ಜಿಲ್ಲೆ

ಚಿಗುರೊಡೆಯುವ ಮುನ್ನವೇ ಕಿತ್ತೆಸೆದರು!

ನರೇಗಲ್ಲ: ಉತ್ತಮ ಮಳೆ ಸುರಿದ ಹಿನ್ನೆಲೆಯಲ್ಲಿ ಬಿತ್ತನೆ ಮಾಡಿದ ಬೀಜ ಮತ್ತು ಚಿಗುರಿದ ಬೆಳೆಗಳಿಗೆ ಇಲಿ, ಚಿಗರಿ, ಮಿಡತೆ ಕಾಟ ವಿಪರೀತವಾಗಿದೆ. ಇದರಿಂದ ಬೇಸತ್ತ ರೈತರು ತಮ್ಮ ಹೆಸರು, ಮೆಕ್ಕೆಜೋಳ, ಶೇಂಗಾ ಬೆಳೆಯನ್ನು ಟ್ರ್ಯಾಕ್ಟರ್​ನಿಂದ ಹರಗಿ ನಾಶಪಡಿಸುತ್ತಿದ್ದಾರೆ.

ನರೇಗಲ್ಲ ಹೋಬಳಿ ವ್ಯಾಪ್ತಿಯ ಕೋಡಿಕೊಪ್ಪ, ಕೋಚಲಾಪೂರ, ತೋಟಗಂಟಿ, ದ್ಯಾಂಪೂರ, ಮಲ್ಲಾಪೂರ, ಅಬ್ಬಿಗೇರಿ, ಕುರಡಗಿ, ಯರೇಬೇಲೇರಿ, ಡ.ಸ. ಹಡಗಲಿ, ಹಾಲಕೆರೆ, ನಿಡಗುಂದಿ, ನಿಡಗುಂದಿಕೊಪ್ಪ, ಕಳಕಾಪೂರ, ನಾಗರಾಳ ಮೊದಲಾದ ಗ್ರಾಮಗಳ ಬಹುತೇಕ ರೈತರು ಇಲಿ, ಜಿಂಕೆ, ಮಿಡತೆ ಕಾಟದಿಂದ ಬೇಸತ್ತು ಹೆಸರು, ಮೆಕ್ಕೆಜೋಳ, ಶೇಂಗಾ, ತೊಗರಿ ಮುಂತಾದ ಬೆಳೆಗಳನ್ನು ನಾಶಪಡಿಸುತ್ತಿದ್ದಾರೆ. ಮಳೆ ಸುರಿದರೂ ಪ್ರಾಣಿ-ಪಕ್ಷಿಗಳ ಕಾಟದಿಂದ ಬೆಳೆಗಳು ಮೇಲೇಳುತ್ತಿಲ್ಲ. ಹೀಗಾಗಿ, ಅಘಾತಗೊಂಡ ರೈತರು ಬೆಳೆ ನಾಶಪಡಿಸುತ್ತಿದ್ದಾರೆ. ಪ್ರತಿ ವರ್ಷ ಮುಂಗಾರು ಹಾಗೂ ಹಿಂಗಾರಿನಲ್ಲಿ ಜಿಂಕೆ ಹಾವಳಿ ಸಾಮಾನ್ಯವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎನ್ನುವುದು ರೈತರ ಆರೋಪವಾಗಿದೆ.

ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 44,820 ಹೆಕ್ಟೇರ್ ಕ್ಷೇತ್ರ ಹೊಂದಿದ್ದು, ಅದರಲ್ಲಿ ಪ್ರಸಕ್ತ ಸಾಲಿನಲ್ಲಿ 1,980 ಹೆಕ್ಟೇರ್ ಪ್ರದೇಶ ಬಿತ್ತನೆ ಮಾಡಲಾಗಿದೆ. ಆದರೆ, ಇಲಿಗಳ ಕಾಟದಿಂದ ಸುಮಾರು 110 ಹೆಕ್ಟೇರ್ ಪ್ರದೇಶವನ್ನು ರೈತರು ಟ್ರ್ಯಾಕ್ಟರ್​ನಿಂದ ಹರಗಿ ಬೆಳೆ ನಾಶಪಡಿಸುತ್ತಿದ್ದಾರೆ. ಬಹಳಷ್ಟು ರೈತರು ಮರು ಬಿತ್ತನೆ ಮಾಡಿದ್ದಾರೆ. ಇನ್ನುಳಿದವರು ಬಿತ್ತನೆಗೆ ಮತ್ತೆ ಸಾಕಷ್ಟು ಖರ್ಚು ಮಾಡಲಾಗದೆ ಸುಮ್ಮನಿದ್ದಾರೆ. ಬಂದಷ್ಟು ಬೆಳೆ ಬರಲಿ ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ಧಾರೆ.

ಈ ವರ್ಷ ಮುಂಗಾರು ಹಂಗಾಮಿನ ಮಳೆಗಳು ಸಂಪೂರ್ಣ ಬರುತ್ತಿರುವುದನ್ನು ನೋಡಿ ಬಿತ್ತನೆ ಮಾಡಲಾಗಿತ್ತು. ಆದರೆ, ಇಲಿ, ಜಿಂಕೆ, ಮಿಡತೆಗಳ ಕಾಟದಿಂದ ಬೆಳೆ ಹಾಳಾಗುತ್ತಿರುವುದರಿಂದ ಸಾವಿರಾರೂ ರೂ. ಖರ್ಚು ಮಾಡಿ ಬಿತ್ತಿದ ಹೆಸರು ಬೆಳೆ ನಾಶ ಮಾಡಲು ಮುಂದಾಗಿದ್ದೇವೆ. | ಅಶೋಕ ಬಸವರಡ್ಡೇರ, ಸಂಗಪ್ಪ ವೀರಾಪೂರ, ಅಬ್ಬಿಗೇರಿ ಗ್ರಾಮದ ರೈತರು
ಮುಂಗಾರು ಹಂಗಾಮಿನಲ್ಲಿ ರೈತರು ಹೆಚ್ಚಾಗಿ ಹೆಸರು ಬಿತ್ತನೆ ಮಾಡಿದ್ದಾರೆ. ಆದರೆ, ಇಲಿ, ಮಿಡತೆ, ಜಿಂಕೆ ಕಾಟದಿಂದ ಬೇಸತ್ತು ಬೆಳೆ ನಾಶ ಪಡಿಸುತ್ತಿದ್ದಾರೆ. ರೈತರು ಬೆಳೆಗಳ ರಕ್ಷಣೆಗೆ ಔಷಧ ಬಳಸಬೇಕು. ಬಿತ್ತನೆ ಮಾಡಿದ ನಂತರದಲ್ಲಿ ಜಮೀನಿನ ಸುತ್ತಲೂ ಇಲಿ ನಾಶಕ ಹಾಗೂ ಜಿಂಕೆಗಳು ಜಮೀನಿನ ಹತ್ತಿರ ಬರದಂತೆ ತಡೆಯುವ ಔಷಧ ಸಿಂಪಡಣೆ ಮಾಡಬೇಕು. | ಜಗದೀಶ ಹಾದಿಮನಿ, ನರೇಗಲ್ಲ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