ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಬರ ಪರಿಹಾರ ಬಿಡುಗಡೆಗೆ ಸಂಬಂಧಿಸಿದಂತೆ ಕೇಂದ್ರ, ರಾಜ್ಯ ಸರ್ಕಾರಗಳ ಮುಸುಕಿನ ಗುದ್ದಾಟದ ನಡುವೆ ಬೆಳೆ ನಷ್ಟ ಪರಿಹಾರ ವಿತರಿಸಲು ಈ ಬಾರಿ ಫ್ರೂಟ್ಸ್ ಐಡಿ ನೋಂದಣಿ ಕಡ್ಡಾಯಗೊಳಿಸಲಾಗಿದೆ.
ವಿತರಣೆಯಲ್ಲಿ ಆಗಬಹುದಾದ ಗೊಂದಲ, ದುರ್ಬಳಕೆ ತಪ್ಪಿಸಲು ಫ್ರೂಟ್ಸ್ ತಂತ್ರಾಂಶದ ನೆರವು ಪಡೆಯಬಹುದೆಂಬ ಚಿತ್ರದುರ್ಗ ಜಿಲ್ಲಾಡಳಿತದ ಸಲಹೆಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮನ್ನಣೆ ನೀಡಿದೆ. ರಾಜ್ಯದ ಬರಪೀಡಿತ 216 ತಾಲೂಕುಗಳ ರೈತರಿಗೆ ಪರಿಹಾರ ವಿತರಿಸಲು ಫ್ರೂಟ್ಸ್ ಐಡಿ ಮತ್ತು ಬೆಳೆ ಸಮೀಕ್ಷೆ ಕಡ್ಡಾಯಗೊಳಿಸಿದೆ.
ಈ ಹಿಂದೆ ಪರಿಹಾರ ತಂತ್ರಾಂಶದಲ್ಲಿ ಗ್ರಾಮಲೆಕ್ಕಾಧಿಕಾರಿಗಳು, ಬೆಳೆನಷ್ಟ ವಿವರ ನಮೂದಿಸಬೇಕಿತ್ತು. ಪಹಣಿ ಮತ್ತು ಆಧಾರ್‌ನಲ್ಲಿ ವ್ಯತ್ಯಾಸಗಳಿದ್ದರೆ ಸರಿಪಡಿಸಲು ತಹಸೀಲ್ದಾರ್‌ಗೆ ಅಧಿಕಾರ ಕೊಡಲಾಗಿತ್ತು. ತಹಸೀಲ್ದಾರ್ ಲಾಗಿನ್ ಮೂಲಕ ತಿದ್ದುಪಡಿ ಆಗುತ್ತಿತ್ತು. ಆದರೆ, ಅಲ್ಲೂ ಸಾಕಷ್ಟು ದೂರು ಕೇಳಿ ಬಂದ ಕಾರಣ ವ್ಯತ್ಯಾಸ ಸರಿಪಡಿಸಲು, ಉಪವಿಭಾಗಾಧಿಕಾರಿಗೆ ಅಧಿಕಾರ ಕೊಡಬೇಕೆಂಬ ಸಲಹೆ ಕೇಳಿ ಬಂದಿತ್ತು.
ಆದರೆ, ಫ್ರೂಟ್ಸ್ ಐಡಿ ಕಡ್ಡಾಯಗೊಳಿಸಿದರೆ ಗೊಂದಲ ತಪ್ಪಿಸಬಹುದೆಂದು ಚಿತ್ರದುರ್ಗ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಸಲಹೆ ನೀಡಿದ್ದರು. ಇದಕ್ಕೆ ಅಸ್ತು ಎಂದಿರುವ ಪ್ರಾಧಿಕಾರ, ಬೆಳೆ ಸಮೀಕ್ಷೆ ಮತ್ತು ಫ್ರೂಟ್ಸ್ ಐಡಿ ಅನ್ನು ಪರಿಹಾರ ತಂತ್ರಾಂಶಕ್ಕೆ ಹೊಂದಿಸಿ ಬೆಳೆನಷ್ಟ ಪರಿಹಾರ ವಿತರಿಸುವಂತೆ ಸೂಚಿಸಿದೆ.
*ಡಿಸೆಂಬರ್ 10 ರೊಳಗೆ ಪೂರ್ಣ : ಕಳೆದ ಅಕ್ಟೋಬರ್ 11 ರಿಂದ ನಡೆಯುತ್ತಿರುವ ಫ್ರೂಟ್ಸ್ ನೋಂದಣಿ ಕಾರ‌್ಯವನ್ನು ಡಿಸೆಂಬರ್ 10 ರೊಳಗೆ ಪೂರ್ಣಗೊಳಿಸುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಜಿಲ್ಲಾಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ ಹಾಗೂ ಕಂದಾಯ ಇಲಾಖೆಗಳೂ ಕೃಷಿ ಇಲಾಖೆಯೊಂದಿಗೆ ನೋಂದಣಿಗೆ ಕೈ ಜೋಡಿಸಿವೆ.
