ಜಿಲ್ಲೆ

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ಕೊಡದಿರಿ

ಮಂಜುನಾಥ ತಿಮ್ಮಯ್ಯ

ಮೈಸೂರು: ಕಲಬುರಗಿಯ ಚಿತ್ತಾಪುರದಲ್ಲಿ ನ.2ರಂದು ಆರ್‌ಎಸ್‌ಎಸ್ ಕಾರ್ಯಕ್ರಮ ನಡೆಸಲು ಅನುಮತಿ ಕೊಡಬಾರದು ಎಂದು ದಲಿತ ಮುಖಂಡ, ಮಾಜಿ ಮೇಯರ್ ಪುರುಷೋತ್ತಮ ಆಗ್ರಹಿಸಿದರು.

ಒಂದು ವೇಳೆ ಅವಕಾಶ ನೀಡಿದರೆ ನಾವೂ ಸಂವಿಧಾನ ಹಿಡಿದು, ಬಳಿ ಬಟ್ಟೆ, ನೀಲಿ ಟೋಪಿ ಧರಿಸಿ ಎಲ್ಲೆಡೆ ಪಥಸಂಚಲನ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ಆರ್‌ಎಸ್‌ಎಸ್‌ನವರು ಲಾಠಿ ಹಿಡಿದು ಬೀದಿ ಬೀದಿಯಲ್ಲಿ ಪಥಸಂಚಲನ ಮಾಡುವುದಾದರೂ ಏತಕ್ಕಾಗಿ? ‘ಹಿಂದು ನಾವೆಲ್ಲಾ ಒಂದು’ ಎನ್ನುವ ಇವರು ಇಂದಿಗೂ ಸಮಾಜದಲ್ಲಿ ಅಸ್ಪಶ್ಯತೆ, ಅಸಮಾನತೆ, ಸ್ತ್ರೀಯರ ಬಗ್ಗೆ ತಾರತಮ್ಯ ಮೊದಲಾದವನ್ನು ಹೋಗಲಾಡಿಸುವ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಈಗಲೂ ಆರ್‌ಎಸ್‌ಎಸ್‌ನ ಪ್ರಮುಖ ಹುದ್ದೆಗಳು ಒಂದೇ ಜಾತಿಗೆ ಸೀಮಿತವಾಗಿರುವುದು ಏಕೆ? ಎಂದು ಪ್ರಶ್ನಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ವಿರುದ್ಧ ಮಾತನಾಡಿದರೆ ಬಿಜೆಪಿ ನಾಯಕರು ಏಕೆ ಮುಗಿಬೀಳುತ್ತಾರೆ? ಆರ್‌ಎಸ್‌ಎಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖ ಎಂಬುದು ಇವರು ಸಾಬೀತುಪಡಿಸುತ್ತಿದ್ದಾರೆ.

ಇವರಿಗೆ ಕಾನೂನಿನ ಬಗ್ಗೆ ಆಸಕ್ತಿ ಇದ್ದಲ್ಲಿ ಮೊದಲು ಇವರ ಸಂಘಟನೆ ಕಾನೂನಿನಡಿ ನೋಂದಣಿ ಆಗಲಿ. ಕಳೆದ ನೂರು ವರ್ಷಗಳಲ್ಲಿ ಈ ಸಂಘಟನೆಗೆ ಹರಿದುಬಂದ ವಿದೇಶಿ ದೇಣಿಗೆ, ದೇಶದಲ್ಲಿ ಸಂಗ್ರಹಿಸಿರುವ ಸಂಪನ್ಮೂಲ ಬಗ್ಗೆ ಸಾರ್ವಜನಿಕರಿಗೆ, ಸರ್ಕಾರಕ್ಕೆ ಲೆಕ್ಕ ಕೊಡಲಿ. ಇವರು ಯಾವ ಉದ್ದೇಶಕ್ಕಾಗಿ ಈ ದೇಣಿಗೆ ಬಳಸಿದ್ದಾರೆಂಬ ಮಾಹಿತಿ ನೀಡಲಿ ಎಂದು ಒತ್ತಾಯಿಸಿದರು.

ಆರ್‌ಎಸ್‌ಎಸ್ ನಿಷೇಧಿಸಬೇಕೆಂದು ಪ್ರಿಯಾಂಕ್ ಖರ್ಗೆ ಹೇಳಿಯೇ ಇಲ್ಲ. ಆದರೆ, ಆರ್‌ಎಸ್‌ಎಸ್ ಈ ದೇಶದ ಸಂವಿಧಾನಾತ್ಮಕ ಕಾನೂನುಗಳಿಗೆ ಬೆಲೆ, ಗೌರವ ಕೊಡಬೇಕೆಂದು ಹೇಳಿದರೆ ಇಷ್ಟೊಂದು ಗಾಬರಿ ಬೀಳುವುದೇಕೆ? ಅವರಿಗೆ ಕೊಲೆ ಬೆದರಿಕೆ ಹಾಕುವಂತಹ ದುಷ್ಟತನ ಪ್ರದರ್ಶಿಸಿದರೂ ಆರ್‌ಎಸ್‌ಎಸ್ ಮೌನ ವಹಿಸಿದೆ ಎಂದು ವಾಗ್ದಾಳಿ ನಡೆಸಿದರು.

ದೇಶವನ್ನು ರಕ್ಷಿಸಲು ಬಲಾಢ್ಯವಾದ ಸಂವಿಧಾನವಿದೆ, ಸೇನೆಗಳೂ ಇವೆ. ಬಲಿಷ್ಠ ರಾಜ್ಯಾಡಳಿತವಿದೆ. ಹೀಗಿದ್ದರೂ ಈ ಆರ್‌ಎಸ್‌ಎಸ್ ದೇಶ ರಕ್ಷಣೆಗಾಗಿ ಇರುವ ಸಂಘಟನೆಯೆಂದು ಜಂಬ ಕೊಚ್ಚಿಕೊಳ್ಳುತ್ತಿದ್ದಾರೆ.

ಅಲ್ಲದೆ, ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಧ್ಯೇಯ, ಉದ್ದೇಶಗಳಿಗೆ ಕೇಳಿವ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ತೋರಬೇಕು. ಈಗಲೂ ಆರ್‌ಎಸ್‌ಎಸ್‌ನವರು ಶೂದ್ರ ವರ್ಗದ ಮಕ್ಕಳು ಲಾಠಿ ಹಿಡಿದು ಬೀದಿ ಸುತ್ತುವಂತೆ ಮಾಡಿದ್ದಾರೆ. ಆದರೆ ಬಿಜೆಪಿ ನಾಯಕರ ಮಕ್ಕಳು ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಮುಖಂಡರಾದ ಹರಕುಮಾರ್, ಸಿದ್ದಸ್ವಾಮಿ, ಮಣಿಯಯ್ಯ, ಸೋಮಯ್ಯ ಮಲೆಯೂರು, ಪುಟ್ಟರಾಜು, ಸುರೇಶ್, ಸಣ್ಣಸ್ವಾಮಿ ಹಾಗೂ ರವಿಕುಮಾರ್ ಇದ್ದರು.