ಜಿಲ್ಲೆ

ಚಿತ್ರದುರ್ಗದಲ್ಲಿ ಹದಗೆಟ್ಟ ಸಂಚಾರ ವ್ಯವಸ್ಥೆ

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ನಗರದಲ್ಲಿ ಟ್ರಾಫಿಕ್ ವ್ಯವಸ್ಥೆ ದಿನೆ ದಿನೇ ಹದಗೆಡುತ್ತಿದೆ. ನಾಲ್ಕೈದು ತಿಂಗಳಿಂದ ಕೆಟ್ಟಿರುವ ನಗರದ ಮೂರು ವೃತ್ತಗಳ ಸಿಗ್ನಲ್ ಲೈಟ್‌ಗಳ ದುರಸ್ತಿ ಈವರೆಗೂ ಆಗಿಲ್ಲ. ವಾಹನ ದಟ್ಟಣೆ ಹೆಚ್ಚಿರುವ ಬಿಡಿ ರೋಡ್, ಹೊಳಲ್ಕೆರೆ ರಸ್ತೆ, ಮೆದೇಹಳ್ಳಿ ರಸ್ತೆ, ಜೆಸಿಆರ್ ಬಡಾವಣೆ ರಸ್ತೆ ಇತ್ಯಾದಿಗಳೆಡೆ ಸಂಚಾರ ದುರವಸ್ಥೆಯಾಗಿದೆ. ಅಗತ್ಯವಿರುವೆಡೆ ಡಿವೈಡರ್ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡುವ ಕೆಲಸವೂ ಪೂರ್ಣಗೊಂಡಿಲ್ಲ.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಗಾಂಧಿ ವೃತ್ತದವರೆಗೆ ಅಪಾಯಕಾರಿಯಾಗಿರುವ ರಸ್ತೆ ಸರಿಪಡಿಸಬೇಕೆಂಬ ಜಿಲ್ಲಾಡಳಿತದ ಸೂಚನೆ ಪಾಲನೆಯಾಗಿಲ್ಲ. ನಗರದ ಗಾಂಧಿ ವೃತ್ತ ಸೇರಿ ಬಿಡಿ ರಸ್ತೆಯಲ್ಲಿರುವ ಮೂರು ಸಿಗ್ನಲ್‌ಗಳ ದುರಸ್ತಿ ಹೊಣೆ ನಗರಸಭೆಗೆ ಸೇರಿದೆ ಎಂದು ಹೇಳಿರುವ ಪೊಲೀಸರು, ನಗರಸಭೆಗೆ ಪತ್ರ ಬರೆದಿದ್ದಾರೆ.

ಗಾಂಧಿ ವೃತ್ತದಲ್ಲಿದ್ದ ವಾಹನ ಸವಾರರನ್ನು ಎಚ್ಚರಿಸುವ ಧ್ವನಿ ವರ್ಧಕ ವ್ಯವಸ್ಥೆ ಕೂಡ ಹಾಳಾಗಿದೆ. ಮೆದೇಹಳ್ಳಿ ರಸ್ತೆ ಆರ್‌ಒಬಿ ಹಾಗೂ ರಾಜಕಾಲುವೆ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಮೂರ‌್ನಾಲ್ಕು ದಿನಗಳ ಹಿಂದೆ ಆರಂಭ ವಾಗಿರುವ ಆರ್‌ಒಬಿ ದುರಸ್ತಿ ಕಾಮಗಾರಿಯಿಂದ ದಾವಣಗೆರೆ, ಹೊಸಪೇಟೆ, ಚಳ್ಳಕೆರೆ ಮತ್ತಿತರ ಮಾರ್ಗಗಳಲ್ಲಿ ಸಂಚರಿಸುವ ಖಾಸಗಿ ಬಸ್‌ಗಳು ಸೇರಿ ಇತರ ವಾಹನಗಳು ಸಂಚಾರಕ್ಕೆ ಎಪಿಎಂಸಿ ರಸ್ತೆ ಅವಲಂಬಿಸಿದ್ದು, ಅಲ್ಲೂ ದಟ್ಟಣೆ ಅಧಿಕವಾಗುತ್ತಿದೆ.

ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್ ಬಂದ್

ಕ್ಯಾಮರಾಗಳ ನೆರವಿನೊಂದಿಗೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ವಿಧಿಸಲೆಂದೇ ನಗರದ ಡಿವೈಎಸ್‌ಪಿ ಕಚೇರಿಯಲ್ಲಿದ್ದ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್ ಬಂದ್ ಆಗಿ ಐದು ವರ್ಷಗಳಾಗಿವೆ. ಆಟೊಮೆಟೆಡ್ ಚಲನಿಂಗ್ ಸಿಸ್ಟ ಮ್ ಮೂಲಕ ತಪ್ಪಿತಸ್ಥ ಚಾಲಕರಿಗೆ ದಂಡ ಕಟ್ಟುವಂತೆ ಕೇಂದ್ರದಿಂದ ನೋಟಿಸ್ ಕಳಿಸಲಾಗುತ್ತಿತ್ತು. ಆದರೆ, ನಗರದಲ್ಲಿ ಕ್ಯಾಮರಾಗಳು ಇಲ್ಲದೆ ಇರುವುದರಿಂದ ಇದನ್ನು ಮುಚ್ಚಲಾಗಿದೆ.

