ಜಿಲ್ಲೆ

ಚಿತ್ರದುರ್ಗ ಜಿಲ್ಲೆಗೆ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಭೇಟಿ

ಚಿತ್ರದುರ್ಗ: ಜಿಲ್ಲೆಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಭೇಟಿ ನೀಡಲಿದ್ದು,ಜ.23ರಂದು ಜಿಪಂದಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ದಾಖಲಾಗಿರುವ 73 ಪ್ರಕರಣಗಳ ಕುರಿತು ವಿಚಾರಣೆ ನಡೆಸಲಿದ್ದಾರೆ ಎಂದು ಡಿಸಿ ಟಿ.ವೆಂಕಟೇಶ್ ಹೇಳಿದರು.

ಜಿಲ್ಲಾಧಿಕಾರಿಯಲ್ಲಿ ಗುರುವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ,ಅಂದು ಬೆಳಗ್ಗೆ 11ರಿಂದ 1.30 ವರೆಗೆ ಮತ್ತು ಮಧ್ಯಾಹ್ನ 2.30 ರಿಂದ ಸಂಜೆ 5ರವರೆಗೆ ಪ್ರಕರಣಗಳ ಕುರಿತಂತೆ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಉಪ ಲೋಕಾಯುಕ್ತರ ವಿಚಾರಣೆ ನಡೆಸಲಿದ್ದಾರೆ.

ಸಂಬಂಧಿಸಿದ ಇಲಾಖೆ ಮುಖ್ಯಸ್ಥರು ದೂರುದಾರಿಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಬೇಕು. ಕೆಲವು ದೂರುಗಳು ವೈಯಕ್ತಿಕ ಹೆಸರಲ್ಲಿ ದಾಖಲಾಗಿವೆ. ಆ ಅಧಿಕಾರಿಗಳು ಬೇರೆಡೆ ವರ್ಗಾವಣೆಯಾಗಿದ್ದರೆ,ಅವರ ಸ್ಥಾನದಲ್ಲಿರುವ ಅಧಿಕಾರಿಗಳು ಪ್ರಕರಣದ ಮಾಹಿತಿ ಹಾಗೂ ಸ್ಥಿತಿಗತಿಯನ್ನು ವಿಚಾರಣೆ ವೇಳೆ ತಿಳಿಸಬೇಕೆಂದರು.

ಜ.22ರಂದು ಸಾರ್ವಜನಿಕ ಅಹವಾಲು ಸ್ವೀಕಾರ

ನಗರದ ಎಸ್.ಜಿ.ಕಲ್ಯಾಣ ಮಂಟಪದಲ್ಲಿ ಉಪಲೋಕಾಯುಕ್ತರು ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 5ರವರೆಗೆ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕರಿಸುವರು. ತೊಂದರೆಗೆ ಒಳಗಾಗದ ಸಾರ್ವಜನಿಕರು ಅರ್ಜಿ ನಮೂನೆ-1 ಮತ್ತು ನಮೂನೆ-2ರಲ್ಲಿ ದಾಖಲೆ, ಸಾಕ್ಷ್ಯಾಧಾರಗಳೊಂದಿಗೆ ದೂರು ಸಲ್ಲಿಸಬಹುದು. ಈ ವೇಳೆ ಎಲ್ಲ ಜಿಲ್ಲಾ ಮಟ್ಟ ದ ಅಧಿಕಾರಿಗಳು ಸ್ಥಳದಲ್ಲಿರಬೇಕೆಂದು ಡಿಸಿ ಸೂಚಿಸಿದರು.

ಕೇಂದ್ರ ಸ್ಥಾನದಲ್ಲಿರಲು ತಾಕೀತು

ಉಪಲೋಕಾಯುಕ್ತರ ಭೇಟಿ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ತಪ್ಪದೇ ಕೇಂದ್ರ ಸ್ಥಾನದಲ್ಲಿರ ಬೇಕು. ವೈದ್ಯಕೀಯ ಕಾ ರಣ ಹೊರತು ಪಡಿಸಿ ಈ ಅವಧಿ ಗೈರು ಹಾಜರಾಗುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. 24 ರಂದು ಉಪ ಲೋಕಾಯುಕ್ತರು ಜಿಲ್ಲೆಯ ಹಾಸ್ಟೆಲ್,ಕಚೇರಿಗಳು, ಆಸ್ಪತ್ರೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದರು.

ಜಿ.ಪಂ.ಸಿಇಒ ಎಸ್‌ಜೆ ಸೋಮಶೇಖರ್,ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ,ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ , ಎಸಿ ಎಂ.ಕಾರ್ತಿಕ್ ಮತ್ತಿತರ ಅಧಿಕಾರಿಗಳಿದ್ದರು.