raichur 
ಜಿಲ್ಲೆ

ಚಿತ್ರನಟ ಕಮಲಹಾಸನ್ ಹೇಳಿಕೆ ಖಂಡಿಸಿ ಕನ್ನಡಪರ ಸಂಘಟನೆ ಪ್ರತಿಭಟನೆ

 ರಾಯಚೂರು ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಚಿತ್ರನಟ ಕಮಲಹಾಸನ್ ಕೀಳುರಿಮೆ ಮಾತನಾಡಿದ್ದಾರೆ. ಕೂಡಲೇ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು.

ಕಮಲ್ ಹಾಸನ್ ನಟನಾಗಿದ್ದು, ಕನ್ನಡ ಚಿತ್ರಗಳಲ್ಲೂ ನಟಿಸಿದ್ದಾರೆ. ನಟನ ಮಾತಿನಿಂದ ಕನ್ನಡಿಗರು, ತಮಿಳರ ನಡುವೆ ದ್ವೇಷ ಹುಟ್ಟುವಂತೆ ಮಾಡಿದ್ದಾರೆ ಎಂದು ಖಂಡಿಸಿದರು. ಕಮಲಹಾಸನ್‌ರ ಭಾವಚಿತ್ರಕ್ಕೆ ಬೂಟ್‌ನಿಂದ ಹೊಡೆದು ಆಕ್ರೋಶ ಹೊರ ಹಾಕಿದರು.

ಕನ್ನಡ ಪರ ಸಂಘಟನೆ ಹೊರಾಟಗಾರ ಡಾ. ಬಸವರಾಜ ಕಳಸ ಮಾತನಾಡಿ, ಬೆಂಗಳೂರಿಗೆ ಪ್ರಚಾರ ಕಾರ್ಯಕ್ಕೆ ಆಗಮಿಸಿದ ಕಮಲಹಾಸನ್ ತಮಿಳುನಿಂದ ಕನ್ನಡ ಹುಟ್ಟಿಕೊಂಡಿದೆ ಎಂದು ಮಾತನಾಡಿದ್ದು, ಅಲ್ಲಿಯೇ ಇದ್ದ ನಟ ಶಿವರಾಜ್ ಕುಮಾರ ಅವರು ಖಂಡಿಸಬೇಕಿತ್ತೆಂದು ಅಸಮಾಧಾನ ವ್ಯಕ್ತಪಡಿಸಿದರು. 2 ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಕರ್ನಾಟಕದಲ್ಲಿರುವ 6 ಸಾವಿರ ಕೋಟಿ ಜನರಿಗೆ ಬೆಂಕಿ ಇಟ್ಟಂತಾಗಿದೆ.

ಕನ್ನಡದ ಬಗ್ಗೆ ಹಗುರವಾಗಿ ಮಾತನಾಡಿದ್ದು, ನಾಡಿಗೆ ದ್ರೋಹ ಬಗೆದಂತೆ, ಕನ್ನಡದಲಿಯೇ ಸಾಕಷ್ಟು ಸಿನಿಮಾ ಮಾಡಿದ್ದು ಭಾಷಾ ವಿರೋಧಿಯಾಗಿದ್ದಾರೆ ಎಂದು ಕಿಡಿ ಕಾರಿದರು. ಕಮಲಹಾಸನ್ ಅವರು ಬೇಷರತ್ತಾಗಿ ಕ್ಷಮೆಯಾಚಿಸಬೇಕು. ರಾಜ್ಯದಲ್ಲಿ ಕಮಲಹಾಸನ್ ಹಾಗೂ ತಮಿಳು ಸಿನಿಮಾಗಳ ಪ್ರದರ್ಶನ ರದ್ದುಪಡಿಸಬೇಕೆಂದು ಆಗ್ರಹಿಸಿದರು.


ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಅಶೋಕ ಕುಮಾರ ಸಿಕೆ ಜೈನ್,ಮುಖಂಡರಾದ ಕೆ.ಇ. ಕುಮಾರ, ಬಷೀರ ಅಹಮದ್ ಹೊಸಮನಿ, ವಿಶ್ವನಾಥ ಪಟ್ಟಿ ಸೇರಿದಂತೆ ಅನೇಕರು ಇದ್ದರು.