ಜಿಲ್ಲೆ

ಚಿಮ್ಮನಹಳ್ಳಿ ದುರ್ಗಾಂಬಿಕಾ ದೇವಿ ಜಾತ್ರೆ ಇಂದು

ಹಗರಿಬೊಮ್ಮನಹಳ್ಳಿ: ಚಿಮ್ಮನಹಳ್ಳಿ ಗ್ರಾಮದ ಹಗರಿ ಹಳ್ಳದ ಮೇಲೆ ನೆಲೆಸಿರುವ ದುರ್ಗಾಂಬಿಕಾ ದೇವಿ, ಮರಿಯಮ್ಮ ದೇವಿ ಹಾಗೂ ಸಮಾದೆಮ್ಮ ದೇವಿ ಜಾತ್ರೋತ್ಸವ ಹಾಗೂ ಹಗರಿ ಬಸವೇಶ್ವರ ರಥೋತ್ಸವ ಫೆ.5ರಂದು ಅದ್ದೂರಿಯಾಗಿ ಜರುಗಲಿದೆ.

ಮಂಗಳವಾರ ಸಿಡಿಸ್ತಂಭ ಉತ್ಸವ ನಡೆದಿದ್ದು, ಬುಧವಾರ ಬೆಳಗ್ಗೆ ಗಂಗೆಪೂಜೆ, ದೇವಿಗೆ ಹುರಳಿ ಹೋಳಿಗೆ ನೈವೇದ್ಯ, ಅಗ್ನಿಕುಂಡ ಮಹೋತ್ಸವ ನಡೆಯಲಿದೆ. ಸಂಜೆ 5ಗಂಟೆಗೆ ಹಗರಿ ಬಸವೇಶ್ವರ ರಥೋತ್ಸವ ಜರುಗಲಿದೆ. ಫೆ.6ರಂದು ಭಕ್ತರಿಂದ ದೇಗುಲದಲ್ಲಿ ಮಡಿಯುಡಿಯಿಂದ ದೀರ್ಘದಂಡ ನಮಸ್ಕಾರ, ಫೆ.7ರಂದು ದೇವಿಗೆ ಉಡಿ ತುಂಬುವುದು, ಫೆ.8ರಂದು ರಾತ್ರಿ ಸಿಡಿಸ್ತಂಭ ಗುಡಿ ತುಂಬುವುದ ಮತ್ತು ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.

ಬ್ರಿಟೀಷರ ಆಡಳಿತ ಅವಧಿಯಲ್ಲಿ ಈ ದೇಗುಲದಲ್ಲಿ ನಿಶಾನೆ, ತುತ್ತೂರಿ, ಜಾಗಟೆ, ಹಲಗೆ ನಾದದೊಂದಿಗೆ ದೇವಿಯರಿಗೆ ವಿಶೇಷ ಪೂಜೆಗಳು ನಡೆಯುತ್ತಿದ್ದವು. ನಿಷ್ಠೆಯಿಂದ ಉತ್ತಮ ಸೇವೆಗೈದ ಪೂಜಾರಿ ಮನೆತನದ ಗಂಗಾಧರಯ್ಯ ಹಾಗೂ ಅವರ ಮಗ ಸಮಾದೆಪ್ಪಗೆ ಬ್ರಿಟೀಷರು ಕಂಚಿನ ಪದಕ ನೀಡಿ ವಂಶಪಾರಂಪರ್ಯ ಧರ್ಮದರ್ಶಿಯಾಗಿ ನೇಮಕ ಮಾಡಿದರು.

ಹಗರಿ ಹಳ್ಳದ ಜನಾಕರ್ಷಕ ಬಯಲಿನಲ್ಲಿ ಬಸವಣ್ಣನ ಮೂರ್ತಿ ಇತ್ತು ಎನ್ನಲಾಗುತ್ತದೆ. ಈ ಮೊದಲು ಮೂರು ತಿಂಗಳು ಜಾತ್ರೆ ನಡೆಯುತ್ತಿದ್ದು, ಜಾನುವಾರುಗಳ ಸಂತೆ ದೊಡ್ಡದಾಗಿ ನಡೆಯುತ್ತಿತ್ತು. ವ್ಯಾಪಾರಕ್ಕಾಗಿ ಬಂದವರು ಕುದುರೆಗಳನ್ನು ವಿಶ್ರಾಂತಿಗಾಗಿ ಒಂದೆಡೆ ಬಿಡುತ್ತಿದ್ದರು. ಆ ಪ್ರದೇಶಕ್ಕೆ ನಿಲ್ಲುವ ಕುದುರೆ ಎಂದು ಕರೆಯಲಾಗುತ್ತಿತ್ತು. ಈಗ ಅದು ನೆಲ್ಲುಕುದುರೆ ಗ್ರಾಮವಾಗಿ ಗುರುತಿಸಿಕೊಂಡಿದೆ. ಹಾಲುಮತ ಸಮುದಾಯದ ಮುದೇಗೌಡರ ಕುಟುಂಬದವರು ದೇಗುಲಕ್ಕೆ ಒಂದು ಕುದುರೆಯನ್ನು ದಾನವಾಗಿ ನೀಡಿದ್ದರು.

ಈ ಪ್ರದೇಶದಲ್ಲಿ 1964ರಲ್ಲಿ ಮಾಲವಿ ಜಲಾಶಯ ನಿರ್ಮಿಸುವ ಯೋಜನೆಯನ್ನು ಸರ್ಕಾರ ಕೈಗೊಂಡಿತು. ಜಲಾಶಯ ಭರ್ತಿಯಾದ ಬಳಿಕ ಗ್ರಾಮಗಳ ವೈಭವ ಮುಳುಗಡೆಯಾಯಿತು. ಅಲ್ಲಿಂದ ಗ್ರಾಮಗಳು ಸ್ಥಳಾಂತರಗೊಂಡವು. ಆದರೆ, ಈ ದುರ್ಗಾಂಬಿಕಾ ಸೇರಿದಂತೆ ಮೂರು ದೇವಿಯರ ದೇಗುಲ ಸ್ಥಳಾಂತರ ಗೊಳ್ಳಲಿಲ್ಲ. ಭರತ ಹುಣ್ಣಿಮೆಯ ಮೊದಲು ದೇವಿಯರ ಜಾತ್ರಾ ಮಹೋತ್ಸವದಲ್ಲಿ ಗತಕಾಲದ ವೈಭವ ಮರುಕಳಿಸುತ್ತದೆ.