ಜಿಲ್ಲೆ

ಚಿತ್ರಗಳಲ್ಲಿ ಸಾಮಾಜಿಕ ಜವಾಬ್ದಾರಿ ಇರಲಿ

ಮೈಸೂರು: ಸಾಮಾಜಿಕ ಜವಾಬ್ದಾರಿಯಿಂದ ಚಲನಚಿತ್ರ ನಿರ್ಮಾಣ ಮಾಡಬೇಕು ಎಂದು ಸಿನಿಮಾ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
ಅಮೃತ ವಿಶ್ವವಿದ್ಯಾಪೀಠಂನ ದೃಶ್ಯಸಂವಹನ ವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ‘ಸಿನಿರಮಾ-2023’ ರಾಷ್ಟ್ರಮಟ್ಟದ ಕಿರುಚಿತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಮಾರ್ಕೆಟಿಂಗ್ ಯುಗದಲ್ಲಿ ಕಲೆ ಸಹ ಮಾರಾಟದ ಸರಕು. ಅದು ಬೇಕೋ, ಬೇಡವೋ ಅನಿವಾರ್ಯವಾಗಿ ನಮ್ಮನ್ನು ಆವರಿಸಿದೆ. ಜಗತ್ತಿನೊಂದಿಗೆ ಸ್ಪರ್ಧಿಸಬೇಕಾದ ಅಗತ್ಯವಿದೆ. ಸಾಕಷ್ಟು ಜಾಗತಿಕ ಸವಾಲುಗಳು ಇವೆ. ಇದನ್ನೆಲ್ಲ ಒಪ್ಪಿಕೊಂಡು ನಾವು ಏನನ್ನು ಸೃಷ್ಟಿಸಬೇಕು ಎಂಬುದನ್ನು ದೃಷ್ಟಿಯಲ್ಲಿರಿಸಿಕೊಳ್ಳಬೇಕು. ಇದರೊಂದಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು ಎಂದರು.

ದೃಶ್ಯ ಮಾಧ್ಯಮ ಪ್ರಭಾವಶಾಲಿಯಾದದ್ದು. ಅದರಲ್ಲೂ ಸಿನಿಮಾ ಸಮಾಜಕ್ಕೆ ಅತಿ ದೊಡ್ಡ ಸಂದೇಶ ನೀಡುವ ಮಹತ್ವದ ಮಾಧ್ಯಮ. ಅವು ಸಮಾಜವನ್ನು ಕಟ್ಟಬಲ್ಲವು ಅಥವಾ ಇಡೀ ಸಮಾಜದ ಪಥವನ್ನು ಬದಲಿಸಬಲ್ಲವು ಎಂದರು.


ಮೊಬೈಲ್ ಫೋನ್‌ಗಳು ತಂತ್ರಜ್ಞಾನದ ದೃಷ್ಟಿಯಿಂದ ಮುಂದುವರಿದಿದ್ದು, ದೃಶ್ಯಮಾಧ್ಯಮದ ಯಾವುದೇ ಹೊಸ ಸಾಧ್ಯತೆಗಳಿಗೆ ಪೂರಕವಾಗಿವೆ. ದೃಶ್ಯಮಾಧ್ಯಮದ ಯಾವುದೇ ಪ್ರೊಡಕ್ಷನ್‌ಗೆ ಬೇಕಾದ ಎಲ್ಲ ಅಂಶಗಳು ಅದರಲ್ಲಿದ್ದು, ಒಂದು ಸಿನಿಮಾವನ್ನೇ ಮೊಬೈಲ್ ಮೂಲಕ ನಿರ್ಮಾಣ ಮಾಡಬಹುದಾಗಿದೆ ಎಂದರು.


ಪೂರ್ಣಪ್ರಮಾಣದ ಚಲನಚಿತ್ರಗಳು ಮಾತ್ರವೇ ಸಿನಿಮಾಗಳಲ್ಲ; ಅತ್ಯಂತ ಮಹತ್ವದ ಸಂದೇಶ ಹೊಂದಿರುವ ಕಿರುಚಿತ್ರಗಳು ಕೂಡ ಅತ್ಯಂತ ಪ್ರಭಾವಶಾಲಿ ಮಾಧ್ಯಮವೇ. ಒಂದು ಪೂರ್ಣಪ್ರಮಾಣದ ಚಿತ್ರ ಎರಡೂವರೆ ಗಂಟೆಗಳಲ್ಲಿ ಕೊಡಬಹುದಾದ ಸಂದೇಶವನ್ನು, ಸೃಷ್ಟಿಸಬಹುದಾದ ಅದ್ಭುತವನ್ನು ಕಿರುಚಿತ್ರವೂ ಅದಕ್ಕಿಂತ ಪರಿಣಾಮಕಾರಿಯಾಗಿ ಕಟ್ಟಿಕೊಡಬಲ್ಲವು. ಕಿರುಚಿತ್ರದ ಗರ್ಭದಾಳದಲ್ಲಿ ಒಂದು ಮಹಾಕಾವ್ಯವೇ ಅಡಗಿರುತ್ತದೆ. ಆದರೆ, ಅದನ್ನು ಸೃಷ್ಟಿಸುವ ಮನಸ್ಸುಗಳು ಆರ್ದ್ರವಾಗಿರಬೇಕು. ಸಮಾಜದ ಆಗುಹೋಗುಗಳಿಗೆ ಮಿಡಿಯುವಷ್ಟು ಅವು ಸೂಕ್ಷ್ಮವಾಗಿರಬೇಕು ಎಂದು ಅವರು ತಿಳಿಸಿದರು.


