ಚಿಕ್ಕಬಳ್ಳಾಪುರ: ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿದ್ದ ಸ್ಥಳೀಯ ವಲಸಿಗರಿಂದ ಭಾರೀ ಪ್ರಮಾಣದಲ್ಲಿ ಕರೊನಾ ಸ್ಫೋಟವಾಗಿದೆ. ಜಿಲ್ಲೆಯಲ್ಲಿ ಶುಕ್ರವಾರ 47 ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 73ಕ್ಕೇರಿದೆ.
ಗೌರಿಬಿದನೂರು, ಬಾಗೇಪಲ್ಲಿ ಮತ್ತು ಗುಡಿಬಂಡೆ ಸೇರಿ ವಿವಿಧೆಡೆಯಿಂದ ಉದ್ಯೋಗಕ್ಕಾಗಿ ಮಹಾರಾಷ್ಟ್ರಕ್ಕೆ ತೆರಳಿದ್ದ 265 ಕಾರ್ಮಿಕರು ಮೇ 19 ರಂದು ಜಿಲ್ಲೆಗೆ ವಾಪಸಾಗಿದ್ದರು. ಮುಂಜಾಗ್ರತಾ ಕ್ರಮವಾಗಿ ಎಲ್ಲರನ್ನು ಗೌರಿಬಿದನೂರಿನ ಅಟಲ್ ಬಿಹಾರಿ ವಾಜಪೇಯಿ ಬಾಲಕಿಯರ ವಿದ್ಯಾರ್ಥಿ ನಿಲಯ ಮತ್ತು ಬಾಗೇಪಲ್ಲಿ ತಾಲೂಕಿನ ತಿಮ್ಮಂಪಲ್ಲಿ ಕಸ್ತೂರಿ ಬಾ ಶಾಲೆ ಕ್ವಾರಂಟೈನ್ ಕೇಂದ್ರದಲ್ಲಿರಿಸಲಾಗಿತ್ತು.
ಎಲ್ಲ ಕಾರ್ಮಿಕರ ಗಂಟಲು ದ್ರವ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು, ಇದರಲ್ಲಿ 47 ಮಂದಿಗೆ ಸೋಂಕು ದೃಢಪಟ್ಟು, ಇನ್ನೂ 100ಕ್ಕೂ ಹೆಚ್ಚು ಮಂದಿಯ ವರದಿ ನಿರೀಕ್ಷಿಸಲಾಗುತ್ತಿದೆ.
ಜಿಲ್ಲೆಯ 8 ತಾಲೂಕುಗಳ ಪೈಕಿ ಮೂರು ತಾಲೂಕುಗಳು ಮಹಾಮಾರಿಯಿಂದ ನಲುಗುತ್ತಿವೆ, ಇದುವರೆಗೂ ಗೌರಿಬಿದನೂರಿನಲ್ಲಿ 59, ಚಿಕ್ಕಬಳ್ಳಾಪುರದಲ್ಲಿ 9 ಮತ್ತು ಚಿಂತಾಮಣಿಯಲ್ಲಿ 5 ಪ್ರಕರಣಗಳು ಪತ್ತೆಯಾಗಿವೆ. ಇಲ್ಲಿಯವರೆಗೂ ನೆಮ್ಮದಿಯಾಗಿದ್ದ ಬಾಗೇಪಲ್ಲಿಗೂ ಸೋಂಕು ವಕ್ಕರಿಸುವ ಆತಂಕ ಕಾಡುತ್ತಿದೆ. ಜಿಲ್ಲೆಯಲ್ಲಿ 18 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಗೌರಿಬಿದನೂರಿನ ವೃದ್ಧೆ ಮತ್ತು ಚಿಕ್ಕಬಳ್ಳಾಪುರದ ವೃದ್ಧ ಸೇರಿ ಮೃತಪಟ್ಟಿದ್ದಾರೆ.
ಸೋಂಕಿತರು ಆಸ್ಪತ್ರೆಗೆ ದಾಖಲು : ಸೋಂಕು ದೃಢಪಡುವುದು ಖಾತ್ರಿಯಾಗುತ್ತಿದ್ದಂತೆ ಶುಕ್ರವಾರ ಮುಂಜಾನೆ ಸೋಂಕಿತ 47 ಮಂದಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಅಗತ್ಯ ವ್ಯವಸ್ಥೆ ಕೈಗೊಳ್ಳಲು ಜಿಲ್ಲಾಡಳಿತ ಆರೋಗ್ಯ ಇಲಾಖೆಗೆ ಸೂಚಿಸಿದೆ.
ದ್ವಿಗುಣದ ಆತಂಕ: ಕಳೆದ ಬುಧವಾರದವರೆಗೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 26. ಆದರೆ, ಮಹಾರಾಷ್ಟ್ರದಿಂದ ಬಂದ ವಲಸಿಗರಿಂದ ಗುರುವಾರ ಮತ್ತು ಶುಕ್ರವಾರ 51 ಪ್ರಕರಣಗಳು ದೃಢಪಟ್ಟಿವೆ. 265 ವಲಸಿಗರ ಪೈಕಿ 100ಕ್ಕೂ ಹೆಚ್ಚು ಜನರ ಪರೀಕ್ಷಾ ವರದಿ ಇನ್ನು ಬರಬೇಕಿದೆ. ಮತ್ತೊಂದೆಡೆ 3ನೇ ಹಂತದಲ್ಲಿ ಮತ್ತಷ್ಟು ಕಾರ್ಮಿಕರು ಜಿಲ್ಲೆಗೆ ಆಗಮಿಸಲಿದ್ದು, ಇದರಲ್ಲಿ ಇನ್ನೆಷ್ಟು ಸೋಂಕಿತರು ಪತ್ತೆಯಾಗುತ್ತಾರೋ? ಎಂಬ ಆತಂಕ ಶುರುವಾಗಿದೆ.
