ಬಾಗಲಕೋಟೆ: ಹೈದರಾಲಿಯ ಸೈನ್ಯದೊಂದಿಗೆ ಏಕಾಂಗಿಯಾಗಿ ಹೋರಾಡಿದ ಚಿತ್ರದುರ್ಗ ಸಾಮ್ರಾಜ್ಯದ ಧೀರ ಮಹಿಳೆ ವೀರ ವನಿತೆ ಒನಕೆ ಓಬವ್ವ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹನಮರಟ್ಟಿ ಹೇಳಿದರು.
ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವೀರ ಒನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಿತ್ರದುರ್ಗ ಕೋಟೆಯೊಳಗೆ ಶತ್ರುಗಳು ಪ್ರವೇಶಿಸದಂತೆ ತಡೆಯಲು ತೋರಿದ ಅಪಾರ ಧೈರ್ಯ ಮುಂದಿನ ಪೀಳಿಗೆಗೆ ಪ್ರತಿಕೂಲ ಸ್ಥಿತಿಯಲ್ಲಿಯೂ ನಿರಾಶೆಗೊಳ್ಳದಂತೆ ತೋರಿಸಿಕೊಟ್ಟ ಉತ್ತಮ ಉದಾಹರಣೆಯಾಗಿದೆ ಎಂದರು.
ಜಿಲ್ಲೆಯಲ್ಲಿರುವ ಬಾಲಕಿಯರ ವಸತಿ ನಿಲಯ, ಕಾಲೇಜುಗಳಲ್ಲಿ ನುರಿತ ತರಬೇತುದಾರರಿಂದ ಓಬವ್ವ ಹೆಸರಿನಲ್ಲಿ ಆತ್ಮರಕ್ಷಣೆ ಕಲೆ ಹಾಗೂ ಕರಾಟೆಗಳಂತಹ ತರಬೇತಿಗಳನ್ನು ನೀಡಲಾಗುವುದು. ಇಂತಹ ದೀರ ಮಹಿಳೆಯ ತತ್ವ, ಸಾಹಸದಂತಹ ಆದರ್ಶಗಳನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಚಿಂತಕ ಪರಶುರಾಮ ಮಹಾರಾಜನವರ ಮಾತನಾಡಿ, ಭಾರತ ಅಷ್ಟೇ ಅಲ್ಲ ಪ್ರಪಂಚದ ಇತಿಹಾಸದಲ್ಲಿ ಬರೆದಿಡುವಂತಹ ಸಾಧನೆಯನ್ನು ಒನಕೆ ಓಬವ್ವ ಮಾಡಿದ್ದಾರೆ. ರಾಜ ವಂಶಕ್ಕೆ ಸೇರಿದ ಕಿತ್ತೂರ ಚನ್ನಮ್ಮ, ರಾಣಿ ಅಬ್ಬಕ್ಕ, ರಾಣಿ ದುರ್ಗಾವತಿ ಅವರು ಕತ್ತಿಯನ್ನು ಹಿಡಿದುಕೊಂಡು ಕುದುರೆ ಸವಾರಿ ಮಾಡಿಕೊಂಡು ಯುದ್ಧಗಳನ್ನು ಮಾಡಿರುವದನ್ನು ನೋಡಿದ್ದೇವೆ. ಆದರೆ ಓಬವ್ವ ಯಾವುದೇ ರೀತಿಯ ಯುದ್ದದ ಕಲೆಯನ್ನು ಪಡೆಯದೇ ಹೈದರಾಲಿಯ ಸೈನ್ಯದೊಂದಿಗೆ ಏಕಾಂಗಿಯಾಗಿ ಹೋರಾಡಿದ ಧೀರ ಮಹಿಳೆ ಎಂದರು.
ಲಾವನಿ ಹಾಡುಗಳ ಮೂಲಕ ಒನಕೆ ಓಬವ್ವನ ಇತಿಹಾಸವನ್ನು ಕೇಳಬಹುದು. ಪುಟ್ಟಣ ಕಣಗಾಲ್ ನಿರ್ದೇಶಿಸಿ ನಾಗರಹಾವು ಚಿತ್ರದ ಪ್ರಸಿದ್ದ ಭಾವಗೀತೆಗಳು ಅವರ ಪ್ರಸಿದ್ದ ಪ್ರಯತ್ನವನ್ನು ಚಿತ್ರಿಸುತ್ತದೆ. ಸಾಹಸ ತೋರಿದ ಓಬವ್ವ ವಂಶದ ಇಬ್ಬರು ಸಹೋದರರು ಸಾಹಸ ತೋರಿದವರು. ಕೋಟೆ ಇತಿಹಾಸದಲ್ಲಿ ಕೊನೆಯ ರಾಜ ರಾಜ ಮದಕರಿನಾಯಕರ ಅವಧಿಯಲ್ಲಿ ಸಾಹಸಮಯ ಕಾರ್ಯ ನಡೆದಿದೆ. ಇಂತಹ ಧೀರ ಮಹಿಳೆಯ ತತ್ವ ಆದರ್ಶಗಳನ್ನು ನಾವೆಲ್ಲರೂ ಅನುಸರಿಸುವ ಅಗತ್ಯವಿದೆ. ಇಂದಿಗೂ ಚಿತ್ರದುರ್ಗದಲ್ಲಿ ೭ನೇ ತಲೆಮಾರಿನವರು ಇದ್ದಾರೆ ಎಂದು ತಿಳಿಸಿದರು. ಅವರು ಜೀವನ ಚರಿತ್ರೆ ಕುರಿತು ಪುಸ್ತಕ ಹೊರತರುವ ಕೆಲಸ ಮಾಡಲಾಗುವುದೆಂದು ತಿಳಿಸಿದರು.
ಗ್ರೇಡ್-೨ ತಹಸೀಲ್ದಾರ ಎಂ.ಬಿ.ಬಿರಾದಾರ, ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸೈರಬಾನು ನದಾಫ್ ಮಾತನಾಡಿದರು. ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರ ರಮೇಶ ಚವ್ಹಾಣ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ ಸಹಾಯಕ ಯೋಜನಾಧಿಕಾರಿ ತಳವಾರ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಸಿ.ಗೂಡನವರ, ಕಾರ್ಮಿಕ ಅಧಿಕಾರಿ ಬಿ.ಆರ್.ಜಾಧವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಸೇರಿದಂತೆ ಸಮುದಾಯ ಮುಖಂಡರಾದ ಯಲ್ಲಪ್ಪ ಬೆಂಡಿಗೇರಿ ಹಾಗೂ ಇತರರು ಉಪಸ್ಥಿತರಿದ್ದರು.