ಜಿಲ್ಲೆ

ಚಿಕ್ಕಾಡೆಯಲ್ಲಿ ವಿಜೃಂಭಣೆಯ ಶ್ರೀದೇವೀರಮ್ಮನ ಹಬ್ಬ

ಪಾಂಡವಪುರ: ತಾಲೂಕಿನ ಚಿಕ್ಕಾಡೆ ಗ್ರಾಮದ ದೇವೀರಮ್ಮನ ಹಬ್ಬವು ಸಡಗರ-ಸಂಭ್ರಮ ದಿಂದ ಸೋಮವಾರ ರಾತ್ರಿ ಹಾಗೂ ಮಂಗಳವಾರ ಜರುಗಿತು.

ಸೋಮವಾರ ಕುಂತಿಬೆಟ್ಟದ ಚಿಕ್ಕಬೆಟ್ಟದಲ್ಲಿ ಪಟ್ಟಸೋಮನಹಳ್ಳಿಯ ದಲಿತರು ಸುಮಾರು 15 ಕೆ.ಜಿ. ತೂಕದ ಕಂಚಿನ ಹೆಬ್ಬಾರೆಗಳಿಗೆ ಹದಮಾಡಿದ ಚರ್ಮ ಹೊದಿಸಿ ಹೂ ಹಾಕಿ ಅಲಂಕರಿಸಿ ಸಿದ್ಧಗೊಳಿಸಿದರು. ಹಿರೇಮರಳಿ ಗ್ರಾಮದವರು ಹೆಬ್ಬಾರೆಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ಸಂಜೆ ದೇವೇಗೌಡನಕೊಪ್ಪಲು ಬಳಿ ಇರುವ ಕಾಚೇನಹಳ್ಳಿ ದೇವರ ಗುಡಿಯಲ್ಲಿ ಹೆಬ್ಬಾರೆಗಳಿಗೆ ಪೂಜೆ ಸಲ್ಲಿಸಲಾಯಿತು.

ರಾತ್ರಿ ಕಾಚೇನಹಳ್ಳಿ ದೇವರ ಗುಡಿಯಿಂದ ದಲಿತ ದೇವರ ಗುಡ್ಡರಾದ ರಾಮಮೂರ್ತಿ ಹೆಣ್ಣು ಹೆಬ್ಬಾರೆ ಹಾಗೂ ಸದಾನಂದ ಗಂಡು ಹೆಬ್ಬಾರೆಯನ್ನು ಹೊತ್ತು ಮೆರೆಸಿದರು. ಹೆಬ್ಬಾರೆ ಉತ್ಸವದ ಮೆರವಣಿಗೆಯಲ್ಲಿ ಮೈಸೂರಿನ ರಮ್ಮನಹಳ್ಳಿಯ ಈರಮಕ್ಕಳು ಚಕ್ರಬಳೆ ಬಡಿಯುತ್ತಾ ದೇವೀರಮ್ಮನನ್ನು ಓಲೈಸುತ್ತಾ ಹಾಡಿದರು. ಚಿಕ್ಕಾಡೆ ಮತ್ತು ದೇವೇಗೌಡನಕೊಪ್ಪಲು ಗ್ರಾಮದ ಯುವಕರು ಚಕ್ರಬಳಿ ಬಡಿತದ ತಾಳಕ್ಕೆ ತಕ್ಕಂತೆ ಕುಣಿಯತೊಡಗಿದರು.

ಗಾಣಿಗ ಸಮುದಾಯದವರು ಪಂಜಿಗೆ ಎಣ್ಣೆಹಾಕಿ ಸಿದ್ಧಗೊಳಿಸಿ ಪಂಜು ಉರಿಸಿದರು. ಮಡಿವಾಳ ಸಮುದಾಯದವರು ಮಕ್ಸರಿ ಹಾಕಿಕೊಂಡು ಕುಣಿದರು. ವಿಶ್ವಕರ್ಮ ಸಮುದಾಯದವರು ಪಟಾಕಿ, ಸಿಡಿಮದ್ದುಗಳನ್ನು ಸಿಡಿಸಿ ಸುರಿಮಳೆಗೈಯ್ಯದರು.