ಅಪ್ರಾಪ್ತ ಮಕ್ಕಳಿಗೂ ಸೋಂಕು : ಪತ್ತೆಯಾದ 47 ಸೋಂಕಿತರಲ್ಲಿ ಒಂದು ಮಗು, 7 ಬಾಲಕರು, 5 ಬಾಲಕಿಯರು, 16 ಮಹಿಳೆಯರು ಮತ್ತು 18 ಪುರುಷರು ಇದ್ದಾರೆ. ವಲಸಿಗರು ಬಸ್ಸಿನಲ್ಲಿ ಪ್ರಯಾಣಿಸಿದ್ದು ಸೋಂಕಿನ ಮೂಲ ಪತ್ತೆ ಕಷ್ಟವಾಗಿದೆ. ಕರೊನಾ ಹಾಟ್‌ಸ್ಪಾಟ್ ಆಗಿರುವ ಮಹಾರಾಷ್ಟ್ರದ ಪ್ರವಾಸ ಹಿನ್ನೆಲೆಯಲ್ಲಿ ಸೋಂಕು ಹರಡಿದೆ ಎಂಬುದಾಗಿ ಆರೋಗ್ಯ ಇಲಾಖೆ ದಾಖಲಿಸಿದೆ.
ನಿಜವಾದ ಉಸ್ತುವಾರಿ ಸಚಿವರ ಆತಂಕ: ಜಿಲ್ಲೆಗೆ ಹೊರ ರಾಜ್ಯಗಳಿಂದ ವಲಸಿಗರು ಆಗಮಿಸುತ್ತಿರುವ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ.ಸುಧಾಕರ್ ಸೋಂಕಿನ ಪ್ರಮಾಣ ಹೆಚ್ಚುವ ಆತಂಕ ವ್ಯಕ್ತಪಡಿಸಿದ್ದರು. ವಲಸಿಗರ ಪ್ರವೇಶದಿಂದ ಪತ್ತೆಯಾಗುವ ಸೋಂಕಿನ ಪ್ರಮಾಣದಿಂದ ನಿದ್ದೆ ಬರುತ್ತಿಲ್ಲ ಎಂದು ಗುರುವಾರ ಟ್ವಿಟ್‌ನಲ್ಲಿ ಆತಂಕ ವ್ಯಕ್ತಪಡಿಸಿದ್ದರು, ಇದರ ಬೆನ್ನಿಗೆ ಮತ್ತೊಂದು ಟ್ವಿಟ್ ಮಾಡಿದ್ದ ಅವರು ವಲಸಿಗರನ್ನು ಕ್ವಾರಂಟೈನ್‌ನಲ್ಲಿ ಕೇಂದ್ರದಲ್ಲಿರಿಸಿ, ಆರೋಗ್ಯದ ಮೇಲೆ ನಿಗಾ ವಹಿಸಿರುವುದರಿಂದ ಜನರು ಭಯಪಡುವ ಅವಶ್ಯಕತೆ ಇಲ್ಲ ಎಂದು ಧೈರ್ಯವನ್ನೂ ಹೇಳಿದ್ದರು. ಇದೀಗ 47 ಪ್ರಕರಣಗಳು ಪತ್ತೆಯಾಗಿದ್ದು, ಈ ಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾಗುವ ಲೆಕ್ಕಾಚಾರದಿಂದ ಸಚಿವರ ಜತೆಗೆ ಜಿಲ್ಲೆಯ ಜನರಲ್ಲಿ ಆತಂಕ ಮೂಡಿದೆ.
ಜಿಲ್ಲೆಯ ಮಾಹಿತಿ ಪಡೆದ ಸಿಎಂ: ಪ್ರಕರಣಗಳ ಏರಿಕೆಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಮಂಡ್ಯದ ಜತೆಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತದೊಂದಿಗೂ ಚರ್ಚಿಸಿ ಮಾಹಿತಿ ಪಡೆದರು. ಜಿಲ್ಲೆಗೆ ಆಗಮಿಸುವ ವಲಸಿಗರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಪ್ರತಿಯೊಬ್ಬರನ್ನು ಕ್ವಾರಂಟೈನ್ ಕೇಂದ್ರದಲ್ಲಿರಿಸಲಾಗಿದೆ. ಚಿಕಿತ್ಸೆ ಮತ್ತು ಆಶ್ರಯ ಒದಗಿಸಲು ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿದೆ. ಈಗಾಗಲೇ ಗಡಿ ಭಾಗದಲ್ಲಿ ಚೆಕ್ ಪೋಸ್ಟ್‌ಗಳನ್ನು ಅಲರ್ಟ್ ಮಾಡಲಾಗಿದೆ ಎಂದು ಸಿಎಂಗೆ ಜಿಲ್ಲಾಧಿಕಾರಿ ಆರ್.ಲತಾ ಮಾಹಿತಿ ನೀಡಿದ್ದಾರೆ.