ಕಾಡಂಚಿನ ಗ್ರಾಮಗಳ ರೈತರು ಆತಂಕಗೊಂಡಿದ್ದು, ನಾಯಿ, ಕುರಿ, ಕೋಳಿ ಹೊತ್ತೊಯ್ಯುತ್ತಿರುವ ಚಿರತೆಗಳು ಮನುಷ್ಯರ ಮೇಲೂ ದಾಳಿ ಮಾಡಬಹುದೆಂಬ ಭೀತಿ ಎದುರಾಗಿದೆ.

ತಾಲೂಕು ವ್ಯಾಪ್ತಿಯ ಬೆಟ್ಟ-ಗುಡ್ಡ ಪ್ರದೇಶಗಳಲ್ಲಿ ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಚಿರತೆಗಳ ಸಂಚಾರ ಹಾಗೂ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುವುದು ಸಾಮಾನ್ಯವಾಗಿದೆ. ಅದೃಷ್ಟವಶಾತ್ ಇದುವರೆಗೆ ಎಲ್ಲಿಯೂ ಮನುಷ್ಯರ ಮೇಲೆ ದಾಳಿ ನಡೆಸಿಲ್ಲ. ಆದರೂ ರೈತಾಪಿ ಜನರು ಹೊಲಗದ್ದೆಯತ್ತ ಓಡಾಡಲು ಭಯಪಡುತ್ತಿದ್ದಾರೆ.

ಅಲ್ಲಿ ನೋಡಿದೆ ಇಲ್ಲಿ ನೋಡಿದೆ: ದೊಡ್ಡಬಳ್ಳಾಪುರ ತಾಲೂಕಿನ ಆವತಿ, ತೂಬಗೆರೆ, ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಸೇರಿ ನಂದಿಬೆಟ್ಟದ ಸುತ್ತಮುತ್ತಲಿನ ಕಾಡಂಚಿನ ಗ್ರಾಮಗಳಲ್ಲಿ ಚಿರತೆಗಳ ಸಂಚಾರದ ಬಗ್ಗೆ ಸಾರ್ವಜನಿಕರು ಅರಣ್ಯ ಇಲಾಖೆಗೆ ದೂರು ನೀಡುತ್ತಲೇ ಬಂದಿದ್ದಾರೆ. ಆದರೆ ಇದುವರೆಗೆ ಚಿರತೆಯನ್ನು ಪ್ರತ್ಯಕ್ಷವಾಗಿ ಕಂಡ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಯಾರೂ ಸಮರ್ಪಕವಾಗಿ ಮಾಹಿತಿ ನೀಡುತ್ತಿಲ್ಲ ಎನ್ನಲಾಗಿದೆ. ಬೆಟ್ಟದ ತುದಿಯಲ್ಲಿ ನೋಡಿದೆ, ವಾಹನದಲ್ಲಿ ಬರುವಾಗ ರಸ್ತೆ ದಾಟಿ ಹೋದವು... ಹೀಗೆ ಅಂತೆ ಕಂತೆಗಳೇ ಹೆಚ್ಚಾಗಿದೆ. ಕೆಲವು ಕಡೆಗಳಲ್ಲಿ ಕುರಿ ಮೇಕೆಗಳನ್ನು ಎಳೆದೊಯ್ದ ನಿದರ್ಶನಗಳಿದ್ದರೂ ಅದು ಚಿರತೆಯದ್ದೇ ಕೃತ್ಯ ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ ಎನ್ನಲಾಗಿದೆ. ಇದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಗೊಂದಲಕ್ಕೆ ಸಿಲುಕಿದ್ದಾರೆ.

ಬೋನಿನತ್ತ ಸುಳಿಯಲ್ಲ: ಸಾರ್ವಜನಿಕರು ಹೇಳಿದ ಜಾಗಗಳಲ್ಲಿ ಅರಣ್ಯ ಇಲಾಖೆಯಿಂದ ಬೋನು ಇಟ್ಟು ಚಿರತೆ ಸೆರೆಗೆ ಕಾರ್ಯಾಚರಣೆ ರೂಪಿಸಿದರೂ ಪ್ರಯೋಜನವಾಗಿಲ್ಲ. ಚಿರತೆಗಳು ಬೋನಿನತ್ತ ಸುಳಿಯುತ್ತಿಲ್ಲ. ಅರಣ್ಯ ಇಲಾಖೆಯೂ ಕೈಚೆಲ್ಲಿ ಕುಳಿತಿದೆ, ಏತನ್ಮಧ್ಯೆ ಚಿರತೆ ಭೀತಿಯಲ್ಲೇ ರೈತರು ದಿನದೂಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಚಿರತೆ ಭೀತಿಯಿಂದ ಕಾಡಂಚಿನ ಗ್ರಾಮಗಳಲ್ಲಿ ಕೋಳಿ ಸಾಕಣೆ, ಕುರಿ ಮೇಕೆ ಸಾಕಣೆಯೂ ದಿನೇದಿನೆ ಕಡಿಮೆಯಾಗತೊಡಗಿದೆ, ಹೈನುಗಾರಿಕೆ ಮೇಲೆಯೂ ಇದು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎನ್ನಲಾಗಿದೆ.

