ಜಿಲ್ಲೆ

ಚಿತ್ರನಟಿ ಎಂ.ಎನ್.ಲಕ್ಷ್ಮೀದೇವಿಗೆ ಮುತ್ತುರಾಜ್ ಪ್ರಶಸ್ತಿ

ಚಾಮರಾಜನಗರ: ಪದ್ಮಭೂಷಣ ಡಾ.ರಾಜ್‌ಕುಮಾರ್ ಅವರ 97ನೇ ಹುಟ್ಟುಹಬ್ಬದ ಪ್ರಯುಕ್ತ ಹಿರಿಯ ಚಿತ್ರನಟಿ ಎಂ.ಎನ್.ಲಕ್ಷ್ಮೀದೇವಿ ಅವರಿಗೆ ಮುತ್ತುರಾಜ್ ಪ್ರಶ್ತಸಿಯನ್ನು ನೀಡಿ ಗೌರವಿಸಲಾಯಿತು.

ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಈಶ್ವರಿ ಸೋಷಿಯಲ್ ಟ್ರಸ್ಟ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿ ಹೆಸರು ಮಾಡಿರುವ ಹಿರಿಯ ಚಿತ್ರನಟಿ ಲಕ್ಷ್ಮಿದೇವಿ ಅವರನ್ನು ಗೌರವಿಸಲಾಯಿತು.

ಈ ವೇಳೆ ಎಂ.ಎನ್. ಲಕ್ಷ್ಮಿದೇವಿ ಮಾತನಾಡಿ, ತಮ್ಮನ್ನು ಗುರುತಿಸಿ ಪ್ರಶಸ್ತಿ ಕೊಟ್ಟು ಗೌರವಿಸಿದ ಈಶ್ವರಿ ಸೋಷಿಯಲ್ ಟ್ರಸ್ಟ್ ನ ಸಂಸ್ಥಾಪಕ ಸಿ.ಎಂ.ವೆಂಕಟೇಶ್ ಅವರಿಗೆ ವಂದನೆಗಳನ್ನು ಸಲ್ಲಿಸುತ್ತೇನೆ. ಚಿತ್ರೀಕರಣಕ್ಕಾಗಿ ಆಗಾಗ ಕೊಳ್ಳೆಗಾಲ ಮತ್ತು ಚಾಮರಾಜನಗರಕ್ಕೆ ಬರುತ್ತಿದ್ದೆ.ಈಗ ರಾಜ್‌ಕುಮಾರ್ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸಿರುವುದು ಖುಷಿನೀಡಿದೆ ಎಂದರು.

ವ್ಯಾಣಿಜ್ಯ ತೆರಿಗೆ ಉಪಆಯುಕ್ತ ಆರ್.ಹಸಿಬುಲ್ಲ ಬೇಗ್ ಮಾತನಾಡಿ, ಡಾ.ರಾಜ್‌ಕುಮಾರ್ ತಮ್ಮ ಮೊದಲ ಚಿತ್ರ ಬೇಡರ ಕಣ್ಣಪ್ಪದಲ್ಲಿ ಶಿವನಿಗೆ ನೇತ್ರದಾನ ಮಾಡಿದ್ದರು. ತಮ್ಮ ನಿಜ ಜೀವನದಲ್ಲೂ ಅಂದರ ಬಾಳಿಗೆ ಕಣ್ಣು ಕೊಟ್ಟು ಕಣ್ಣಪ್ಪ ಏನಿಸಿಕೊಂಡಿದ್ದಾರೆ. ಸರಳತೆಗೆ ಮತ್ತೊಂದು ಹೆಸರೇ ಡಾ.ರಾಜ್‌ಕುಮಾರ್ ಆಗಿದ್ದಾರೆ. ಚಾಮರಾಜನಗರವನ್ನು ಸರ್ಗದ ಬಾಗಿಲು ಎಂತಲು, ತಾಯಿಮನೆ ಇರುವ ಗಾಜನೂರನ್ನು ಸ್ವರ್ಗ ಎಂತಲೂ ಕರೆಯುತ್ತಿದ್ದರು. ಇಂತಹ ಅದ್ಭುತ ಕಲಾವಿದನ್ನು ಪಡೆದ ನಮ್ಮ ಜಿಲ್ಲೆಯೆ ಧನ್ಯ ಎಂದರು.

ಈಶ್ವರಿ ಟ್ರಸ್ಟ್ ಅಧ್ಯಕ್ಷ ಸಿ.ಎಂ.ವೆಂಕಟೇಶ್ ಮಾತನಾಡಿ, ಕಳೆದ ವರ್ಷ ಚಂದ್ರಪ್ಪನವರಿಗೆ ಮುತ್ತುರಾಜು ಪ್ರಶಸ್ತಿಯನ್ನು ನೀಡಲಾಗಿತ್ತು. ಈ ಬಾರಿ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿ ಹೆಸರು ಮಾಡಿರುವ ಲಕ್ಷ್ಮಿದೇವಿ ಅವರನ್ನು ಗೌರವಿಸುವ ಭಾಗ್ಯ ದೊರೆಕಿದೆ ಎಂದರು.

ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಡಾ. ಬಿ,ಎಸ್.ತಲ್ವಾಡಿ, ಡಾ.ಶ್ರೀಕಂಠಮೂರ್ತಿ, ವಾಣಿಜ್ಯ ತೆರಿಗೆ ಉಪ ಆಯುಕ್ತ ಶಿವಣ್ಣ, ಲೆಕ್ಕ ಪರಿಶೋಧಕ ಕೆ.ಪಿ.ಲಕ್ಷಿನಾರಾಯಣ, ಗಾಯಕ ಆರ್.ಮಹೇಂದ್ರ, ಸಾಹಿತಿ ಆರ್.ರವಿಕುಮಾರ್, ಜಯಲಕ್ಷ್ಮಿವೆಂಕಟೇಶ್ ಹಾಗೂ ಇತರರು ಹಾಜರಿದ್ದರು.