ಜಿಲ್ಲೆ

ಚಿನ್ನದ ನಾಣ್ಯಗಳೆಂದು ನಂಬಿಸಿ 5 ಲಕ್ಷ ವಂಚನೆ

ದಾವಣಗೆರೆ: ಅಸಲಿ ಬಂಗಾರದ ನಾಣ್ಯಗಳನ್ನು ನೀಡುವುದಾಗಿ ನಂಬಿಸಿ, 5 ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣ ಹದಡಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೊರಟಿಗೆರೆ ತಾಲೂಕು ಚಿಂಪುಗಾನಹಳ್ಳಿಯ ಸಿ.ಬಿ.ರಂಗನಾಥ ಮೋಸ ಹೋದವರು. ರಂಗನಾಥ ಅವರು ಇತ್ತೀಚೆಗೆ ಗೊರವನಹಳ್ಳಿಯ ಮಹಾಲಕ್ಷಿ$್ಮ ದೇವಸ್ಥಾನಕ್ಕೆ ಹೋಗಿದ್ದಾಗ ವ್ಯಕ್ತಿಯೊಬ್ಬನ ಪರಿಚಯವಾಗಿತ್ತು. ಆ ವ್ಯಕ್ತಿಯು ತನ್ನನ್ನು ಹುಬ್ಬಳ್ಳಿ ನಿವಾಸಿ ಸುರೇಶ ಎಂದು ಪರಿಚಯಿಸಿಕೊಂಡು ಫೋನ್​ ನಂಬರ್​ ಪಡೆದುಕೊಂಡಿದ್ದ. 7 ದಿನಗಳ ಹಿಂದೆ ದೂರವಾಣಿ ಕರೆ ಮಾಡಿದ ಸುರೇಶ, "ನನ್ನ ಹಳೇ ಮನೆಯನ್ನು ಕೆಡವಿ ಪಾಯ ಅಗೆಯುವಾಗ ಬಂಗಾರದ ನಾಣ್ಯಗಳು ಸಿಕ್ಕಿವೆ. ನನಗೆ ಹಣದ ಅವಶ್ಯಕತೆಯಿದೆ, ನೀನು ಯಾರಿಗೂ ಹೇಳದೇ ಇದ್ದರೆ ಕೊಡುತ್ತೇನೆ' ಎಂದು ತಿಳಿಸಿದ್ದ. ಜು.23ರಂದು ಸಂತೇಬೆನ್ನೂರು ಬಳಿಗೆ ಬರಲು ಹೇಳಿ, ಅಲ್ಲಿ ಅಸಲಿ ಚಿನ್ನದ ನಾಣ್ಯವೊಂದನ್ನು ರಂಗನಾಥ ಅವರಿಗೆ ನೀಡಿ, ಅದು ಅಸಲಿ ಹೌದೋ ಅಲ್ಲವೋ ಎಂದು ಪರೀಕ್ಷಿಸುವಂತೆ ಹೇಳಿದ್ದ. ಆ ನಾಣ್ಯವನ್ನು ತುಮಕೂರಿಗೆ ತಂದು ಪರೀಕ್ಷಿಸಿದಾಗ ಅದು ಅಸಲಿ ಎಂದು ಖಚಿತವಾಗಿತ್ತು. ನಂತರ ಸುರೇಶ 5 ಲಕ್ಷ ರೂ.ಗೆ ಕಾಲು ಕೆಜಿ ಬಂಗಾರದ ನಾಣ್ಯ ಕೊಡುವುದಾಗಿ ಹೇಳಿ, ರಂಗನಾಥ ಅವರನ್ನು ಮಂಗಳವಾರ ದಾವಣಗೆರೆಗೆ ಕರೆಸಿಕೊಂಡಿದ್ದ. ಅಲ್ಲಿಂದ ಕುರ್ಕಿ ಗ್ರಾಮದ ಬಳಿಗೆ ಕರೆಸಿಕೊಂಡು ರಂಗನಾಥ ಅವರಿಂದ 5 ಲಕ್ಷ ರೂ. ಪಡೆದು ಬಿಳಿ ಬಟ್ಟೆಯಲ್ಲಿ ಕಟ್ಟಿದ್ದ ಗಂಟೊಂದನ್ನು ತೋರಿಸಿದ್ದ. ಇದರಲ್ಲಿ ಅರ್ಧ ಕೆಜಿ ಬಂಗಾರದ ನಾಣ್ಯಗಳಿವೆ, ಅದರಲ್ಲಿ ಭಾಗ ಮಾಡಿಕೊಡುತ್ತೇನೆ ಎಂದು ತಿಳಿಸಿ ಹೈವೇ ಪಕ್ಕದ ಜಮೀನಿಗೆ ಕರೆದುಕೊಂಡು ಹೋಗಿದ್ದ. ಮಣ್ಣಿನ ರಸ್ತೆಯಲ್ಲಿ ಸ್ವಲ್ಪ ದೂರ ಹೋದಾಗ ನಾಲ್ಕೆದು ಜನರು ನಮ್ಮತ್ತ ಓಡಿ ಬಂದರು. ಆಗ ಹೆದರಿ ವಾಪಸ್​ ಬಂದಿದ್ದಾಗಿಯೂ, ಸುರೇಶ ಮತ್ತು ಆತನ ಜತೆಗಿದ್ದವರು ಜಮೀನಿನಲ್ಲಿ ಓಡಿ ಹೋದರು ಎಂದು ರಂಗನಾಥ ಹದಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.