ಮೈಸೂರು: ಚಿರತೆ ಹಾವಳಿ ತಡೆಗಟ್ಟಲು ಜಾರಿಗೆ ಬಂದಿರುವ ಕಾರ್ಯಪಡೆ ಇನ್ನೊಂದು ವಾರದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ(ಡಿಸಿಎಫ್) ಕೆ.ಎನ್.ಬಸವರಾಜು ತಿಳಿಸಿದರು.
58 ಸಿಬ್ಬಂದಿ ಒಳಗೊಂಡ ಚಿರತೆ ಕಾರ್ಯಪಡೆಯನ್ನು ರಚನೆ ಮಾಡಿ ರಾಜ್ಯ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಎಸಿಎಫ್, ಆರ್‌ಎಫ್‌ಎ ಶ್ರೇಣಿಯ ಅಧಿಕಾರಿಗಳನ್ನು ಸರ್ಕಾರ ನಿಯೋಜಿಸಬೇಕಿದೆ. ಗುತ್ತಿಗೆ ಆಧಾರದಲ್ಲಿ 40 ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಅಗತ್ಯ ಉಪಕರಣ, ವಾಹನ ಸೌಲಭ್ಯ ಕಲ್ಪಿಸಲಾಗುವುದು. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾರ್ಯಪಡೆ ಕೆಲಸ ಶುರು ಆಗಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದು ಚಿರತೆ ಹಾವಳಿ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕಾರ್ಯನಿರ್ವಹಿಸಲಿದೆ. 28 ಗ್ರಾಮಗಳಲ್ಲಿ ಚಿರತೆ ಹಾವಳಿ ಇರುವುದನ್ನು ಗುರುತಿಸಲಾಗಿದೆ ಎಂದರು.
ಮೈಸೂರು ಅರಣ್ಯ ವೃತ್ತ ವ್ಯಾಪ್ತಿಯ ತಿ.ನರಸೀಪುರ, ಮೈಸೂರು, ಕೆ.ಆರ್.ಪೇಟೆ ಮತ್ತು ಮಂಡ್ಯ ತಾಲೂಕುಗಳಲ್ಲಿ ಬೇಸ್ ಕ್ಯಾಂಪ್ ಇರಲಿದೆ. ಪ್ರತಿ ತಂಡವೂ ಚಿರತೆ ಹಾವಳಿ ಇರುವ ಗ್ರಾಮಗಳಲ್ಲಿ ಗಸ್ತು ತಿರುಗುವುದು. ಜನವಸತಿ, ಕಬ್ಬು ಬೆಳೆ ಇರುವ ಪ್ರದೇಶಗಳಲ್ಲಿ ಚಿರತೆ ಇರುವಿಕೆ ಪತ್ತೆ ಹಚ್ಚಿ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದರು.
ಕಳೆದ ಮೂರು ವರ್ಷಗಳಲ್ಲಿ 65 ಚಿರತೆ ಸೆರೆ ಹಿಡಿಯಲಾಗಿದೆ. ಜನವರಿಯಲ್ಲಿ 4 ಚಿರತೆ ಸೆರೆ ಹಿಡಿದು ಮೈಕ್ರೋ ಚಿಪ್ ಅಳವಡಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟು ಅವುಗಳ ಮೇಲೆ ನಿಗಾ ವಹಿಸಲಾಗಿದೆ ಎಂದರು.
ತಿ.ನರಸೀಪುರದಲ್ಲಿ ಚಿರತೆ ದಾಳಿಯಿಂದ ನಾಲ್ವರು ಮೃತಪಟ್ಟ ಬಳಿಕ ಜನರು ಭಯಭೀತರಾಗಿದ್ದಾರೆ. ಭಯ ನಿವಾರಣೆಗೆ ಹಲವು ಕ್ರಮ ಕೈಗೊಳ್ಳಲಾಗಿದೆ. ಶಾಲಾ ಮಕ್ಕಳಿಗೆ ಅರಿವು, ಚಿರತೆ ಪತ್ತೆಯಾದಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಕುರಿತ ಭಿತ್ತಿಪತ್ರ ಹಂಚಲಾಗುತ್ತದೆ ಎಂದು ವಿವರಿಸಿದರು.
3-4 ದಿನಗಳಲ್ಲಿ ವರದಿ:
ತಿ.ನರಸೀಪುರ ತಾಲೂಕಿನಲ್ಲಿ ಚಿರತೆಯಿಂದ ನಾಲ್ವರು ಮೃತಪಟ್ಟಿರುವ ಬಗ್ಗೆ ದೃಢೀಕರಿಸಲು ಕೆಲವು ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್)ಕ್ಕೆ ಕಳುಹಿಸಲಾಗಿದ್ದು, ಮೂರ‌್ನಾಲ್ಕು ದಿನಗಳಲ್ಲಿ ವರದಿ ಬರಲಿದೆ ಎಂದು ಕೆ.ಎನ್.ಬಸವರಾಜುತಿಳಿಸಿದರು.
11 ವರ್ಷದ ಜಯಂತ ಎಂಬ ಬಾಲಕನ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಅಲ್ಲದೆ, ಚಿರತೆ, ಹುಲಿ ತಲೆ ತಿನ್ನುವುದಿಲ್ಲ. ಈ ಪ್ರಕರಣಗಳಲ್ಲಿ ಚಿರತೆ ಬಹಳ ಅಸ್ವಾಭಾವಿಕವಾಗಿ ವರ್ತಿಸಿದೆ. ಮೇಘನಾ, ಸಿದ್ದಮ್ಮ ಶವ ಸಿಕ್ಕ ಸ್ಥಳದಲ್ಲಿ ಕೆಲ ಸ್ಯಾಂಪಲ್, ಡಿಎನ್‌ಎಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದೇವೆ. ಬಳಿಕ ನಿಖರ ಮಾಹಿತಿ ತಿಳಿದು ಬರಲಿದೆ ಎಂದರು.