ಜಿಲ್ಲೆ

ಚಿತ್ರಗಳಲ್ಲಿ ಲಾಕ್ ಡೌನ್ ಬವಣೆ ಸೆರೆ

ಬೀದರ್: ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ರಾಜ್ಯ ಪತ್ರಿಕಾ ಛಾಯಾಗ್ರಾಹಕರ ಸಂಘ ಮೂರು ದಿನ ಕರೊನಾ ಲಾಕ್ ಡೌನ್ ಬವಣೆಯ ಕುರಿತು ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿತ್ತು. ಇರದಲ್ಲಿ ಬೀದರ್ ನ ಹಿರಿಯ ಛಾಯಾಗ್ರಾಹಕ ಗೋಪಿಚಂದ ತಾಂದಳೆ ಅವರು ಕರೊನಾ ಸಂಕಷ್ಟದಲ್ಲಿ ತಗೆದ ಪೋಟೋಗಳು ಪ್ರದರ್ಶನವೂ ನಡೆಯಿತು.

ಲಾಕ್ ಡೌನ್ ವೇಳೆ ಜನರ ಬವಣೆಗಳನ್ನು ಅತ್ಯಂತ ಕಲಾಕೃತಕವಾಗಿ ಸೆರೆಹಿಡಿದ ಛಾಯಾಚಿತ್ರಗಳು ಪ್ರದರ್ಶನದಲ್ಲಿ ಗಮನ ಸೆಳೆದವು. ಸಿಎಂ ಯಡಿಯೂರಪ್ಪ ಅವರು ಪ್ರದರ್ಶನಕ್ಕೆ ಚಾಲನೆ ನೀಡಿ, ಸಂಕಷ್ಟಗಳ ವೇಳೆ ಸಾಕಷ್ಟು ಕಷ್ಟಪಟ್ಟು ಸೆರೆಹಿಡಿಯುವಂಥ ಫೋಟೋಗಳು ಇತಿಹಾಸದ ಪುಟ ಸೇರುತ್ತವೆ ಎಂದರು. ಹಿಂದಿನ ವರ್ಷ ಆಯೋಜಿಸಿದ್ದ ನೆರೆ ಹಾವಳಿ ಫೋಟೋ ಪ್ರದರ್ಶನವನ್ನು ಸಹ ಸ್ಮರಿಸಿದರು.

ಹಿರಿಯ ಪತ್ರಕರ್ತ ರವಿ ಹೆಗಡೆ ಮಾತನಾಡಿ, ಛಾಯಾಗ್ರಾಹಕರ ಕೈಚಳಕದಿಂದ ಜನಜೀವನದ ದೃಶ್ಯಗಳು ಮುಂದೊಂದು ದಿವಸ ಇತಿಹಾಸವಾಗುತ್ತವೆ. ಪ್ರಸ್ತುತ ಪ್ರದರ್ಶನವಾಗುತ್ತಿರುವ ಚಿತ್ರಗಳು ಭವಿಷ್ಯದಲ್ಲಿ ಎದುರಾಗುವ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಅರಿವು ಮೂಡಿಸಲು ನೆರವಾಗಲಿವೆ. ಎಲ್ಲ ಚಿತ್ರಗಳು ಸಂಗ್ರಹಯೋಗ್ಯವಾಗಿದ್ದು ಮ್ಯೂಸಿಯಂ ಆಗಬೇಕು ಎಂದು ಹೇಳಿದರು.

ಲಾಕ್ ಡೌನ್ ವೇಳೆಗಿನ ಜನರ ಬವಣೆಗಳನ್ನು ಸೆರೆ ಹಿಡಿದಿದ್ದ 102 ಫೋಟೋಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ರಾಜ್ಯದ ಎಲ್ಲ ಜಿಲ್ಲೆಗಳ ಪತ್ರಿಕಾ ಛಾಯಾಗ್ರಾಹಕರು ಸೆರೆ ಹಿಡಿದ ಉತ್ತಮ ಫೋಟೋಗಳು ಇಲ್ಲಿದ್ದವು. ರಾಜ್ಯ ಪತ್ರಿಕಾ ಛಾಯಾಚಿತ್ರಗ್ರಾಹಕರ ಸಂಘದ ಅಧ್ಯಕ್ಷ ಈಶ್ವರ, ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಕಾರ್ಯನಿರತ ಪ್ರತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ರವಿರಾಜ ಪಾಟೀಲ್, ರೋಷಿಣಿ, ಮಾಯಣ್ಣ ಇತರರಿದ್ದರು.