ಅರಕಲಗೂಡು: ಪಟ್ಟಣ ಸಮೀಪದ ಹೊನ್ನವಳ್ಳಿ ದೊಡ್ಡಕೊಪ್ಪಲು ಗ್ರಾಮಕ್ಕೆ ಗುರುವಾರ ತಡರಾತ್ರಿ ನುಗ್ಗಿದ ಚಿರತೆ ಎರಡು ಕೋಳಿಗಳನ್ನು ತಿಂದು ನಾಯಿಯ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ.
ಗ್ರಾಮದ ಲೋಕೇಶ್ ಎಂಬುವವರ ಮನೆಯ ಬಳಿ ಕಾಣಿಸಿಕೊಂಡಿರುವ ಚಿರತೆ ಎರಡು ಕೋಳಿಗಳನ್ನು ತಿಂದು ನಾಯಿಯ ಮೇಳೆ ದಾಳಿ ನಡೆಸಿದೆ. ನಾಯಿಯ ಕಿರುಚಾಟದಿಂದ ಎಚ್ಚರಗೊಂಡು ಕಿಟಿಕಿ ತೆರೆದು ನೋಡಿದಾಗ ಚಿರತೆ ನಾಯಿಯನ್ನು ಕಚ್ಚಿ ಹಿಡಿದಿರುವುದು ಕಂಡು ಬಂತು. ಮನೆಯವರೆಲ್ಲಾ ಬೊಬ್ಬೆ ಹೊಡೆದು ಗಲಾಟೆ ಮಾಡಿದಾಗ ಚಿರತೆ ನಾಯಿಯನ್ನು ಬಿಟ್ಟು ಓಡಿ ಹೋಯಿತು. ತೀವ್ರವಾಗಿ ಗಾಯಗೊಂಡಿದ್ದ ನಾಯಿಗೆ ಚಿಕಿತ್ಸೆ ಕೊಡಿಸಿದ್ದು ಚೇತರಿಸಿ ಕೊಳ್ಳುತ್ತಿದೆ ಎಂದು ಮನೆಯೊಡತಿ ಶೋಭಾ ತಿಳಿಸಿದರು.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಉಪ ವಲಯ ಅರಣ್ಯಾಧಿಕಾರಿ ಕೆ.ಎನ್. ಶಂಕರ್ ಚಿರತೆಯ ಸೆರೆಗೆ ಬೋನನ್ನು ಇರಿಸುವುದಾಗಿ ಹೇಳಿದರು. ತಹಶೀಲ್ದಾರ್ ಕೆ.ಆರ್. ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿದ್ದರು.
ಕೆಲ ದಿನಗಳ ಹಿಂದೆ ಯಲಗತವಳ್ಳಿಕೊಪ್ಪಲು ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದ್ದ ಚಿರತೆ ನಾಗೇಶ್ ಎಂಬುವರ ತೋಟದ ಶೆಡ್‌ನಲ್ಲಿ ಇದ್ದ ನಾಯಿ ಹೊತ್ತೊಯ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಇದೀಗ ಹೊನ್ನವಳ್ಳಿ ಗ್ರಾಮದ ಸುತ್ತಮುತ್ತ ಚಿರತೆ ಪ್ರತ್ಯಕ್ಷವಾಗಿದ್ದು ಸೆರೆ ಹಿಡಿಯುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.