ಜಿಲ್ಲೆ

ಚಿನ್ನದ ಗಣಿ ಪ್ರದೇಶದಲ್ಲಿ ಸರ್ವೇ ಕಾರ್ಯಕ್ಕೆ ಚಾಲನೆ

Kolar

ಕೋಲಾರ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೂಚನೆ ಮೇರೆಗೆ ಎಂಇಸಿಎಲ್ ಮೈನಿಂಗ್ ಎಕ್ಸ್ ತಂತ್ರಜ್ಞರು ಕೋಲಾರ ಚಿನ್ನದ ಗಣಿ ಪ್ರದೇಶ(ಕೆಜಿಎಫ್)ದಲ್ಲಿ ಸೈನೈಡ್ ಗುಡ್ಡ ಹಾಗೂ ಬಂಗಾರಪೇಟೆ ತಾಲೂಕಿನ ಬೇಟರಾಯನಪುರ ವ್ಯಾಪ್ತಿಯಲ್ಲಿ ಚಿನ್ನದ ಗಣಿಗೆ ಸೇರದ ಭೂಮಿ ಕೊರೆದು ಚಿನ್ನದ ನಿಕ್ಷೇಪ ಪತ್ತೆ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಕೆಜಿಎಫ್‌ನಲ್ಲಿ 1880ರಲ್ಲಿ ಲಂಡನ್ನಿನ ಜಾನ್ ಟೈಲರ್ ಆ್ಯಂಡ್ ಸನ್ಸ್ ಕಂಪನಿಯಿಂದ ಪ್ರಾರಂಭವಾದ ಚಿನ್ನದ ಗಣಿಯನ್ನು ಆರ್ಥಿಕ ಸಂಕಷ್ಟದಿಂದ 2000ರಲ್ಲಿ ಮುಚ್ಚಲಾಗಿದ್ದು ಈಗ ಚಿನ್ನ ಸಿಗುವ ನಂಬಿಕೆಯಿಂದ ಗಣಿ ಪುನಶ್ಚೇತನಗೊಳಿಸಲು ಪ್ರಯತ್ನ ನಡೆದಿದೆ.

ಗಣಿಯನ್ನು ಖಾಸಗಿ ಸಹಭಾಗಿತ್ವದಲ್ಲಿ ಮರು ಸ್ಥಾಪಿಸಲು ಕಳೆದ 15 ವರ್ಷಗಳಿಂದ ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಸೇರಿ ಅನೇಕ ಕಾರ್ಮಿಕ ಮುಖಂಡರು ನಡೆಸುತ್ತಿರುವ ಪ್ರಯತ್ನ ಕೆಜಿಎಫ್ ಜನರ ಮೂಗಿಗೆ ತುಪ್ಪ ಸವರಿದಂತಾಗಿದೆಯೇ ಹೊರತು ಒಂದು ಗ್ರಾಂ ಚಿನ್ನ ಪತ್ತೆ ಮಾಡಲಾಗಿಲ್ಲ. ಗಣಿ ಮುಚ್ಚಿದ ಬಳಿಕ ಸಾವಿರಾರು ಕಾರ್ಮಿಕರು ಕೆಲಸವಿಲ್ಲದೆ ಕೆಜಿಎಫ್ ತೊರೆದಿದ್ದಾರೆ, ಅನೇಕರು ಮೃತಪಟ್ಟಿದ್ದಾರೆ, ಇಂದಿಗೂ ವಾಸದ ಮನೆಗಳಿಗೆ ಹಕ್ಕುಪತ್ರಗಳಿಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ.

10 ವರ್ಷಗಳಿಂದ ಸರ್ವೇ ಕಾರ್ಯಕ್ಕೆ ಸುಮಾರು 120 ಕೋಟಿ ರೂ. ಖರ್ಚು ಮಾಡಿದ್ದರೂ ಪ್ರಯೋಜನವಾಗಿಲ್ಲ, ಈ ನಡುವೆ ಸಂಸದ ಎಸ್.ಮುನಿಸ್ವಾಮಿ ಚಿನ್ನದ ಗಣಿ ಮರು ಸ್ಥಾಪಿಸಬೇಕು, ಇಲ್ಲವೇ ಕೈಗಾರಿಕೆಗಳ ಅಭಿವೃದ್ಧಿಗೆ ಗಣಿ ಪ್ರದೇಶದಲ್ಲಿರುವ ಖಾಲಿ ಜಾಗ ಬಳಕೆ ಮಾಡಿಕೊಳ್ಳಬೇಕೆಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಾರಂಭಿಸಿದ್ದಾರೆ.

