ಆಳಂದ: ಗಡಿ ಭಾಗದ ಬಂಗರಗಾ ಗ್ರಾಮದ ಹತ್ತಿರ ಚಿರತೆ ಹೆಜ್ಜೆಗುರುತು ದೃಢ ಪಟ್ಟಿದ್ದು ನಿಜ. ಆದರೆ ಚಿರತೆ ಕಂಡರೆ ಸ್ಥಳೀಯರು ತಕ್ಷಣ ಮಾಹಿತಿ ನೀಡುವಂತೆ ಆರ್‌ಎಫ್‌ಒ ಜಗನ್ನಾಥ ಕೋರಳ್ಳಿ ಮನವಿ ಮಾಡಿದ್ದಾರೆ.
ಚಿರತೆ ಹೆಜ್ಜೆಗುರುತು ಪತ್ತೆಯಾಗುತ್ತಲೇ ಸೆರೆ ಹಿಡಿಯಲು ಬೋನು ಅಳವಡಿಸಿದ್ದೇವೆ. ವಾರದ ಹಿಂದೆ ಸಾಲೇಗಾಂವ್ ಹತ್ತಿರ ನಾಯಿ ಕಾಲು ಪತ್ತೆಯಾಗಿತ್ತು. ಇಲ್ಲಿವರೆಗೆ ಯಾವುದೇ ಜೀವ ಹಾನಿಯಾಗಿಲ್ಲ. ಚಿರತೆ ಸೆರೆಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜನ ದೂರವಾಣಿ ಕರೆ ಮಾಡಿ ಪೊಳ್ಳು ಮಾಹಿತಿ ನೀಡುತ್ತಿದ್ದು, ಚಿರತೆ ಓಡಾಡುವ ಯಾವುದೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಭಯ ಮೂಡಿಸುವುದು ಸರಿಯಲ್ಲ. ಚಿರತೆ ಇರುವುದು ಖಚಿತಪಟ್ಟಿದೆ. ಅಧಿಕಾರಿ ಮತ್ತು ಸಿಬ್ಬಂದಿ ಶೋಧ ಕಾರ್ಯದಲ್ಲಿ ತೊಡಗಿದ್ದು, ಖಜೂರಿ ವಲಯದ ಗ್ರಾಮಸ್ಥರು ಜಾಗ್ರತೆಯಿಂದ ಇರಲು ಹೇಳಿದ್ದಾರೆ.