ಬಾಗಲಕೋಟೆ: ರಸ್ತೆಯಲ್ಲಿ ಹೋಗಿಬರುವ ವಾಹನಗಳನ್ನು ತಡೆದು ಜನರಿಂದ ಚಿನ್ನಾಭರಣ, ಹಣ ದೋಚುತ್ತಿದ್ದ ಕಳರನ್ನು ಬಾಗಲಕೋಟೆ ಪೊಲೀಸರು ಬಂಧಿಸಿದ್ದಾರೆ.
ನಗರ ಹೊರವಲಯದ ಸಂಗಮ ಕ್ರಾಸ್ ಬಳಿ ಜನರನ್ನು ದರೋಡೆ ಗೈಯಲು ಸಿದ್ಧತೆಯಲ್ಲಿದ್ದ ೬ ಜನರನ್ನು ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಬಂಽಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಜಯಪುರ ಜಿಲ್ಲೆ ಹಿಟ್ನಳ್ಳಿ ಗ್ರಾಮದ ಶ್ಯಾಮ ಯಮನಪ್ಪ ರತ್ನಾಕರ(೩೨), ಶ್ರೀಧರ ಸುಭಾಸ ಮಾದರ(೨೬), ಸುರೇಶ ಸುಭಾಸ ಮಾದರ(೨೧) ಸುನೀಲ ಸಿದ್ದಪ್ಪ ಮಾದರ(೨೧), ರಾಹುಲ್ ಸಿದ್ದಪ್ಪ ಮಾದರ(೧೯) ಇಂಡಿ ದರ್ಗಾಗಲ್ಲಿಯ ಪ್ರಕಾಶ ಶರಣಪ್ಪ ಬಗಲೆನ್ನವರ(೪೩) ಬಂಽತ ಆರೋಪಿಗಳು. ಆರೋಪಿಗಳ ಪೈಕಿ ಕಾನೂನು ಸಂಘರ್ಷಕ್ಕೆ ಒಳಗಾದ ಓರ್ವ ಅಪ್ರಾಪ್ತ ಪರಾರಿಯಾಗಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತರಿಂದ ೧.೫೧ ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಮಹೀಂದ್ರಾ ಎಕ್ಸ್ಯುವಿ ೫೦೦ ವಾಹನ, ಮಚ್ಚು, ಕೊಡಲಿ, ಚಾಕು ಹಾಗೂ ಖಾರದಪುಡಿ ವಶಪಡಿಸಿಕೊಳ್ಳಲಾಗಿದೆ.
ಈ ಆರೋಪಿಗಳು ದರೋಡೆಗೆ ಸಿದ್ಧತೆ ಮಾಡಿಕೊಂಡಿರುವ ಖಚಿತ ಮಾಹಿತಿ ಮೇರೆಗೆ ಗ್ರಾಮೀಣ ಠಾಣೆ ಸಿಪಿಐ ಎಚ್.ಆರ್.ಪಾಟೀಲ, ಅಪರಾಧ ವಿಭಾಗದ ಪಿಎಸ್‌ಐ ಆರ್.ಡಿ.ಲಮಾಣಿ ನೇತೃತ್ವದ ತಂಡ ದಾಳಿ ಕೈಗೊಂಡು ಆರೋಪಿಗಳನ್ನು ಬಂಧಿಸಿದೆ. ಗ್ರಾಮೀಣ ಪಿಎಸ್‌ಐ ಶರಣಬಸಪ್ಪ ಸಂಗಳದ ಅವರು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡಿದ್ದು, ಈ ಆರೋಪಿಗಳು ಬಾಗಲಕೋಟೆ, ನವಲಗುಂದ, ನಿಡಗುಂದಿ ಠಾಣೆಯ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ವಿವರಿಸಿದರು.
ತನಿಖಾ ತಂಡದಲ್ಲಿ ಸಿಪಿಐ, ಪಿಎಸ್‌ಐ ಜತೆಗೂಡಿ ಸಿಬ್ಬಂದಿಗಳಾದ ಎಂ.ಬಿ.ಬಳಬಟ್ಟಿ, ಬಿ.ಎಸ್.ಜಮದಾರಖಾನಿ, ಎಂ.ಎಸ್.ಸೋಲಾಪುರ, ಎಸ್.ಎಸ್.ನಡಗೇರಿ, ಎಂ.ಬಿ.ಗಣಾಚಾರಿ, ಆರ್.ಬಿ.ಪದರಾ, ಕೋಮಾರ, ಐ.ಜಿ.ಬಾರಕೇರ, ಎಸ್.ಬಿ.ಮನಮಗೌಡರ, ಪಿ.ಎಸ್.ಮಲ್ಲಾಪುರ, ಬಿ.ಎಸ್.ಹುಲ್ಲಣ್ಣವರ, ಪಿ.ಎಸ್.ಪಾಟೀಲ, ಎನ್.ಎಂ.ಗುರಾಣಿ, ಎಸ್.ಪಿ.ಹಳೇಮನಿ, ಆರ್.ಎಫ್.ಬಾಗವಾನ, ಯಲ್ಲಪ್ಪ ಬಿಲ್ಲಾರ, ಕರಿಯಪ್ಪ ಮಗಡಾರ, ಎಂ.ಬಿ.ಕರಡಿ ಅವರು ಕಾರ್ಯನಿರ್ವಹಿಸಿದ್ದು, ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿ ನಗದು ಬಹುಮಾನ ಘೋಷಿಸಲಾಗಿದೆ ಎಂದು ಹೇಳಿದರು.
ಹೆಚ್ಚುವರಿ ಎಸ್‌ಪಿ ಮಹಾಂತೇಶ ಜಿದ್ದಿ, ಡಿವೈಎಸ್‌ಪಿ ಪಂಪನಗೌಡ ಉಪಸ್ಥಿತರಿದ್ದರು.