ಸಾಲ ವಿತರಣೆ, ವಿಮಾ ಪರಿಹಾರ ಮತ್ತಿತರ ವಿವಿಧ ಸೌಲಭ್ಯಗಳ ವಿತರಣೆ ಹಾಗೂ ಎಂಎಸ್‌ಪಿಗೆ ವಿಶಿಷ್ಟ ಗುರುತಿನ ಸಂಖ್ಯೆ ಐಡಿ ಕಡ್ಡಾ ಯವಾಗಿದೆ. ಐಡಿ ಪಡೆದ ರೈತರು ತಮ್ಮ ಜಮೀನಿನ ಸರ್ವೇ ನಂಬರ್ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕಿದೆ. ನೋಂದಾಯಿಸದಿರು ವ ರೈತರು ಕೂಡಲೇ ಆಧಾರ್, ಪಹಣಿ, ಜಾತಿ ಪ್ರಮಾಣಪತ್ರ ಮತ್ತು ಬ್ಯಾಂಕ್ ಖಾತೆ ವಿವರ ನೋಂದಾಯಿಸಬೇಕಿದೆ. ಸರ್ಕಾರಿ ಮತ್ತು ಎನ್‌ಎ ಲ್ಯಾಂಡ್ ಹೊರತುಪಡಿಸಿ ರಾಜ್ಯದಲ್ಲಿ ಅಂದಾಜು 2.24 ಕೋಟಿಗೂ ಅಧಿಕ ತಾಕುಗಳಿದ್ದು, 83.79 ಲಕ್ಷ ತಾಕುಗಳ ವಿವರ ನೋಂದಣಿ ಆಗಬೇಕಿದೆ.
*ಗದಗ ಮೊದಲು: ರಾಜ್ಯದಲ್ಲಿ ಕಳೆದ ಅಕ್ಟೋಬರ್ 11 ರಿಂದ ಡಿ.4 ರ ಅಂತ್ಯದವರೆಗೆ ನೋಂದಣಿಯಲ್ಲಿ ಗದಗ ಜಿಲ್ಲೆ (ಶೇ.79.45) ಪ್ರಥಮ ಸ್ಥಾನದಲ್ಲಿದೆ. ನಂತರದಲ್ಲಿ ಬಾಗಲಕೋಟೆ (ಶೇ.78.91), ದಾವಣಗೆರೆ (ಶೇ.74.77), ಚಿತ್ರದುರ್ಗ (ಶೇ.73.38) ಜಿಲ್ಲೆಗಳಿವೆ.
*ಕೋಟ್
ಪರಿಹಾರ ವಿತರಣೆಗೆ ಸಂಬಂಧಿಸಿದ 3 ಪ್ರಕರಣಗಳು ನಮ್ಮ ಜಿಲ್ಲೆಯಲ್ಲಿ ದಾಖಲಾಗಿವೆ. ಪರಿಹಾರ ಮೊತ್ತ ದುರ್ಬಳಕೆ, ವಿತರಣೆ ಗೊಂದಲ ತಪ್ಪಿಸಲು ಫ್ರೂಟ್ಸ್ ಐಡಿ, ಬೆಳೆ ಸಮೀಕ್ಷೆ ಕಡ್ಡಾಯಕ್ಕೆ ಸಲಹೆ ಕೊಡಲಾಗಿತ್ತು. ಬೇರೆ ಜಿಲ್ಲೆಗಳಿಂದಲೂ ಪೂರಕವಾದ ಸಲಹೆಗಳಿರಬಹುದು. ಆದರೆ, ಫ್ರೂಟ್ಸ್ ಐಡಿ ಕಡ್ಡಾಯದಿಂದಾಗಿ ನಮ್ಮ ಜಿಲ್ಲೆಯ ಸಲಹೆಗೆ ಮಾನ್ಯತೆ ಸಿಕ್ಕಂತಾಗಿದೆ.
ಜಿಆರ್‌ಜೆ ದಿವ್ಯಾಪ್ರಭು, ಜಿಲ್ಲಾಧಿಕಾರಿ, ಚಿತ್ರದುರ್ಗ
*ಕೋಟ್
ವಿವಿಧ ಸರ್ಕಾರಿ ಸವಲತ್ತುಗಳಿಗೆ ಫ್ರೂಟ್ಸ್ ಐಡಿ ಕಡ್ಡಾಯವಾಗಿರುವುದರಿಂದ ರೈತರು ಮುತುವರ್ಜಿವಹಿಸಿ ನೋಂದಾಯಿಸಿಕೊಳ್ಳ ಬೇಕು. ಇದರಿಂದ ಅರ್ಹರಿಗೆ ತ್ವರಿತವಾಗಿ ಸವಲತ್ತು ತಲುಪಿಸಲು ಅನುಕೂಲವಾಗುತ್ತದೆ.
ಚಂದ್ರಕುಮಾರ್ ಕೃಷಿ ಇಲಾಖೆ, ಸಹಾಯಕ ನಿರ್ದೇಶಕ