ಅರಣ್ಯ ರಕ್ಷಣೆಗೆ ಗಿಮಿಕ್: ಕಾಡಂಚಿನ ಗ್ರಾಮಗಳಲ್ಲಿನ ರೈತರು ಕೃಷಿ ಭೂಮಿ ವಿಸ್ತರಿಸುವ ನಿಟ್ಟಿನಲ್ಲಿ ಕಾಡು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ, ಕಾಡಿನಲ್ಲಿ ಅರಣ್ಯ ಇಲಾಖೆ ನೆಡುವ ಸಸಿಗಳು ದನಕರುಗಳ ಪಾಲಾಗುತ್ತಿವೆ, ಇವುಗಳ ರಕ್ಷಣೆಗಾಗಿ ಇಲಾಖೆಯೇ ಬೇರೆ ಕಡೆಗಳಲ್ಲಿ ಸೆರೆ ಹಿಡಿದ ಚಿರತೆಗಳನ್ನು ಇಂಥ ಕಡೆ ಬಿಟ್ಟುಹೋಗುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಮತ್ತೊಂದು ಕಡೆ ಅರಣ್ಯ ಒತ್ತುವರಿಯಿಂದಾಗಿ ಆಹಾರ ಸಿಗದೆ ಚಿರತೆಗಳು ಕಾಡಂಚಿನ ಗ್ರಾಮಗಳತ್ತ ಹೆಜ್ಜೆ ಹಾಕುತ್ತಿವೆ ಎಂಬ ಮಾತು ಚಾಲ್ತಿಯಲ್ಲಿದೆ.

ಚನ್ನರಾಯಪಟ್ಟಣದಲ್ಲಿ ಚಿರತೆ ಹೆಜ್ಜೆ: ನ.12ರಂದು ಮುಂಜಾನೆ ಚನ್ನರಾಯಪಟ್ಟಣ ಹೋಬಳಿ ನಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ ಎರಡು ಚಿರತೆಗಳು ರಸ್ತೆ ದಾಟುತ್ತಿದ್ದ ಬಗ್ಗೆ ವಾಹನ ಸವಾರರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ವಲಯ ಅರಣ್ಯ ಸಂರಕ್ಷಣಾಧಿಕಾರಿ ಧನಲಕ್ಷ್ಮೀ ಹಾಗೂ ಸಿಬ್ಬಂದಿ ಪರಿಶೀಲಿಸಿದ್ದಾರೆ, ಕಾಡಂಚಿನಲ್ಲಿ ಪಟಾಕಿ ಸಿಡಿಸಿ ಸದ್ದು ಮಾಡಲಾಗಿದೆ, ಎಲ್ಲಿಯೂ ಚಿರತೆ ಸುಳಿವು ಕಂಡುಬಂದಿಲ್ಲ.

ಸಾರ್ವಜನಿಕರ ಮಾಹಿತಿ ಮೇರೆಗೆ ನಲ್ಲೂರು ಗ್ರಾಪಂ ವ್ಯಾಪ್ತಿಯ ಕಾಡಿನಂಚಿನಲ್ಲಿ ಚಿರತೆ ಸೆರೆಗೆ ಕಾರ್ಯಾಚರಣೆ ರೂಪಿಸಲಾಗಿದೆ. ಕೆಲವು ಕಡೆಗಳಲ್ಲಿ ಬೋನುಗಳನ್ನು ಇಡಲು ವ್ಯವಸ್ಥೆ ಮಾಡಲಾಗಿದೆ, ಎಲ್ಲಿಯೂ ಚಿರತೆ ಸುಳಿವು ಕಂಡುಬಂದಿಲ್ಲ. ಕಾರ್ಯಾಚರಣೆ ಮುಂದುವರಿಸಲಾಗಿದೆ. ಧನಲಕ್ಷ್ಮೀ, ವಲಯ ಅರಣ್ಯ ಸಂರಕ್ಷಣಾಧಿಕಾರಿ, ದೇವನಹಳ್ಳಿ