ಗೋಣಿಕೊಪ್ಪ: ಮುಳಿಯ ಪ್ರತಿಷ್ಠಾನ ಮತ್ತು ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಮುಳಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ಚಿತ್ತಾರ ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಕೃತಿಯೊಂದಿಗೆ ‘ಕಾಂತಾರ’ ಚಲನಚಿತ್ರದ ಪಂಜುರ್ಲಿ ದೈವದ ಚಿತ್ರಣ ಪ್ರಥಮ ಸ್ಥಾನ ಪಡೆದುಕೊಂಡಿತು.
6ರಿಂದ 8ನೇ ತರಗತಿವರೆಗಿನ ವಿಭಾಗದಲ್ಲಿ ಸುಜಯ್ ಸುನಿಲ್ ಪ್ರಕೃತಿಯ ನಡುವಿನಲ್ಲಿ ಪಂಜುರ್ಲಿ ದೈವಕ್ಕೆ ಜೀವ ತುಂಬಿದರು. ಭೂಮಿಯಲ್ಲಿ ದುಡಿಯುವ ರೈತ, ಆಕಾಶದೆತ್ತರಲ್ಲಿರುವ ದೈವವನ್ನು ಚಿತ್ರೀಕರಿಸಿ ಗಮನ ಸೆಳೆದು ಪ್ರಥಮ ಸ್ಥಾನ ಪಡೆದುಕೊಂಡರು. ಜೆ. ತೇಜಸ್ವಿನಿ ದ್ವಿತೀಯ, ಎಂ.ಕೆ.ನಕ್ಷಾ ದೇಚಮ್ಮ ತೃತೀಯ ಸ್ಥಾನ ಪಡೆದುಕೊಂಡರು. 3 ರಿಂದ 5 ನೇ ತರಗತಿ ವಿಭಾಗದಲ್ಲಿ ಬಿ.ಡಿ.ಚರಿತ್ ಪ್ರಥಮ, ವಿ.ಎಸ್.ನಿಶಿಕಾ ದ್ವಿತೀಯ, ಎ. ಡಿ.ವಿಶ್ಮಿತಾ ತೃತೀಯ ಸ್ಥಾನ ಪಡೆದುಕೊಂಡರು.
ಪ್ರಥಮ ಬಹುಮಾನವಾಗಿ ಚಿನ್ನದ ನಾಣ್ಯ, ದ್ವಿತೀಯ ಮತ್ತು ತೃತೀಯ ಬಹುಮಾನವಾಗಿ ಬೆಳ್ಳಿ ನಾಣ್ಯ ನೀಡಲಾಯಿತು. ಎಲ್ಲ ಸ್ಪರ್ಧಿಗಳಿಗೂ ಪ್ರಮಾಣಪತ್ರ ವಿತರಿಸಲಾಯಿತು. ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ಮಕ್ಕಳಿಗೆ ಸ್ಪರ್ಧೆ ನಡೆಯಿತು. ಕನ್ನಡ ನಾಡು, ನುಡಿ, ಭಾವ-ಬದುಕು ಬಿಂಬಿಸುವ ಚಿಂತನೆಗಳು ಕಲೆಯಾಗಿ ಮೂಡಿಬಂದವು. 100ಕ್ಕೂ ಹೆಚ್ಚು ಸ್ಪರ್ಧಿಗಳು ತಮ್ಮ ಕಲೆ ಪ್ರದರ್ಶನ ಮಾಡಿದರು. ಕರ್ನಾಟಕ ರಾಜ್ಯದ ದೈವ ಕಲೆ, ಕನ್ನಡ ಬಾವುಟ, ಢಮರುಗ, ಹೋರಾಟಗಾರರ ಚಿತ್ರಣ, ಐತಿಹಾಸಿಕ ಸ್ಥಳ, ರಾಜ್ಯದ ನಕ್ಷೆಯಲ್ಲಿ ಜಿಲ್ಲೆಯ ವಿಶೇಷತೆಗಳನ್ನು ಗುರುತಿಸಿದರು. ಪೆನ್ಸಿಲ್ ಕಲೆ, ಆಯಿಲ್ ಪೇಂಟ್ ಕಲೆಗಳು ಅನಾವರಣಗೊಂಡವು.
ಸೈಕ್ಲೋನ್ ನೃತ್ಯ ತಂಡದ ನಿರ್ದೇಶಕ ರಮೇಶ್ ತಂಡದ ಸದಸ್ಯರಾದ ವಿನ್ಯ, ಚಾರ್ವಿ, ಅಂಶಿ, ರಾಶಿ, ರಕ್ಷಾ, ವಿಸ್ಮಯ ಹಾಡಿಗೆ ನೃತ್ಯ ಪ್ರದರ್ಶನ ನೀಡಿದರು. ಸುಮಾರು 5 ನೃತ್ಯಗಳು ಮೂಡಿ ಬಂತು. ಅನ್ವಿತ್‌ಕುಮಾರ್ 10 ಕ್ಕೂ ಹೆಚ್ಚು ಕನ್ನಡ ಹಾಡಿಗೆ ದನಿಗೂಡಿಸಿ ಸಂಜೆಯ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಮುಳಿಯ ಮಾರುಕಟ್ಟೆ ಸಲಹೆಗಾರ ವೇಣುಶರ್ಮ, ಶಾಖಾ ಪ್ರಬಂಧಕ ಕಿಶೋರ್ ಸಾಲಿಯಾನ್, ಸಹಾಯಕ ವ್ಯವಸ್ಥಾಪಕರಾದ ಸೌಮ್ಯಾ, ಅನಿಲ್, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಪ್ರಧಾನ ಕಾರ್ಯದರ್ಶಿ ಎನ್. ಎನ್. ದಿನೇಶ್, ಕಾರ್ಯದರ್ಶಿ ಮಂಡೇಡ ಅಶೋಕ್, ಖಜಾಂಚಿ ವಿ.ವಿ.ಅರುಣ್‌ಕುಮಾರ್, ನಿರ್ದೇಶಕ ಎಂ. ಎಂ. ಚನ್ನನಾಯಕ, ಸದಸ್ಯ ಡಿ. ನಾಗೇಶ್ ಬಹುಮಾನ ವಿತರಣೆ ಮಾಡಿದರು.