ಚಿಕ್ಕಬಳ್ಳಾಪುರ : ಸ್ವಚ್ಛ ಸರ್ವೇಕ್ಷಣಾ 2020ರ ಸಮೀಕ್ಷೆಯಲ್ಲಿ ಚಿಕ್ಕಬಳ್ಳಾಪುರ ನಗರಸಭೆ ದಕ್ಷಿಣ ಭಾರತದಲ್ಲಿ 4ನೇ ಸ್ಥಾನ ಮತ್ತು ರಾಜ್ಯದಲ್ಲಿ 2ನೇ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆ ತೋರಿದೆ.
ನೈರ್ಮಲ್ಯ ನಿರ್ವಹಣೆ ಸುಧಾರಣೆಗಾಗಿ ಕೇಂದ್ರ ಸರ್ಕಾರವು ಪ್ರತಿ ವರ್ಷ ಸಮೀಕ್ಷೆ ನಡೆಸುತ್ತಿದ್ದು, ವೈಜ್ಞಾನಿಕ ತ್ಯಾಜ್ಯ ವಿಲೇವಾರಿ, ಮರುಬಳಕೆ ಸೇರಿ ವಿವಿಧ ಮಾನದಂಡಗಳ ಅನುಸಾರ ಸಾಧನೆಯ ರ‌್ಯಾಂಕ್ ನೀಡಲಾಗುತ್ತದೆ. ಅದರಂತೆ ಚಿಕ್ಕಬಳ್ಳಾಪುರ ನಗರಸಭೆ 2ನೇ ಸ್ಥಾನ (ಕಾರವಾರ ನಗರಸಭೆ ಪ್ರಥಮ ಸ್ಥಾನ) ಮತ್ತು ದಕ್ಷಿಣ ಭಾರತದ ವ್ಯಾಪ್ತಿಯಲ್ಲಿ 4ನೇ ಸ್ಥಾನ ಪಡೆದಿದೆ ಎಂದು ಪೌರಾಯುಕ್ತ ಲೋಹಿತ್ ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ 2011ರ ಜನಗಣತಿ ಪ್ರಕಾರ 63,652 ಜನಸಂಖ್ಯೆ ಹೊಂದಿದ್ದು 31 ವಾರ್ಡ್‌ಗಳಿವೆ. ಮುಖ್ಯಮಂತ್ರಿಗಳ ನಗರ ಮತ್ತು ಪಟ್ಟಣ ಅಭಿವೃದ್ಧಿ, ನಗರಾಭಿವೃದ್ಧಿ, ವಿಶೇಷ ಅನುದಾನ ಸೇರಿ ವಿವಿಧ ಯೋಜನೆಗಳಲ್ಲಿ ಕೋಟ್ಯಂತರ ರೂ.ವೆಚ್ಚದ ಕಾಮಗಾರಿ ಕೈಗೊಂಡಿದ್ದು ಈಗಾಗಲೇ ಶೇ.94 ಒಳಚರಂಡಿ ಕೆಲಸ ಪೂರ್ಣಗೊಂಡಿದೆ. ತಾಲೂಕಿನ ಅಣಕನೂರು ಬಳಿ ತ್ಯಾಜ್ಯ ನೀರು ಸಂಸ್ಕರಣಕ್ಕೆ ಪ್ರತ್ಯೇಕ ಘಟಕ ನಿರ್ವಹಿಸಿದ್ದು ಶುದ್ಧೀಕರಣದ ಬಳಿಕ ನೀರನ್ನು ವಿವಿಧ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ.
ಇನ್ನು ನಗರದಲ್ಲಿ ಪ್ರತಿದಿನ 38 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಒಣಕಸ ಮತ್ತು ಹಸಿಕಸ ಪ್ರತ್ಯೇಕ ಸಂಗ್ರಹ ವ್ಯವಸ್ಥೆ ಜಾರಿಯಲ್ಲಿದೆ. ಈಗಾಗಲೇ ಚಿಕ್ಕಬಳ್ಳಾಪುರ ಬಯಲು ಬಹಿರ್ದೆಸೆಮುಕ್ತ ನಗರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದರ ನಡುವೆ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲೂ ಉತ್ತಮ ಸಾಧನೆ ತೋರುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ.
