ಯಲ್ಲಾಪುರ: ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಅವರ ಮಕ್ಕಳೋ ಅಥವಾ ಕುಟುಂಬದವರೋ ಮಾಡುವುದು ಸಾಮಾನ್ಯ. ಆದರೆ, ತನ್ನ ಅಂತ್ಯಕ್ರಿಯೆಯನ್ನು ತಾನೇ ಮಾಡಿಕೊಂಡ ಮನಕಲಕುವ ಘಟನೆ ತಾಲೂಕಿನ ಸಹಸ್ರಳ್ಳಿ ಗ್ರಾಮದ ಕೊಂಕಣಕೊಪ್ಪದಲ್ಲಿ ನಡೆದಿದೆ.
ಕೊಂಕಣಕೊಪ್ಪದ ಶಿವರಾಮ ರಾಮಕೃಷ್ಣ ಹೆಗಡೆ (60) ಎಂಬುವವರು ಚಿತೆಯನ್ನು ಸಿದ್ಧಪಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ ತಿಂಗಳಿಂದ ಗಂಟಲ ಕ್ಯಾನ್ಸರ್ನಿಂದ ಬಳಲುತ್ತಿದ್ದ ಇವರು ಸರಿಯಾಗಿ ಊಟ ತಿಂಡಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಮನನೊಂದು ಮನೆಯ ಸಮೀಪದ ಕಾಡಿನಲ್ಲಿ ಕಟ್ಟಿಗೆ ಸೇರಿಸಿ, ಚಿತೆ ಸಿದ್ಧಪಡಿಸಿಕೊಂಡು ಅಂತ್ಯ ಸಂಸ್ಕಾರದ ವೇಳೆ ಮಾಡುವ ಧಾರ್ವಿುಕ ವಿಧಿ ವಿಧಾನಗಳನ್ನೂ ಮಾಡಿಕೊಂಡು, ನಂತರ ಬೆಂಕಿ ಹಾಕಿ ಚಿತೆಗೆ ಹಾರಿ ಆತ್ಮಸಮರ್ಪಣೆ ಮಾಡಿಕೊಂಡಿದ್ದಾರೆ.
ಬೆಳಗ್ಗೆ ಮನೆಯಲ್ಲಿ ಕಾಣದಿದ್ದಾಗ ಕುಟುಂಬದವರು ಹುಡುಕಲು ಆರಂಭಿಸಿದಾಗ ಕಾಡಿನಲ್ಲಿ ಬೂದಿ ರಾಶಿ ಕಂಡು ಬಂದಿದೆ. ಪಕ್ಕದಲ್ಲಿ ಶಿವರಾಮ ಅವರ ಅಂಗಿ, ಟಾರ್ಚ್ ಹಾಗೂ ಪತ್ರವೊಂದು ಕಂಡು ಬಂದಿದ್ದು, ಆಗ ವಿಷಯ ಅರಿವಿಗೆ ಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೆಲ ದಿನಗಳಿಂದ ಸಿದ್ಧತೆ: ‘ನನ್ನ ಕ್ಯಾನ್ಸರ್ ಕಾಯಿಲೆಯಿಂದ ಮನೆಯವರಿಗೆ ತೊಂದರೆ ಆಗಬಾರದು ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಪತ್ರದಲ್ಲಿ ಬರೆದುಕೊಂಡಿದ್ದಾರೆ. ಕೆಲ ದಿನಗಳಿಂದ ಇದಕ್ಕೆ ಸಿದ್ಧತೆಯಲ್ಲಿ ತೊಡಗಿದ್ದು, ಆಗಾಗ ಕಟ್ಟಿಗೆ ಸಂಗ್ರಹಿಸಲು ಕಾಡಿಗೆ ಹೋಗುತ್ತಿದ್ದರು. ಕಾಡಿಗೆ ಹೋಗುವ ಕುರಿತು ಕುಟುಂಬದವರು ಪ್ರಶ್ನಿಸಿದಾಗಲೆಲ್ಲ, ಗಂಟಲ ಕ್ಯಾನ್ಸರ್ನ ಬೇನೆ ತಡೆದುಕೊಳ್ಳಲು ಅಗತ್ಯವಾದ ಗಿಡಮೂಲಿಕೆ, ಬೇರು ತರಲು ಹೋಗುವುದಾಗಿ ಹೇಳುತ್ತಿದ್ದರಂತೆ.
ದೇಹತ್ಯಾಗ ಪತ್ರ!: ಶಿವರಾಮ ಹೆಗಡೆ ಪತ್ರವೊಂದನ್ನು ಬರೆದಿದ್ದು, ಅದಕ್ಕೆ ದೇಹತ್ಯಾಗ ಪತ್ರ ಎಂದು ಶೀರ್ಷಿಕೆ ನೀಡಿದ್ದಾರೆ. ಅದರಲ್ಲಿ ಭಗವದ್ಗೀತೆಯ 13ನೇ ಅಧ್ಯಾಯವಾದ ಕ್ಷೇತ್ರ ಕ್ಷೇತ್ರಜ್ಞ ವಿಭಾಗ ಯೋಗದಲ್ಲಿನ ವಿಷಯವನ್ನು ಉಲ್ಲೇಖಿಸಿದ್ದಾರೆ. ‘ಶಿವರಾಮನೆಂಬ ಜಡ ಶರೀರ ನಾನಲ್ಲ, ನನ್ನದೆಂಬುದು ಯಾವುದೂ ಇಲ್ಲ, ನಾನು ಪ್ರಕೃತಿಯನ್ನು ಬಿಟ್ಟಿದ್ದೇನೆ, ನನಗಿನ್ನು ಹುಟ್ಟು ಸಾವುಗಳಿಲ್ಲ. ಶ್ರೀಕೃಷ್ಣನು ತನ್ನ ಅನನ್ಯ ಭಕ್ತರ ಬಗೆಗೆ ಹೇಳಿದಂತೆ ದೇಹತ್ಯಾಗಕ್ಕೆ ಸಿದ್ಧನಾಗಿದ್ದೇನೆ. ಭಗವಂತನು ಕ್ಷೇತ್ರಜ್ಞನನ್ನು ಕ್ಷೇತ್ರಕ್ಕೆ ಸೇರಿಸುವವ ನಾನೇ ಎಂದು ಹೇಳುತ್ತಾನೆ. ಕ್ಷೇತ್ರಜ್ಞನು ಕ್ಷೇತ್ರದ ಮೂರು ಮಾಯಾ ಗುಣಗಳನ್ನು ಗೆದ್ದಾಗ ಕ್ಷೇತ್ರದ ಹಾಗೂ ದೇಹದ ಬಿಡುಗಡೆಯಾಗುತ್ತದೆ’ ಎಂದು ಬರೆದುಕೊಂಡಿದ್ದು, ಸೊಪ್ಪಿನ ಬೆಟ್ಟದಲ್ಲಿ ಅಗ್ನಿಪ್ರವೇಶ ಮಾಡುವುದಾಗಿಯೂ ಬರೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶಿವರಾಮ ಹೆಗಡೆ ಭಗವದ್ಗೀತೆಯನ್ನು ಹೆಚ್ಚಾಗಿ ಓದುತ್ತಿದ್ದರೆಂದು ಕುಟುಂಬದವರು ಹೇಳಿದ್ದು, ಈ ಪತ್ರದಲ್ಲಿ ಅದು ಸ್ಪಷ್ಟವಾಗಿ ಗೋಚರಿಸುವಂತಿದೆ.