ಏನಾದರೂ ಘಟನೆಗಳಾದರೆ ಪೊಲೀಸರು ದೃಶ್ಯಾವಳಿಗಳಿಗಾಗಿ ಅಂಗಡಿಮುಂಗಟ್ಟುಗಳ ಕ್ಯಾಮರಾಗಳನ್ನು ನೆಚ್ಚಿಕೊಳ್ಳುವಂತಾಗಿದೆ. ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಕ್ಯಾಮರಾಗಳ ಸಂಖ್ಯೆ ಹೆಚ್ಚಾಗಬೇಕಿದೆ. ಖಾಸಗಿ ಬಸ್ ನಿಲ್ದಾಣಗಳಲ್ಲಿ ನಗರಸಭೆ/ಪೊಲೀಸರು ಕ್ರಮ ವಹಿಸಬೇಕಿದೆ.

ಸಂಚಾರಿ ಪೊಲೀಸ್ ಠಾಣೆಯಲ್ಲಿ ಅಧಿಕಾರಿ, ಸಿಬ್ಬಂದಿ ಕೊರತೆ ಇದೆ. 4 ತಿಂಗಳಿಂದ ಈ ಠಾಣೆಯ ಪಿಎಸ್‌ಐ 1 ಮತ್ತು 2 ಹುದ್ದೆಗಳು ಖಾಲಿ ಇದ್ದು, ಸೋಮವಾರ ಪಿಎಸ್‌ಐ 1ವರ್ಗಾವಣೆಗೆ ಇಲಾಖೆ ಆದೇಶಿಸಿದೆ.

ನಗರಕ್ಕೆ ಇನ್ನೊಂದು ಸಂಚಾರಿ ಠಾಣೆ ಅಗತ್ಯವಿದೆ. ಮುಂದಿನ ಒಂದೆರೆಡು ವರ್ಷಗಳಲ್ಲಿ ಮತ್ತೊಂದು ಠಾಣೆ ಅಗತ್ಯ ಎದುರಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕ್ಯಾಮರಾ ಕಣ್ಣು

ದಾವಣಗೆರೆ-ಚಿತ್ರದುರ್ಗ ಎನ್‌ಎಚ್ 48ರಲ್ಲಿ ಆಯ್ದ ಸ್ಥಳಗಳಲ್ಲಿ ವಿಐಡಿಎಸ್(ವಿಡಿಯೊ ಇನ್ಸಿಡೆಂಟ್ ಡಿಟೆಕ್ಷನ್ ಸಿಸ್ಟಮ್)ಅತ್ಯಾಧುನಿಕ ಕ್ಯಾಮರಾಗಳಿವೆ. ಹಾಗೂ ಈ ಮಾರ್ಗದಲ್ಲಿ ಎಎನ್‌ಪಿಆರ್(ಆಟೊಮ್ಯಾಟಿಕ್ ನಂಬರ್‌ಪ್ಲೇಟ್ ರೆಕ್ನೈಸೇಷನ್)ಪೊಲೀಸರು ಅಳವಡಿಸಿದ್ದಾರೆ. ಹಿರಿಯೂರು-ಬಳ್ಳಾರಿ ಎನ್‌ಎಚ್ 150ಎ ನಲ್ಲಿರುವ ವಿಐಡಿಎಸ್ ಕ್ಯಾಮರಾಗಳು ಅತ್ಯಾಧುನಿಕವಾಗಿವೆ. ತುಮಕೂರು-ಹೊಸಪೇಟೆ ಎನ್‌ಎಚ್50ರಲ್ಲಿರುವ ಕ್ಯಾಮರಾಗಳು ಅಫ್‌ಗ್ರೇಡ್ ಆಗಬೇಕಿದೆ ಎಂದು ರಾ.ಹೆ. ಪ್ರಾಧಿಕಾರದ ಮೂಲಗಳು ತಿಳಿಸಿವೆ.

....ಕೋಟ್....

ನಗರದಲ್ಲಿರುವ ಸಿಗ್ನಲ್ ಲೈಟ್‌ಗಳ ದುರಸ್ತಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ ಪತ್ರ ಬಂದಿದೆ. ಗುತ್ತಿಗೆದಾರರಿಗೆ ಮಂಗಳ ವಾರದಂದೇ ನೋಟಿಸ್ ಕೊಡಲಾಗುವುದು ಹಾಗೂ ದುರಸ್ತಿಗೆ ಸೂಕ್ತ ಕ್ರಮ ವಹಿಸಲಾಗುವುದು.

ಎಂ. ರೇಣುಕಾ, ಆಯುಕ್ತರು, ನಗರಭೆ, ಚಿತ್ರದುರ್ಗ.

---