ವಿಜಯಪುರ: ಚಿಮ್ಮಲಗಿ ಏತನೀರಾವರಿ ಯೋಜನೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ ಜನಸಾಮಾನ್ಯರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ನಾಗಠಾಣ ಶಾಸಕ ಡಾ.ದೇವಾನಂದ ಚವಾಣ್ ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ಅಂಕಲಗಿ, ಆಹೇರಿ ಮತ್ತಿತರ ಗ್ರಾಮಗಳಲ್ಲಿ ನಡೆಯುತ್ತಿರುವ ಕಾಲುವೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ರೈತರಿಗೆ ತೊಂದರೆಯಾಗದಂತೆ ಕಾಮಗಾರಿ ಕೈಗೊಳ್ಳಬೇಕು. ಸ್ಥಳೀಯರಿಗೆ ಸಮರ್ಪಕವಾಗಿ ನೀರಾವರಿ ಸೌಲಭ್ಯ ಕಲ್ಪಿಸುವ ಮುಂದಾಲೋಚನೆ ಇಟ್ಟುಕೊಂಡು ಕಾಮಗಾರಿ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅಂಕಲಗಿ ಗ್ರಾಮದಲ್ಲಿ ರೈತರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತವಾಗಿತ್ತು. ರೈತರ ಸಮಸ್ಯೆ ಆಲಿಸಿದ ಶಾಸಕ ದೇವಾನಂದ ಅವರು, ರೈತರಿಗೆ ಯೋಜನೆ ಬಗ್ಗೆ ಮನವರಿಕೆ ಮಾಡಿ ಅವರ ಮನವೊಲಿಸಿ ಕಾಮಗಾರಿಗೆ ಸಹಕರಿಸಲು ಕೋರಿದರು. ಅಧಿಕಾರಿಗಳು ಸಹ ರೈತರ ಬೇಡಿಕೆಗಳಿಗೆ ಸ್ಪಂಧಿಸಬೇಕೆಂದು ಸೂಚಿಸಿದರು.
ಅಹೇರಿ ಎಲ್‌ಟಿ ಬಳಿ ಕಾಲುವೆ ಕಾಮಗಾರಿಯಿಂದಾಗಿ ಕೃಷಿ ಹೊಂಡಕ್ಕೆ ಹಾನಿಯಾಗುವ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗುತ್ತಾ ಸಾಗಿತ್ತು. ಆ ಸ್ಥಳಕ್ಕೆ ಭೇಟಿ ನೀಡಿ ಕೃಷಿ ಹೊಂಡಕ್ಕೆ ಸಮಸ್ಯೆಯಾಗದಂತೆ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಒಂದು ವೇಳೆ ಹಾನಿಯಾದರೆ ರೈತರಿಗೆ ಸೂಕ್ತ ಪರಿಹಾರ ಧನ ಮಂಜೂರು ಮಾಡುವಂತೆ ಸೂಚಿಸಿದರು.
ಮುಖಂಡ ಚಂದ್ರಶೇಖರ ಅರಕೇರಿ, ಅಹೇರಿ ಗ್ರಾಪಂ ಅಧ್ಯಕ್ಷ ಬಸವರಾಜ ತೇಲಿ, ಅಪ್ಪು ಶಿವಣಗಿ, ಬಾಬು ಡೋಂಗ್ರಿ, ಬಸು ತಳವಾರ, ಕಲ್ಲಪ್ಪ ಇಂಡಿ, ಮುಕ್ಕಣ್ಣ ಅವಜಿ, ಹೆಗ್ಗಪ್ಪ ಇಂಡಿ, ಶರಣಗೌಡ ಬಿರಾದಾರ, ಸಂಜು ಮಹಾರಾಜರು, ಪೈಗಂಬರ ಮುಲ್ಲಾ, ಮಹಾಂತೇಶ ದೇಶಮುಖ, ಭೀಮರಾಯ ತಳವಾರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಿವಲಾಲ್ ಚವಾಣ್, ರಾಜೇಶ ಚವಾಣ್ ಮತ್ತಿತರರಿದ್ದರು.