ಮೈಸೂರು: ತಿ.ನರಸೀಪುರ ತಾಲೂಕಿನ ಎಸ್.ಕೆಬ್ಬೆಹುಂಡಿ ಗ್ರಾಮದಲ್ಲಿ ಯುವತಿಯನ್ನು ಬಲಿ ಪಡೆದ ಚಿರತೆಯ ಸೆರೆಗಾಗಿ ಶುಕ್ರವಾರದಿಂದಲೇ ಕಾರ್ಯಾಚರಣೆ ಬಿರುಸುಗೊಳಿಸಲಾಗಿದೆ.
ಚಿರತೆಗೆ ಶೂಟೌಟ್ ಮಾಡಲು ಆದೇಶಿಸಲಾಗಿದ್ದು, ಅದಕ್ಕಾಗಿ ಶೂಟರ್ಸ್ ಬಂದಿದ್ದಾರೆ. ಚಿರತೆ ದಾಳಿಯಿಂದ ಮೃತಪಟ್ಟ ಯುವತಿ ಮೇಘನಾ ಕುಟುಂಬಕ್ಕೆ 7 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.
ಗುರುವಾರ ಸಂಜೆ ವೇಳೆ ಚಿರತೆ ದಾಳಿಯಿಂದ ಮೇಘನಾ(22) ಮೃತಪಟ್ಟಿದ್ದರು. ಮನೆಯ ಹಿತ್ತಲಿಗೆ ತೆರಳಿದ್ದಾಗ ಈ ದಾಳಿ ನಡೆಸಿದ್ದು, ತೀವ್ರ ಗಾಯಗೊಂಡ ಅವರನ್ನು ತಿ.ನರಸೀಪುರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು.
ನಿರಂತರ ದಾಳಿ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಹಾಗೂ ತಾಲೂಕು ಆಡಳಿತ ಕ್ರಮವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಆಸ್ಪತ್ರೆ ಬಳಿ ಗುರುವಾರ ಮಧ್ಯರಾತ್ರಿ 12 ಗಂಟೆ ತನಕವೂ ಪ್ರತಿಭಟನೆ ನಡೆಸಿದ್ದರು.
ಸ್ಥಳಕ್ಕೆ ಸಚಿವರು ಬರಬೇಕು ಎಂದು ಪಟ್ಟು ಹಿಡಿದಿದ್ದ ಗ್ರಾಮಸ್ಥರು, ಈ ವೇಳೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡಿದ್ದರು. ಅಂತಿಮವಾಗಿ ಗ್ರಾಮಸ್ಥರ ಮನವೊಲಿಸುವಲ್ಲಿ ಅಧಿಕಾರಿಗಳು ಯಶಸ್ಸಿಯಾಗಿದ್ದರು.
ಮೃತ ಯುವತಿ ಕುಟುಂಬಕ್ಕೆ 7.5 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಯಿತು. ಸ್ಥಳದಲ್ಲೇ 5 ಲಕ್ಷ ರೂ. ಪರಿಹಾರ ಚೆಕ್ ವಿತರಣೆ ಮಾಡಲಾಯಿತು. ಯುವತಿ ಕುಟುಂಬದ ಒಬ್ಬರಿಗೆ ಹೊರಗುತ್ತಿಗೆ ಆಧಾರದಲ್ಲಿ ಮೇಲೆ ಕೆಲಸ ನೀಡುವುದಾಗಿ, ಪ್ರತಿ ತಿಂಗಳು ಯುವತಿಯ ಕುಟುಂಬಕ್ಕೆ 2 ಸಾವಿರ ರೂ. ಕೊಡುವುದಾಗಿ ಭರವಸೆ ನೀಡಲಾಗಿದೆ.
‘ತಿ.ನರಸೀಪುರ ತಾಲೂಕಿನಲ್ಲಿ ಚಿರತೆ ಸೆರೆ ಕಾರ್ಯಾಚರಣೆಗೆ 15 ತಜ್ಞರ ತಂಡ ನಿಯೋಜಿಸಲಾಗಿದೆ. ಚಿರತೆ ಕಂಡಲ್ಲಿ ಗುಂಡು ಹಾರಿಸಲು ಅನುಮತಿ ನೀಡಲಾಗಿದೆ. ತಾಲೂಕಿನಲ್ಲಿ ಚಿರತೆ ಹಾವಳಿ ತಪ್ಪಿಸಲು ಅಗತ್ಯ ಕ್ರಮ ವಹಿಸಲಾಗುವುದು’ ಎಂದು ಮೈಸೂರು ಡಿಸಿಎಫ್ ಕಮಲಾ ಕರಿಕಾಳನ್ ಭರವಸೆ ನೀಡಿದರು.
ಇದಕ್ಕೆ ಒಪ್ಪಿದ ಗ್ರಾಮಸ್ಥರು ಪ್ರತಿಭಟನೆಯನ್ನು ಕೈಬಿಟ್ಟರು. ಚಿರತೆಯು ಗ್ರಾಮದ ಹೊರವಲಯದ ರಸ್ತೆಯಲ್ಲಿ ಓಡಾಡುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.