ಜಿಲ್ಲೆ

ಚಿಕ್ಕಮಗಳೂರು ಕೇರ್ ಸೆಂಟರ್ ನಲ್ಲಿ ಸಂಗೀತ ಕಾರ್ಯಕ್ರಮ-ನರ್ತಿಸಿದ ಅಧಿಕಾರಿಗಳು

ಚಿಕ್ಕಮಗಳೂರು: ನಿತ್ಯ ಸಾವು-ನೋವಿನ ಸುದ್ದಿಯಿಂದ ಆತಂಕದಲ್ಲಿರುವ ಸೋಂಕಿತರ ಮನರಂಜನೆಗಾಗಿ ಶನಿವಾರ ಸಂಜೆ ನಗರದ ಕರೊನಾ ಕೇರ್ ಸೆಂಟರ್ ನಲ್ಲಿ ಆಯೋಜಿಸಿದ್ದ ಸಂಗೀತ, ನೃತ್ಯ ಕಾರ್ಯಕ್ರಮ ಅವರ ದುಗುಡ, ದುಮ್ಮಾನ ಕಡಿಮೆಗೊಳಿಸಿ ಭರವಸೆ ಮೂಡಿಸಿತು.
ನಗರದ ಬೇಲೂರು ರಸ್ತೆಯ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿರುವ ಕರೊನಾ ಕೇರ್ ಸೆಂಟರ್ ನಲ್ಲಿ ಜಿಲ್ಲಾಡಳಿತ ಏರ್ಪಡಿಸಿದ್ದ ಕಾರ್ಯಕ್ರಮವದು. ತಾವು ಸೋಂಕಿತರು ಎನ್ನುವ ಮನಸ್ಥಿತಿಯಿಂದ ಹೊರಬಂದು ಹಾಡಿ ರಂಜಿಸಿದರಲ್ಲದೆ ಸಂತಸಪಟ್ಟರು. ಕಾರ್ಯಕ್ರಮದ ನಡುವೆ ಅಂತರ ಕಾಯ್ದುಕೊಂಡು ಗಮನ ಸೆಳೆದರು.
ಜಿಲ್ಲಾಡಳಿತ ಜತೆಗಿರುತ್ತದೆ ಎನ್ನುವ ಸಂದೇಶ ನೀಡುವ ಇಂಥದ್ದೊಂದು ಕಾರ್ಯಕ್ರಮ ಆಯೋಜಿಸಬೇಕು ಎಂಬ ಉಪವಿಭಾಗಾಧಿಕಾರಿ ಡಾ. ಎಚ್.ಎಲ್.ನಾಗರಾಜ್ ಅವರ ಚಿಂತನೆಗೆ ಕಲಾವಿದ, ಪತ್ರಕರ್ತ ಪಿ.ರಾಜೇಶ್ ಸಾಥ್ ನೀಡಿದರು. ತಹಸೀಲ್ದಾರ್ ಡಾ. ಕೆ.ಜೆ.ಕಾಂತರಾಜ್, ಜಿಲ್ಲಾ ಕಾರಾಗೃಹ ಅಧೀಕ್ಷಕ ರಾಕೇಶ್ ಕಾಂಬ್ಳೆ, ಉಪ ತಹಸೀಲ್ದಾರ್ ಶಾರದಾ ಇತರ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿ ಜತೆಗೂಡಿದರು.
ಶನಿವಾರ ಸಂಜೆ 7 ಗಂಟೆ ವೇಳೆಗೆ ಭಕ್ತಿಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವೈವಿಧ್ಯಮಯ ಹಾಡುಗಾರಿಕೆ, ನೃತ್ಯ ಎಲ್ಲರನ್ನೂ ರಂಜಿಸಿದವು. ಕೊನೆಯಲ್ಲಿ ನೀಡಿದ ಸತ್ಯಹರಿಶ್ಚಂದ್ರ ಚಿತ್ರದ ಕುಲದಲ್ಲಿ ಕೀಳ್ಯಾವುದೋ… ಗೀತೆ ಹಾಗೂ ನೃತ್ಯ ಎಲ್ಲರಿಗೂ ಮುದ ನೀಡಿತು.
