ಜಿಲ್ಲೆ

ಚಿತ್ರದುರ್ಗದಲ್ಲಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌

ಚಿತ್ರದುರ್ಗ: ಮಧ್ಯಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ, ಅದೂ ಇಂಟರ್ ನ್ಯಾಷನಲ್ ನಿಲ್ದಾಣವೇ ಸ್ಥಾಪನೆಯಾಗಲಿ, ಇದರಿಂದ ಉತ್ತರ, ಮಧ್ಯ ಕರ್ನಾಟಕದ ಜಿಲ್ಲೆಗಳ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂಬ ಕೂಗು ಸದನದಲ್ಲಿ ಕೇಳಿಸಿದೆ.

ಚಳ್ಳಕೆರೆ ಕಾಂಗ್ರೆಸ್ ಶಾಸಕ ಟಿ. ರಘುಮೂರ್ತಿ ಸದನದಲ್ಲಿ ವಿಷಯ ಪ್ರಸ್ತಾಪಿಸುವ ಮೂಲಕ ಈ ಕುರಿತು ದನಿ ಎತ್ತಿದ್ದಾರೆ. ಕೇವಲ ಸದನದಲ್ಲಿ ಪ್ರಸ್ತಾಪಿಸದೆ ತಮ್ಮ ದನಿಗೆ ಇನ್ನಷ್ಟು ಶಕ್ತಿ ಪಡೆಯಲು ಉತ್ತರ ಹಾಗೂ ಮಧ್ಯ ಕರ್ನಾಟಕದ ಶಾಸಕರೊಂದಿಗೆ ಪಕ್ಷಾತೀತವಾಗಿ ಚರ್ಚಿಸಲು ಮುಂದಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು-ಶಿರಾ ನಡುವೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಭೂಮಿ ಇದೆ. ಆದ್ದರಿಂದ ಈ ಭಾಗದಲ್ಲೇ ಹೊಸ ನಿಲ್ದಾಣ ಸ್ಥಾಪನೆಯಾಗಲಿ ಎಂಬುದು ರಘುಮೂರ್ತಿ ಅವರ ಒತ್ತಾಸೆಯಾಗಿದೆ.

ಬೆಂಗಳೂರಲ್ಲಿ ಈಗಾಗಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಎಚ್‌ಎಎಲ್ ವಿಮಾನ ನಿಲ್ದಾಣಗಳಿವೆ. ಮತ್ತೆ ಬೆಂಗಳೂರು ಸುತ್ತಮುತ್ತವೇ ಯಾಕೆ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೇಕು? ಮಧ್ಯ ಕರ್ನಾಟಕದಲ್ಲಿ ಹೊಸ ನಿಲ್ದಾಣ ಸ್ಥಾಪನೆಯಾದರೆ ಮಧ್ಯ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳ ಜನರ ಉದ್ಯೋಗ, ವಹಿವಾಟು, ಕೈಗಾರಿಕೆ, ಕೃಷಿ,ಪ್ರವಾಸೋದ್ಯಮ ಮೊದಲಾದ ಆರ್ಥಿಕ ಚಟುವಟಿಕೆಗಳಿಗೆ ವ್ಯಾಪಕವಾಗಿ ಅನುಕೂಲವಾಗಲಿದೆ.

ಆದ್ದರಿಂದ ಚಿತ್ರದುರ್ಗದಲ್ಲೇ ಹೊಸ ವಿಮಾನ ನಿಲ್ದಾಣ ನಿರ್ಮಿಸಬೇಕು ಎಂದು ಒತ್ತಾಯಿಸಿ ಉತ್ತರ, ಮಧ್ಯ ಕರ್ನಾಟಕ ಜಿಲ್ಲೆಗಳ ಎಲ್ಲ ಶಾಸಕರ ಜತೆಗೂಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸಲು ರಘುಮೂರ್ತಿ ಮುಂದಾಗಿದ್ದಾರೆ.

