ಜಿಲ್ಲೆ

ಚಿನ್ನಾಭರಣ ಕದ್ದ ಚೌಲ್ಟ್ರಿ ಕಿರಣ್ ಸೆರೆ

ಕಲ್ಯಾಣ ಮಂಟಪಗಳೇ ಈ ಖದೀಮನ ಗುರಿ ಸಂಬಂಧಿಕರಂತೆ ಬಂದು ಕಳವು ಮಾಡಿ ಸಿಕ್ಕಿ ಬಿದ್ದ

ನೆಲಮಂಗಲ: ಕಲ್ಯಾಣ ಮಂಟಪದಲ್ಲಿ ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಅರೋಪಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆ ಮೂಲದ ಕಿರಣ್ ಅಲಿಯಾಸ್ ಚೌಲ್ಟ್ರಿ ಕಿರಣ್(25) ಬಂಧಿತ. ಮೇ 14ರಂದು ನಗರ ಸೊಂಡೇಕೊಪ್ಪ ವೃತ್ತ ಬಳಿಯ ಕಲ್ಯಾಣ ಮಂಟಪದಲ್ಲಿ ಉದ್ಯಮಿ ಕೋಡಪ್ಪನಹಳ್ಳಿ ವೆಂಕಟೇಶ್ ಅವರ ಪುತ್ರಿಯ ವಿವಾಹ ನಡೆಯುತ್ತಿದ್ದಾಗ, ಸಹೋದರನ ಪುತ್ರಿ ನಯನಾ ಎಂಬವರ ಸಮಾರು 4 ಲಕ್ಷ ಮೌಲ್ಯದ 40 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದ. ಮದುವೆ ಮುಗಿದ ನಂತರ ಆಭರಣಗಳನ್ನು ಪರಿಶೀಲಿಸಿದಾಗ ಕಳುವಾಗಿರುವುದು ಬೆಳಕಿಗೆ ಬಂದಿತ್ತು. ಕೋಡಪ್ಪನಹಳ್ಳಿ ವೆಂಕಟೇಶ್ ಮೇ 15ರಂದು ನಗರ ಠಾಣೆಗೆ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ನಗರ ಪೊಲೀಸರು ಮಂಟಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯ ಸುಳಿವು ಪಡೆದಿದ್ದರು.

ಬಳಿಕ ಮೊಬೈಲ್ ನೆಟ್‌ವರ್ಕ್ ಆಧರಿಸಿ ಮೇ 16ರಂದು ಆರಕ್ಷಕ ನಿರೀಕ್ಷಕ ಭರತ್ ಗೌಡ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಎಎಸ್‌ಐ ರಘು ನೇತೃತ್ವದಲ್ಲಿ ತಂಡ ರಚಿಸಿ ದಾವಣಗೆರೆಯಲ್ಲಿ ಕಿರಣ್ ಅಲಿಯಾಸ್ ಚೌಲ್ಟ್ರಿ ಕಿರಣ್‌ನನ್ನು ಬಂಧಿಸಿದ್ದಾರೆ. ಬಂಧಿತನಿಂದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಕಲ್ಯಾಣ ಮಂಟಪಗಳೇ ಟಾರ್ಗೆಟ್: ಕಲ್ಯಾಣ ಮಂಟಪಗಳಲ್ಲಿ ವಧು-ವರರ ಕೊಠಡಿಗಳನ್ನು ಗುರಿಯಾಗಿಸಿಕೊಂಡು ಚಿನ್ನಾಭರಣ ಕಳವು ಮಾಡುತ್ತಿದ್ದ ಕಿರಣ್ ಚೌಲ್ಟ್ರಿ ಕಿರಣ್ ಎಂದೇ ಕುಖ್ಯಾತಿ ಪಡೆದಿದ್ದಾನೆ. ವಿವಾಹದ ಸಂದರ್ಭದಲ್ಲಿ ವಧು, ವರರು ಬೆಲೆಬಾಳುವ ಚಿನ್ನಾಭರಣಗಳನ್ನು ಖರೀದಿಸುವುದು ಸಾಮಾನ್ಯ ಸಂಗತಿ. ಸಂಬಂಧಿಕರಂತೆ ಹೊಸ ಉಡುಗೆ ತೊಟ್ಟು ಕಲ್ಯಾಣಮಂಟಪಗಳಿಗೆ ಬರುತ್ತಿದ್ದ ಕಿರಣ್ ವಧು-ವರರ ಕೊಠಡಿಗಳಿಗೆ ತೆರಳಿ ಕೈಗೆ ಸಿಕ್ಕ ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದ. ಇದೇ ಕಲ್ಯಾಣ ಮಂಟಪಕ್ಕೆ ಈ ವಿವಾಹಕ್ಕೂ ಮುಂಚೆ ನಡೆದ ವಿವಾಹಕ್ಕೂ ಆಗಮಿಸಿ ಕೈಚಳಕ ತೋರಿಸಲು ಮುಂದಾಗಿದ್ದ. ಆದರೆ ಯಾವುದೇ ಚಿನ್ನಾಭರಣ ದೊರೆಯದೆ ಹತಾಶೆಯಿಂದ ಹಿಂದಿರುಗಿದ್ದನೆಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಕಲ್ಯಾಣಮಂಟಕ್ಕೆ ಬಂದಿದ್ದ ಕಿರಣ್ ವಧುವಿನ ಕೊಠಡಿಗೆ ಹೋಗಿ ಬಂದಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳ ಸುಳಿವು ಪತ್ತೆಗೆ ನೆರವಾಗಿದೆ.

ಮೋಜು ಮಸ್ತಿಗಾಗಿ ಕಳವು: ಚಿಕ್ಕಂದಿನಿಂದಲೂ ಮೋಜು ಮಸ್ತಿ ಅಭ್ಯಾಸ ಮಾಡಿಕೊಂಡಿದ್ದ ಕಿರಣ್, ಬೆಲೆ ಬಾಳುವ ಚಿನ್ನಾಭರಣ ಕದ್ದು ಮಾರಾಟ ಮಾಡಿ ಬಂದ ಹಣದಲ್ಲಿ ಗೋವಾ ಇನ್ನಿತರ ಸ್ಥಳಗಳಿಗೆ ತೆರಳಿ ಮೋಜು ಮಸ್ತಿ ಮಾಡಿ ಖರ್ಚು ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ವಿವಿಧ ಪ್ರಕರಣದಲ್ಲಿ ಭಾಗಿ: ಬಂಧಿತ ಕಿರಣ್ ದಾವಣಗೆರೆ, ಹುಬ್ಬಳಿ ಸೇರಿ ವಿವಿಧ ಪೊಲೀಸ್ ಠಾಣೆಯಲ್ಲಿ ಕಲ್ಯಾಣ ಮಂಟಪಗಳಲ್ಲಿ ಕಳವು, ದರೋಡೆ, ಮನೆಕಳ್ಳತನ ಸೇರಿ ಹತ್ತಾರು ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.