ನಟ, ರಂಗನಿರ್ದೇಶಕ ಮಂಡ್ಯ ರಮೇಶ್ ಮಾತನಾಡಿ, ಸಿನಿಮಾ ನಿರ್ಮಾಣಕ್ಕಿಳಿಯುವವರು ಪ್ರಬುದ್ಧವಾಗಿರಬೇಕು. ನಮ್ಮ ಸುತ್ತ ಮುತ್ತ ಸಾಕಷ್ಟು ಕಥೆಗಳಿದ್ದು ಅವುಗಳನ್ನು ಗ್ರಹಿಸುವ ಸೂಕ್ಷ್ಮಮನಸ್ಸು ಒಬ್ಬ ನಿರ್ದೇಶಕನಿಗಿರಬೇಕಾಗುತ್ತದೆ. ಅಪರಿಮಿತ ತಾಳ್ಮೆ, ಸವಾಲು ಎದುರಿಸುವ ಶಕ್ತಿ, ಎಂಥದ್ದೇ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯ ಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿರುವವರಿಗೆ ಇರಬೇಕಾದದ್ದು ಮುಖ್ಯ ಎಂದರು.


ಚಿತ್ರನಿರ್ದೇಶನದಲ್ಲಿ ತೊಡಗಿಕೊಳ್ಳುವವರು ಸಾಹಿತ್ಯವನ್ನು ಆಳವಾಗಿ ಅಭ್ಯಾಸಿಸಬೇಕು. ನಮ್ಮ ಸಾಹಿತ್ಯದಲ್ಲಿ ಶ್ರೇಷ್ಠ ಅಂಶಗಳಿದ್ದು ಅದನ್ನು ಓದುವವರಿಗೆ ಬದುಕಿನ ಸೂಕ್ಷ್ಮತೆಗಳ ಬಗ್ಗೆ ಹೊಸ ಹೊಳಹುಗಳು ಸಿಗುತ್ತವೆ. ಅವರ ಮನಸ್ಸು ಮತ್ತಷ್ಟು ಪ್ರಬುದ್ಧವಾಗುತ್ತದೆ. ಜತೆಗೆ ದಿನಪತ್ರಿಕೆ ಓದುವುದು ಯಾವುದೇ ಕ್ಷೇತ್ರದ ಬಗೆಗಿನ ಜ್ಞಾನವನ್ನು ವೃದ್ಧಿಸುತ್ತದೆ. ತಂಡ ಕಟ್ಟಿಕೊಂಡು ಕ್ಯಾಮರಾ ಹಿಡಿದಾಕ್ಷಣ ಒಂದು ಚಲನಚಿತ್ರವಾಗಲು ಸಾಧ್ಯವೇ ಇಲ್ಲ. ಅದರ ಜತೆಗೆ ಆಳವಾದ ಸಂಶೋಧನೆ, ಜ್ಞಾನ, ಸಮಾಜಕ್ಕಾಗಿ ತುಡಿಯುವ ಮನಸ್ಸುಗಳು ಬೇಕೇ ಬೇಕು. ಅಂದಾಗ ಮಾತ್ರ ಒಂದು ಚಿತ್ರ ತಯಾರಾಗಲು ಸಾಧ್ಯ ಎಂದರು.


ಮೈಸೂರು ಕ್ಯಾಂಪಸ್‌ನ ನಿರ್ದೇಶಕ ಬ್ರಹ್ಮಚಾರಿ ಅನಂತಾನಂದ ಚೈತನ್ಯ, ಪ್ರಾಂಶುಪಾಲ ಡಾ.ಜಿ. ರವೀಂದ್ರನಾಥ್, ಶೈಕ್ಷಣಿಕ ಸಂಯೋಜಕ ಡಾ.ರೇಖಾ ಭಟ್, ದೃಶ್ಯ ಸಂವಹನ ವಿಭಾಗದ ಮುಖ್ಯಸ್ಥೆ ಡಾ.ಮೌಲ್ಯ ಬಾಲಾಡಿ ಇತರರು ಉಪಸ್ಥಿತರಿದ್ದರು.