ದೇವೇಗೌಡನಕೊಪ್ಪಲು ವೃತ್ತಕ್ಕೆ ಹೆಬ್ಗಾರೆ ಉತ್ಸವ ಬಂದಾಗ ಗ್ರಾಮದ ಜನರು ಹೆಬ್ಬಾರೆಗಳಿಗೆ ಕೈಮುಗಿದು ಪೂಜೆ ಸಲ್ಲಿಸಿದರು. ಬಳಿಕ ಉತ್ಸವವು ಚಿಕ್ಕಾಡೆ ಗ್ರಾಮಕ್ಕೆ ಪ್ರವೇಶಿಸುತ್ತಿದ್ದಂತೆಯೇ ಹೆಣ್ಣು ಮಕ್ಕಳು ಹಣ್ಣಿನ ಆರತಿ ಹೊತ್ತು ಪೂಜೆ ಸಲ್ಲಿಸಿದರು. ಚಕ್ರಬಳೆ ಬಡಿತ, ಪಟಾಕಿ ಸಿಡಿತ, ಹೆಬ್ಬಾರೆ ಉತ್ಸವದಲ್ಲಿ ಯುವಕರು ಮೈಮರೆತು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ಹೆಬ್ಬಾರೆ ಉತ್ಸವವು ಊರಿನ ಬೀದಿ ಬೀದಿಗಳಲ್ಲಿ ನಡೆಯಿತು. ಮಧ್ಯ ರಾತ್ರಿ ಹೆಬ್ಬಾರೆ ಉತ್ಸವ ಕೊನೆಗೊಂಡು ಗ್ರಾಮದ ರಂಗದಲ್ಲಿ ಹೆಬ್ಬಾರೆಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು.

ಮಂಗಳವಾರ ಗ್ರಾಮದಲ್ಲಿದ್ದ ಹೆಬ್ಬಾರೆಗಳನ್ನು ಊರಿನ ಹೊರ ವಲಯದಲ್ಲಿರುವ ದೇವೀರಮ್ಮನ ಗುಡಿಯಲ್ಲಿ ನಡೆದ ಜಾತ್ರೆಯಲ್ಲಿ ಹೆಬ್ಬಾರೆಗಳನ್ನು ತಂದು ಇಡಲಾಯಿತು. ಜಾತ್ರೆಗೆ ಬಂದ ಅಪಾರ ಭಕ್ತ ಸಮೂಹವು ಹೆಬ್ಬಾರೆಗಳಿಗೆ ಪೂಜೆ ಸಲ್ಲಿಸಿ, ದೇವೀರಮ್ಮನಿಗೂ ಪೂಜೆ ಪುನಸ್ಕಾರ ನೆರವೇರಿಸಿದರು. ಹೆಣ್ಣುಮಕ್ಕಳು ಬಾಳೆಗೊನೆ ಕಟ್ಟಿ ಹಾಗೂ ಬಾಯಿಬೀಗ ಹಾಕಿಕೊಂಡು ಹರಕೆ ತೀರಿಸಿದರು. ಸಂಜೆ ದೇವೀರಮ್ಮನ ಗುಡಿಯನ್ನು ಮುಚ್ಚಲಾಯಿತು. ಈ ಗುಡಿಯ ಬಾಗಿಲನ್ನು ತೆರೆಯುವುದು ಮುಂದಿನ ವರ್ಷದ ದೇವೀರಮ್ಮ ಹಬ್ಬಕ್ಕೆ ಎಂಬ ಸಂಪ್ರದಾಯವಾಗಿದೆ.

ವರ್ಷಕ್ಕೊಮ್ಮ ತೆರೆಯುವ ದೇವಸ್ಥಾನ: ಹಾಸನದ ಹಾಸನಾಂಬೆಯ ದೇವಸ್ಥಾನವನ್ನು ವರ್ಷಕ್ಕೊಮ್ಮೆ ಮಾತ್ರ ತೆರೆದು ಪೂಜೆ ಸಲ್ಲಿಸುವಂತೆ ಪಾಂಡವಪುರ ತಾಲೂಕಿನ ಚಿಕ್ಕಾಡೆ ಗ್ರಾಮದ ಕುಂತಿ ಬೆಟ್ಟದ ತಪ್ಪಲಿನಲ್ಲಿರುವ ದೇವಿರಮ್ಮ ದೇವಸ್ಥಾನ ವರ್ಷಕ್ಕೊಮ್ಮೆ ಮಾತ್ರ ತೆರೆದು ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ. ಶಿವರಾತ್ರಿಗೂ ಹದಿನೈದು ದಿನಗಳ ಮೊದಲು ಬರುವ ಸೋಮವಾರದಂದು ದೇವಸ್ಥಾನ ತೆರೆದು ಪೂಜೆ ಸಲ್ಲಿಸಿ ಕಲ್ಲುಗಳಿಂದ ಬಾಗಿಲು ಮುಚ್ಚಲಾಗುವುದು. ಇದಕ್ಕೂ ಮೊದಲು ದೇವಿಯ ಮುಂದೆ ದೀಪವನ್ನು ಬೆಳಗಲಾಗುತ್ತದೆ. ಈ ದೀಪ ಮುಂದಿನ ವರ್ಷ ದೇವಸ್ಥಾನ ಬಾಗಿಲು ತೆರೆಯುವವರೆಗೂ ಉರಿಯುತ್ತಲೇ ಇರುತ್ತದೆ.