ಅನೇಕ ಬಾರಿ ಕೇಂದ್ರ ಸಚಿವ ಪ್ರಹ್ಲಾದಜೋಶಿ ಅವರನ್ನು ಭೇಟಿಯಾಗಿ ಕೆಜಿಎಫ್‌ಗೆ ಭೇಟಿ ನೀಡಿ ವಸ್ತು ಸ್ಥಿತಿ ಪರಿಶೀಲಿಸಲು ಮನವಿ ಮಾಡಿದ್ದರು. ಆ.28ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚಿನ್ನದ ಗಣಿ ಕುರಿತು ಪ್ರಲ್ಹಾದ ಜೋಶಿ ಚರ್ಚೆ ನಡೆಸಿದ್ದರು. ಮರುದಿನವೇ ಸಚಿವ ಜಗದೀಶ ಶೆಟ್ಟರ್ ಕೆಜಿಎಫ್‌ಗೆ ಭೇಟಿ ನೀಡಿ ಸಂಸದ ಎಸ್.ಮುನಿಸ್ವಾಮಿ ಹಾಗೂ ಶಾಸಕಿ ರೂಪಕಲಾ ಅವರೊಂದಿಗೆ ಸಮಾಲೋಚಿಸಿದ್ದರು.

2000ರಲ್ಲಿ ಗಣಿ ಮುಚ್ಚಿದಾಗ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವಿತ್ತು. ತಜ್ಞರ ಸಲಹೆ ಮೇರೆಗೆ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದ ಗಣಿ ಬಂದ್ ಮಾಡುವುದು ಅನಿವಾರ್ಯವಾಗಿತ್ತು. ನಂತರ ಅಧಿಕಾರಕ್ಕೆ ಬಂದ ಯುಪಿಎ ಸರ್ಕಾರ ಚಿನ್ನದ ಗಣಿ ಮರು ಸ್ಥಾಪಿಸುವ ಬಗ್ಗೆ ಹೇಳಿಕೆ ನೀಡುತ್ತಾ ಬಂದಿತ್ತು. ಪ್ರಸ್ತುತ ಮೋದಿ ಸರ್ಕಾರ ಕೆಜಿಎಫ್‌ನಲ್ಲಿ ಚಿನ್ನ ಸಿಗುವುದನ್ನು ಖಾತ್ರಿ ಮಾಡಿಕೊಂಡು ಉತ್ಪಾದನೆಗೆ ಅವಕಾಶ ಮಾಡಿಕೊಟ್ಟಲ್ಲಿ ನಿರುದ್ಯೋಗ ಸಮಸ್ಯೆ ಪರಿಹಾರದ ಜತೆಗೆ ದೇಶದ ಆರ್ಥಿಕ ಪ್ರಗತಿ ಹೆಚ್ಚುವುದರಲ್ಲಿ ಅನುಮಾನವಿಲ್ಲ.

100 ಟನ್ ಚಿನ್ನದ ಮಣ್ಣು ರವಾನೆ: ಕೆಜಿಎಫ್: ಬಿಜಿಎಂಎಲ್ ಸೈನೈಡ್ ದಿಬ್ಬ ಹಾಗೂ ಗಣಿ ಪ್ರದೇಶಗಳಲ್ಲಿನ ಚಿನ್ನದ ನಿಕ್ಷೇಪವಿರುವ ಮಣ್ಣನ್ನು (100 ಟನ್) ಹೈದರಾಬಾದ್‌ನ ಎನ್‌ಎಫ್‌ಟಿಡಿಸಿ ಎಂಬ ಖಾಸಗಿ ಕಂಪನಿಗೆ ಲಾರಿಗಳಲ್ಲಿ ರವಾನಿಸಲಾಗಿದೆ. ಹಿಂದೆ ಬಿಜಿಎಂಎಲ್ ಭಾಗದಲ್ಲಿರುವ ಸೈನೈಡ್ ದಿಬ್ಬಗಳಲ್ಲಿ ಹಾಗೂ ಗಣಿ ಪ್ರದೇಶದಲ್ಲಿ ಟಂಗ್‌ಸ್ಟ್‌ನ್, ಮೆಗ್ನಿಷಿಯಮ್ ಸೇರಿ ಅತ್ಯುನ್ನತವಾದ ಖನಿಜವಿರುವುದಾಗಿ ಪತ್ರಿಕೆಗಳಲ್ಲಿ ವರದಿ ಪ್ರಕಟಗೊಂಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸೈನೈಡ್ ದಿಬ್ಬಗಳಲ್ಲಿ ಲಭ್ಯವಿರುವ ಖನಿಜ ಸಂಪತ್ತಿನ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಆದೇಶ ನೀಡಿತ್ತು. ಅಂದಿನಿಂದ ನಿರಂತರವಾಗಿ ಖನಿಜ ಸಂಪತ್ತಿನ ಹುಡುಕಾಟದಲ್ಲಿ ತಜ್ಞರು ನಿರತರಾಗಿದ್ದರು. ಇದೀಗ ಗಣಿ ಕಾರ್ಖಾನೆಯಿಂದ ಹೊರಗೆ ತೆಗೆದು ನಗರದ ವಿವಿಧೆಡೆಗಳಲ್ಲಿ ಸುರಿಯಲಾಗಿರುವ ಮಣ್ಣಿನಲ್ಲೂ ಚಿನ್ನದ ನಿಕ್ಷೇಪ ಸೇರಿ ಅಪಾರ ಪ್ರಮಾಣದ ಖನಿಜ ಸಂಪತ್ತು ಕಂಡು ಬಂದಿರುವ ಹಿನ್ನೆಲೆಯಲ್ಲಿ ಮಣ್ಣನ್ನು ಲಾರಿಗಳಲ್ಲಿ ಕಳುಹಿಸಿಕೊಡಲಾಗಿದೆ.