ಸೈನ್ಸ್ ಸಿಟಿ ಖ್ಯಾತಿಯ ಚಳ್ಳಕೆರೆ ತಾಲೂಕು ಕುದಾಪುರದ ವಿಶಾಲ ಪ್ರದೇಶದಲ್ಲಿ ಇಸ್ರೋ, ಬಾರ್ಕ್, ಡಿಆರ್‌ಡಿಒ ಹಾಗೂ ಐಐಎಸ್‌ಸಿ ಸ್ಥಾಪನೆಯಾಗಿವೆ. ಡಿಆರ್‌ಡಿಒದ ವೈಮಾನಿಕ ಪರೀಕ್ಷಾ ತಾಣವೂ(ಎಟಿಆರ್)ಇಲ್ಲಿದೆ. ಹಿಂದಿನ ಕೇಂದ್ರ ಮಂತ್ರಿ ಎ. ನಾರಾಯಣಸ್ವಾಮಿ ಅವರು ದುರ್ಗದಲ್ಲಿ ನಾಗರಿಕ ವಿಮಾನ ನಿಲ್ದಾಣಕ್ಕಾಗಿ ಡಿಆರ್‌ಡಿಒದ ಎಟಿಆರ್ ಬಳಕೆಗೆ ಹಾಗೂ ಈ ಭಾಗದಲ್ಲಿ ವೈಮಾನಿಕ ರಕ್ಷಣಾ ಉತ್ಪಾದನಾ ಘಟಕ ಸ್ಥಾಪನೆ ಕುರಿತಂತೆ ಕೇಂದ್ರ ರಕ್ಷಣಾ ಸಚಿವರ ಜತೆ ಚರ್ಚಿಸಿದ್ದಾಗಿ ಈ ಹಿಂದೆ ಹೇಳಿದ್ದರು.

ಚಿತ್ರದುರ್ಗದ ಮಾಜಿ ಸಂಸದ, ಇಸ್ರೋ, ಡಿಆರ್‌ಡಿಒ, ಐಐಎಸ್‌ಸಿ ಹಾಗೂ ಬಾರ್ಕ್ ಸಂಸ್ಥೆಗಳ ಒಕ್ಕೂಟದ ಮಾಜಿ ಅಧ್ಯಕ್ಷ ಜನಾರ್ದನ ಸ್ವಾಮಿ ಅವರ ಅಧಿಕಾರಾವಧಿಯಲ್ಲೂ ಎಟಿಆರ್‌ನ್ನು ಭವಿಷ್ಯದಲ್ಲಿ ನಾಗರಿಕರ ಪ್ರಯಾಣಕ್ಕೆ ಬಿಟ್ಟುಕೊಡುವ ಕುರಿತೂ ಚರ್ಚೆಯಾಗಿತ್ತಂತೆ.

--

ಕೋಟ್

ಚಿತ್ರದುರ್ಗ ಜಿಲ್ಲೆಯಲ್ಲಿ ಇಂಟರ್ ನ್ಯಾಷನಲ್ ಏರ್‌ಪೋರ್ಟ್ ಸ್ಥಾಪಿಸುವಂತೆ ಸದನದಲ್ಲಿ ಪ್ರಸ್ತಾಪಿಸಿದ್ದೇನೆ. ಮಧ್ಯ,ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಆದ್ದರಿಂದ ಈ ಎಲ್ಲ ಜಿಲ್ಲೆಗಳ ಶಾಸಕರೊಂದಿಗೆ ಪಕ್ಷಾತೀತವಾಗಿ ರಾಜ್ಯ, ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸಲಾಗುವುದು. ತುಮಕೂರು ಜಿಲ್ಲೆಯಲ್ಲಿ 2ನೇ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ಗೆ ಅನೇಕರು ಒತ್ತಾಯಿಸುತ್ತಿದ್ದಾರೆ. ಚಿತ್ರದುರ್ಗದಲ್ಲಿ ಇಂಟರ್ ನ್ಯಾಷನಲ್ ಏರ್‌ಪೋರ್ಟ್ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಮನವರಿಕೆ ಮಾಡುತ್ತೇವೆ.

ಟಿ. ರಘುಮೂರ್ತಿ, ಶಾಸಕ, ಚಳ್ಳಕೆರೆ

---