ಚಿಗತಾಪುರ ಗ್ರಾಮದ ವಿಜಯ್ ಅವರ ಜಮೀನನಲ್ಲಿ ಚಿರತೆ ಕೊಂದು ಹಾಕಿರುವ ಕರುವನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ರೈತರು ವೀಕ್ಷಿಸಿದರು. 
ಜಿಲ್ಲೆ

ಚಿರತೆ ದಾಳಿಗೆ ಕರು ಬಲಿ

ಹನೂರು: ತಾಲೂಕಿನ ಚಿಗತಾಪುರ ಗ್ರಾಮ ಸಮೀಪದ ಜಮೀನೊಂದರಲ್ಲಿ ಭಾನುವಾರ ರಾತ್ರಿ ಚಿರತೆಯೊಂದು ದಾಳಿ ನಡೆಸಿ ಕರುವನ್ನು ಕೊಂದು ಹಾಕಿದೆ.

ಗ್ರಾಮದ ವಿಜಯ್ ಎಂಬವರು ಹೊರವಲಯದ ಕರಿಗುಡ್ಡೆ ಅರಣ್ಯ ಪ್ರದೇಶದ ಅಂಚಿನಲ್ಲಿ ಜಮೀನನ್ನು ಹೊಂದಿದ್ದು, ಕೊಟ್ಟಿಗೆಯಲ್ಲಿ 3 ಹಸುಗಳೊಂದಿಗೆ ಕರುವನ್ನು ಕಟ್ಟಿ ಹಾಕಿದ್ದರು. ರಾತ್ರಿ ಸುಮಾರು 11.30ರ ವೇಳೆಯಲ್ಲಿ ಮಳೆ ಆರಂಭವಾದ ಹಿನ್ನೆಲೆಯಲ್ಲಿ ವಿಜಯ್ ಮನೆಯಿಂದ ಹೊರಗೆ ಬಂದು ನೋಡಿದಾಗ ಕರು ಕಣ್ಮರೆಯಾಗಿತ್ತು. ಬೆಳಗ್ಗೆ ಜಮೀನಿನ ಒಳಗಡೆ ಚಿರತೆ ಕರುವನ್ನು ಕೊಂದು ತಿಂದು ಹಾಕಿದ್ದು, ಅಲ್ಲಲ್ಲಿ ಹೆಜ್ಜೆ ಗುರುತುಗಳು ಪತ್ತೆಯಾದವು. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿಶೀಲಿಸಿ ಕರುವಿನ ಮರಣೋತ್ತರ ಪರೀಕ್ಷೆ ನಡೆಸಿ ಪ್ರಕರಣ ದಾಖಲಿಸಿಕೊಂಡರು.

ಚಿರತೆ ಸೆರೆಗೆ ಒತ್ತಾಯ: ಈ ವೇಳೆ ರೈತರು ಮಾತನಾಡಿ, ಕರಿಗುಡ್ಡೆ ಅರಣ್ಯ ಪ್ರದೇಶದಲ್ಲಿನ ಚಿರತೆಯೊಂದು ಕಳೆದ ನಾಲ್ಕೈದು ತಿಂಗಳಿನಿಂದ ಜನರ ಕಣ್ಣಿಗೆ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದು, ಭಯಗೊಳಿಸಿದೆ. ಕಳೆದ 2 ತಿಂಗಳ ಹಿಂದೆ ಈ ಭಾಗದ ತೋಟದ ಮನೆಯ ಶಕ್ತಿ ಎಂಬವರಿಗೆ ಸೇರಿದ 2 ಮೇಕೆಗಳನ್ನು ಬಲಿ ತೆಗೆದುಕೊಂಡಿತ್ತು. ಇದೀಗ ಕರು ಬಲಿಯಾಗಿದೆ. ಇದರಿಂದ ತೋಟದ ನಿವಾಸಿಗಳಲ್ಲಿ ರಾತ್ರಿ ವೇಳೆ ಮತ್ತಷ್ಟು ಆತಂಕ ಶುರುವಾಗಿದೆ.

ಹಾಗಾಗಿ ಬೋನು ಇಡುವುದರ ಮೂಲಕ ಚಿರತೆಯನ್ನು ಸೆರೆ ಹಿಡಿಯಬೇಕು. ಜತೆಗೆ ಈ ಭಾಗದಲ್ಲಿ ಹಂದಿಗಳ ಕಾಟ ವಿಪರೀತವಾಗಿದ್ದು, ಜಮೀನಿಗೆ ನುಗ್ಗಿ ಫಸಲನ್ನು ನಾಶಪಡಿಸುತ್ತಿವೆ. ಆದ್ದರಿಂದ ಹಂದಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದರು. ರಾತ್ರಿ ವೇಳೆ ಸಿಬ್ಬಂದಿಯನ್ನು ನಿಯೋಜಿಸುವುದರ ಮೂಲಕ ಅಗತ್ಯ ಕ್ರಮವಹಿಸಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದರು.