ಜಿಲ್ಲೆ

ಚಿರತೆ ದಾಳಿಗೆ 2 ಕುರಿಗಳು ಬಲಿ

ಹನೂರು: ತಾಲೂಕಿನ ಭೈರನತ್ತ ಗ್ರಾಮದಲ್ಲಿ ಗುರುವಾರ ತಡರಾತ್ರಿ ಚಿರತೆ ದಾಳಿಗೆ 2 ಕುರಿಗಳು ಬಲಿಯಾಗಿವೆ.


ಗ್ರಾಮದ ಪೊನ್ನುಸ್ವಾಮಿ ಎಂಬವರು ಜಮೀನಿನ ಶೆಡ್‌ನಲ್ಲಿ ಕುರಿಗಳನ್ನು ಕಟ್ಟಿ ಹಾಕಿದ್ದರು. ರಾತ್ರಿ ಸುಮಾರು 1 ಗಂಟೆಯಲ್ಲಿ ಕುರಿಗಳ ಚೀರಾಟದ ಶಬ್ದ ಕೇಳಿ ಹೊರ ಬಂದು ನೋಡಿದಾಗ ಚಿರತೆ ದಾಳಿಗೆ 2 ಕುರಿಗಳು ಮೃತಪಟ್ಟಿದ್ದವು.


ಸುದ್ದಿ ತಿಳಿದು ಶುಕ್ರವಾರ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲಿಸಿ ಮೃತಪಟ್ಟ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿ ಇಲಾಖೆಯಿಂದ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು. ಈ ವೇಳೆ ಗ್ರಾಮಸ್ಥರು ಚಿರತೆ ದಾಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದರು.


ರಾತ್ರಿ ವೇಳೆ ಸಿಬ್ಬಂದಿ ನಿಯೋಜಿಸುವುದರ ಮೂಲಕ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.