ಜಿಲ್ಲೆ

ಚಿತ್ತ ಪ್ರಸನ್ನವಾಗಿರಲಿ


ಚಿತ್ರದುರ್ಗ: ಪ್ರಪಂಚದಾದ್ಯಂತ ಪ್ರಸ್ತುತ ಹೊಟ್ಟೆ ಹೊರೆಯುವ ಮತ್ತು ಹೊಟ್ಟೆ ಹೊರುವ ಎರಡು ವರ್ಗಗಳಿವೆ. ಇದಕ್ಕೆ ನಮ್ಮ ಸಾಮಾಜಿಕ ವ್ಯವಸ್ಥೆ, ಕಲುಷಿತ ಆಹಾರ ಪದ್ಧತಿ ಕಾರಣವೆಂದು ಯೋಗಗುರು ಚನ್ನಬಸವಣ್ಣ ಹೇಳಿದರು.
ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ನಗರದ ಮುರುಘಾಮಠದಲ್ಲಿ ಆಯೋಜಿಸಿರುವ ಆರೋಗ್ಯ-ಆಧ್ಯಾತ್ಮ ಶಿಬಿರದ 2ನೇ ದಿನ ಗುರುವಾರದ ಪ್ರವಚನದಲ್ಲಿ, ‘ಆಹಾರವೇ ಪರಮೌಷಧಿ, ಯಾವ ರೋಗ ನಿವಾರಣೆಗೆ ಯಾವ ಆಹಾರ? ಸರ್ವ ರೋಗಗಳಿಗೆ ಮನೆ ಮದ್ದುಗಳು’ ಕುರಿತು ಅವರು ಮಾತನಾಡಿದರು.
ನಾಲಿಗೆ ರುಚಿಗೆ ಆಹಾರ ಸೇವಿಸದೇ ಪ್ರಸಾದವನ್ನಾಗಿ ಸ್ವೀಕರಿಸಬೇಕು. ಅನ್ನ ಪರಬ್ರಹ್ಮ. ಶ್ರದ್ಧೆ, ಭಕ್ತಿ ಮತ್ತು ಪ್ರಸನ್ನತೆಯಿಂದ ಸೇವಿಸಿ ದಾಗ ಅನ್ನ ಪ್ರಸಾದವಾಗುತ್ತದೆ. ನಿಂತು ಊಟ ಮಾಡಿದರೆ ಹೃದಯಾಘಾತದ ಸಂಭವವಿರುತ್ತದೆ. ಮಾತನಾಡುತ್ತಾ ಪ್ರಸಾದ ಸ್ವೀಕರಿಸಿದರೆ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಆದ್ದರಿಂದ ಆಹಾರವನ್ನು ಪ್ರಸನ್ನ ಚಿತ್ತದಿಂದ ಸೇವಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ರಾಷ್ಟ್ರಕವಿ ಜಿ.ಎಸ್.ಶಿವರು ದ್ರಪ್ಪ, ಡಾ.ಎಂ.ಚಿದಾನಂದಮೂರ್ತಿ, ಮಾಜಿ ಉಪಪ್ರಧಾನಿ ಬಿ.ಡಿ.ಜತ್ತಿ, ಮಾಜಿ ಮುಖ್ಯಮಂತ್ರಿಗಳಾದ ಎಸ್.ನಿಜಲಿಂಗಪ್ಪ, ಜೆ.ಎಚ್.ಪಟೇಲ್ ಮೊದಲಾದ ಗಣ್ಯರು ಜಯದೇವ ವಿದ್ಯಾರ್ಥಿ ನಿಲಯದ ಮೂಲಕ ತಮ್ಮ ಸಾಧನೆಯ ರಹದಾರಿಗಳನ್ನು ಶೋಧಿಸಿಕೊಂಡವರು. ಇದು ಶ್ರೀಮಠಕ್ಕೆ ಹೆಮ್ಮೆ ತರುವಂಥ ವಿಚಾರವಾಗಿದೆ ಎಂದು ತಿಳಿಸಿದರು.
ನಿಪ್ಪಾಣಿ ಶ್ರೀ ಬಸವಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಮುರುಘೇಂದ್ರ ಸ್ವಾಮೀಜಿ, ಉಳವಿ ಶ್ರೀಬಸವಲಿಂಗಮೂರ್ತಿ ಸ್ವಾಮೀಜಿ, ಶರಣೆ ಜಯದೇವಿ ತಾಯಿ, ಶರಣೆ ಚಿನ್ಮಯಿತಾಯಿ, ಹೊಳಲ್ಕೆರೆ ಒಂಟಿಕಂಬ ಮುರುಘಾಮಠದ ಶ್ರೀ ತಿಪ್ಪೇರುದ್ರ ಸ್ವಾಮೀಜಿ ಇದ್ದರು.
ಚಿತ್ರದುರ್ಗದ ಗಾನಯೋಗಿ ಸಂಗೀತ ಬಳಗ ಮತ್ತು ಜಮುರಾ ಕಲಾವಿದರು ಜಯದೇವ ಜ್ಯೋತಿ ರೂಪಕ ಅಭಿನಯಿಸಿದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಅನ್ನಪೂರ್ಣಾ ಲಿಂಗರಾಜು ಸ್ವಾಗತಿಸಿದರು. ಡಾ.ಬಿ.ರೇವಣ್ಣ ವಂದಿಸಿದರು. ಪ್ರೊ. ಲಕ್ಷ್ಮೀ ಕಾಂತ ನಿರೂಪಿಸಿದರು.