ಕೆಜಿಎಫ್‌ನಲ್ಲಿ ಚಿನ್ನದ ಗಣಿ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಕಾರಾತ್ಮಕ ಹೆಜ್ಜೆ ಇಟ್ಟಿದ್ದಾರೆ. ಎಂಇಸಿಎಲ್ ನಡೆಸಿರುವ ಸರ್ವೇ ಸಫಲವಾದಲ್ಲಿ ಸಾವಿರಾರು ಜನರಿಗೆ ಅನುಕೂಲವಾಗುತ್ತದೆ, ಕೆಜಿಎಫ್‌ನಲ್ಲಿ ಕೈಗಾರಿಕೆ ಅಭಿವೃದ್ಧಿಗೂ ಮುನ್ನುಡಿ ಬರೆದಂತಾಗುತ್ತದೆ. ನನ್ನ ಪ್ರಯತ್ನ ಮುಂದುವರಿಸುವೆ. ಎಸ್.ಮುನಿಸ್ವಾಮಿ, ಸಂಸದ, ಕೋಲಾರ ಈಗಾಗಲೆ 2-3 ಸಂಸ್ಥೆಗಳು ಚಿನ್ನದ ಗಣಿ ಪ್ರದೇಶದಲ್ಲಿ ನಡೆಸಿರುವ ಸರ್ವೇ ವರದಿ ಏನಾಯಿತೆಂಬುದು ಗೊತ್ತಿಲ್ಲ, ಗಣಿಯಲ್ಲಿ ಚಿನ್ನದ ನಿಕ್ಷೇಪ ಪತ್ತೆಗಾಗಿ ಮತ್ತೆ ಶೋಧನೆ ನಡೆಯುತ್ತಿದೆ. ಉದ್ಯೋಗದ ಭರವಸೆಯಲ್ಲಿರುವ ಜನರಿಗೆ ಯಾವುದಾದರೊಂದು ಯೋಜನೆ ಮೂಲಕ ಕೆಲಸ ಕೊಡಲು ಮುಂದಾಗಲಿ. ಜಯಕುಮಾರ್, ಬಿಜಿಎಂಎಲ್ ಕಾರ್ಮಿಕ ಮುಖಂಡ, ಕೆಜಿಎಫ್ ಕೇಂದ್ರ ಸಚಿವರು ಮತ್ತು ಮುಖ್ಯಮಂತ್ರಿ ಸೂಚನೆ ಮೇರೆಗೆ ಕೆಜಿಎ್ನಲ್ಲಿ ಚಿನ್ನದ ಗಣಿ ಭೂಮಿ ಕೊರೆದು ಸರ್ವೇ ಕಾರ್ಯ ಆರಂಭಿಸಲಾಗಿದೆ. ಈ ಕೆಲಸ ಇನ್ನಷ್ಟು ದಿನ ಮುಂದುವರಿಯಲಿದೆ. ಚಿನ್ನದ ಶೋಧನೆಗಾಗಿ ಈ ಕಾರ್ಯ ನಡೆಯುತ್ತಿದೆ. ರಂಜತ್ ರಾಥ್, ವ್ಯವಸ್ಥಾಪಕ ನಿರ್ದೇಶಕ, ಎಂಇಸಿಎಲ್