10 ಹಸುಗಳಿಗೆ ಆಹಾರ : ಪ್ರತಿನಿತ್ಯ ಪ್ರತ್ಯೇಕವಾಗಿ ಸಂಗ್ರಹವಾಗುವ ತರಕಾರಿ, ಎಲೆ, ಸೊಪ್ಪನ್ನು ಜಾನುವಾರುಗಳಿಗೆ ನೀಡಲಾಗುತ್ತಿದೆ. ಪುಟ್ಟತಿಮ್ಮನಹಳ್ಳಿಯ ತ್ಯಾಜ್ಯ ಘಟಕದಲ್ಲಿ ನಗರಸಭೆಯಿಂದಲೇ 10 ಹಸುಗಳನ್ನು ಸಾಕಲಾಗುತ್ತಿದ್ದು, ಈ ತರಕಾರಿ, ಎಲೆ, ಸೊಪ್ಪನ್ನು ನೀಡಲಾಗುತ್ತಿದೆ, ಈ ಹಿಂದೆ ತುಮಕೂರು ಜಿಲ್ಲೆ ಮಧುಗಿರಿ ಪುರಸಭೆಯಲ್ಲಿ ಅನುಷ್ಠಾನಗೊಳಿಸಿದ್ದ ಈ ಯೋಜನೆಯನ್ನು ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಪೌರಾಯುಕ್ತ ಲೋಹಿತ್ ತಿಳಿಸಿದ್ದಾರೆ.
ಪರಿಸರಸ್ನೇಹಿ ಮರದ ಪೆಟ್ಟಿಗೆ ವಿತರಣೆ : ಹಿಂದೆ ಪ್ರತಿ ಮನೆಗೂ ಒಣ ಮತ್ತು ಹಸಿ ಕಸ ಸಂಗ್ರಹಿಸಲು ನಗರಸಭೆಯಿಂದ ಎರಡು ಬಕೆಟ್‌ಗಳನ್ನು ನೀಡಲಾಗಿತ್ತು. ಇದೀಗ ಸಣ್ಣ ಉದ್ಯಾನ, ಕಾಂಪೌಂಡ್ ಹೊಂದಿರುವ ಮನೆಗಳಿಗೆ ಮರದ ಕಟ್ಟಿಗೆಗಳಿಂದ ತಯಾರಿಸಲಾದ ಪೆಟ್ಟಿಗೆಗಳನ್ನು ವಿತರಿಸಲಾಗುತ್ತಿದೆ. ಈ ಪೆಟ್ಟಿಗೆಯಲ್ಲಿ ಹಾಕಿದ ತರಕಾರಿ, ಹೂವು, ಸೊಪ್ಪು, ಹಣ್ಣುಗಳು ಕೆಲ ದಿನಗಳಲ್ಲಿಯೇ ಕೊಳೆತು ಗೊಬ್ಬರವಾಗುತ್ತದೆ. ಇದನ್ನೇ ಮನೆ ಆವರಣದ ಗಿಡಗಳಿಗೆ ಬಳಸಬಹುದು. ಮತ್ತೊಂದೆಡೆ ಮನೆಯಂಗಳದಲ್ಲಿಯೇ ತ್ಯಾಜ್ಯ ವಿಲೇವಾರಿಯಾಗುವುದರ ಜತೆಗೆ ಅನವಶ್ಯಕವಾಗಿ ವಾರ್ಡ್‌ಗಳಿಂದ ಬೇರೆಡೆ ರಾಶಿ ರಾಶಿ ಕಸ ಸಾಗಿಸುವುದು ತಪ್ಪುತ್ತದೆ. ಜತೆಗೆ ಸಾಗಣೆ ಸಮಯ, ಪರಿಶ್ರಮ ಮತ್ತು ಹಣದ ವೆಚ್ಚ ಉಳಿಯುತ್ತದೆ ಎನ್ನುವುದು ನಗರಸಭೆ ಅಧಿಕಾರಿಗಳ ಮಾತು.
ಚಿಕ್ಕಬಳ್ಳಾಪುರ ನಗರಸಭೆಗೆ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಒಳ್ಳೆಯ ಸ್ಥಾನ ಸಿಕ್ಕಿರುವುದು ಸಂತಸದ ವಿಚಾರ. ಇದಕ್ಕೆ ಎಲ್ಲರ ಸಹಕಾರವೇ ಕಾರಣ.
ಲೋಹಿತ್, ಪೌರಾಯುಕ್ತ, ನಗರಸಭೆ