ತಹಸೀಲ್ದಾರ್ ಡಾ. ಕಾಂತರಾಜ್ ಅವರ ಗಾಯನ ಮೋಡಿಗೆ ಮಾರುಹೋದ ಸೋಂಕಿತರು ಸಿಳ್ಳೆ ಹಾಕಿ ಸಂಭ್ರಮಿಸಿದರು. ಎಸಿ ಡಾ.ನಾಗರಾಜ್, ಅಧಿಕಾರಿ, ಸಿಬ್ಬಂದಿ ನರ್ತಿಸಿ ಗಮನ ಸೆಳೆದರು. ಇದರಿಂದ ಸ್ಫೂರ್ತಿ ಪಡೆದ ಕೆಲವು ಸೋಂಕಿತರೂ ಹಾಡಿ, ಕುಣಿದು ಕೊಂಚ ದುಗುಡ ನೀಗಿಸಿಕೊಂಡರು. ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ನಿಯಮಕ್ಕೆ ಮಣಿದು ಒಲ್ಲದ ಮನಸಿನಿಂದ ಕೇರ್ ಸೆಂಟರ್ ಸೇರಿ ಚಿಂತೆಯಲ್ಲಿದ್ದವರಿಗೆ ಈ ಕಾರ್ಯಕ್ರಮ ಸ್ವಲ್ಪ ಮಟ್ಟಿಗೆ ನಿರಾಳವೆನಿಸಿತು.
ಉಪ ವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಮಾತನಾಡಿ, ಜಿಲ್ಲೆಯಲ್ಲಿ ಕರೊನಾ ಕೇರ್ ಸೆಂಟರ್ ಸೇರುವ ಸೋಂಕಿತರು ಹತ್ತು ದಿನಗಳ ಕ್ವಾರಂಟೈನ್‍ಗೆ ಒಳಗಾಗಬೇಕಾಗುತ್ತದೆ. ಈ ವೇಳೆ ಅವರಿಗೆ ಒಂದು ರೀತಿಯ ಗೃಹಬಂಧನವಾಗಿ ಮಾನಸಿಕ ಖಿನ್ನತೆಗೆ ಒಳಗಾಗುವುದನ್ನು ತಪ್ಪಿಸಿ, ಅವರಲ್ಲೂ ಚೈತನ್ಯ ಮೂಡಿಸಿದಲ್ಲಿ ಸೋಂಕಿನಿಂದ ಮುಕ್ತರಾಗಲು ಅನುಕೂಲವಾಗಬಹುದು ಎಂದು ಕಾರ್ಯಕ್ರಮ ಹಮ್ಮಿಕೊಂಡಿದ್ದಾಗಿ ತಿಳಿಸಿದರು.
ತಹಸೀಲ್ದಾರ್ ಡಾ.ಕಾಂತರಾಜ್ ಮಾತನಾಡಿ, ಬೇರೆ ಬೇರೆ ಇಲಾಖೆ ಅಧಿಕಾರಿಗಳು ಸೇರಿ ಸೋಂಕಿತರಲ್ಲಿ ಮನರಂಜನೆ ಜತೆಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲಾಗಿದೆ. ತಾಲೂಕು ಆಡಳಿತ ಸೋಂಕಿತರ ಜತೆಗಿರುತ್ತದೆ. ಎಲ್ಲರೂ ಆದಷ್ಟು ಶೀಘ್ರ ಸೋಂಕಿನಿಂದ ಗುಣಮುಖರಾಗಬೇಕು. ಬೇರೆಯವರಿಗೂ ಮಾರ್ಗದರ್ಶಕರಾಗಬೇಕು ಎಂದು ಆಶಿಸಿದರು.
ಕಾರಾಗೃಹದ ಅಧೀಕ್ಷಕ ರಾಕೇಶ್ ಕಾಂಬ್ಳೆ ಮಾತನಾಡಿ, ಕೇರ್ ಸೆಂಟರ್ ನಲ್ಲಿರುವರಿಗೆ ಜಿಲ್ಲಾಡಳಿತ ಹಾಗೂ ಸರ್ಕಾರ ತಮ್ಮ ಜತೆಗಿದೆ ಎನ್ನುವ ಭಾವನೆ ಬರಬೇಕು. ಚಿಕಿತ್ಸೆ ಜತೆಗೆ ವೈದ್ಯರ ಸಲಹೆ, ಸೂಚನೆ ಪಾಲಿಸಿ ಪ್ರತಿಯೊಬ್ಬರೂ ಗುಣ ಹೊಂದಬೇಕು ಎಂದು ಹೇಳಿದರು.