ಚಿಕ್ಕಬಳ್ಳಾಪುರ : ಜಿಲ್ಲಾ ಕೇಂದ್ರದಲ್ಲಿ ಆಸ್ತಿ ಖಾತೆ ಮತ್ತು ವಾಣಿಜ್ಯ ಪರವಾನಗಿ ವಿತರಣೆಯಲ್ಲಿ ನಿರಂತರ ಕಡೆಗಣನೆಯಿಂದ ನಗರಸಭೆಯ ಆದಾಯಕ್ಕೆ ಖೋತಾ ಬೀಳುತ್ತಿರುವುದರ ಬಗ್ಗೆ ಅಸಮಾಧಾನ ವ್ಯಕ್ತವಾಯಿತು.
ನಗರಸಭೆಯ ಕಚೇರಿಯ ಸರ್ ಎಂ.ವಿ.ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣದ ವಿಚಾರದಲ್ಲಿ ನಿರ್ಲಕ್ಷ್ಯ ಸೇರಿ ಹಲವು ವಿಚಾರಗಳ ಚರ್ಚೆಯಾಯಿತು.
ನಗರದಲ್ಲಿ 3500ಕ್ಕೂ ಹೆಚ್ಚು ವ್ಯಾಪಾರಿಗಳಿದ್ದಾರೆ. ಆದರೆ, ಹೆಚ್ಚಿನ ಜನರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದರೂ ನಗರಸಭೆಯಲ್ಲಿ ಕೇವಲ 350 ಮಂದಿಗೆ ಪರವಾನಗಿ ನೀಡಲಾಗಿದೆ. ಇದರ ಜತೆಗೆ ತಿಂಗಳಾನುಗಟ್ಟಲೇ ಆಸ್ತಿ ಖಾತೆ, ಇ-ಖಾತೆ ವಿತರಿಸದೇ ಜನರನ್ನು ಅಲೆದಾಡಿಸಲಾಗುತ್ತಿದೆ ಎಂದು ಅಂಬರೀಷ್, ನರಸಿಂಹಮೂರ್ತಿ, ಕಣಿತಹಳ್ಳಿ ವೆಂಕಟೇಶ್, ಗಜೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.
ಆಸ್ತಿ ಖಾತೆಯ ವಿಚಾರದಲ್ಲಿ ರಾಜ್ಯ ಮಟ್ಟದಲ್ಲಿ ತಾಂತ್ರಿಕ ಸಮಸ್ಯೆ ಇದೆ. ಇದರ ಪರಿಹಾರಕ್ಕೆ ಸಂಬಂಧಪಟ್ಟ ಸಚಿವರ ಮೂಲಕ ಗಮನ ಸೆಳೆಯಲಾಗಿದೆ. ಆದಷ್ಟು ಬೇಗ ವಾಣಿಜ್ಯ ಪರವಾನಗಿ ವಿತರಣೆಯ ಬೃಹತ್ ಆಂದೋಲನವನ್ನು ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ಡಿ.ಎಸ್.ಆನಂದ್ ರೆಡ್ಡಿ ಬಾಬು ತಿಳಿಸಿದರು.
ಅಮೃತ ನಿರ್ಮಲ ಯೋಜನೆಯಡಿ ಪುಟ್ಟತಿಮ್ಮನಹಳ್ಳಿಯಲ್ಲಿನ ತ್ಯಾಜ್ಯ ಸಂಸ್ಕರಣಾ ಘಟಕದಿಂದ ರಸ್ತೆಯ ನಿರ್ಮಾಣಕ್ಕೆ 70 ಲಕ್ಷ ರೂ, ನಗರಸಭೆಯ 27 ವಾಹನಗಳಿಗೆ ಜಿಪಿಎಸ್ ಅಳವಡಿಕೆಗೆ 3 ಲಕ್ಷ ರೂ ಸೇರಿ 1 ಕೋಟಿ ರೂ. ಕ್ರಿಯಾ ಯೋಜನಾ ವರದಿಗೆ ಅನುಮೋದನೆ ಪಡೆಯಲಾಗಿದೆ. ನಗರ ವ್ಯಾಪ್ತಿಯಲ್ಲಿನ ಸಾರ್ವಜನಿಕ ಶೌಚಗೃಹಗಳಲ್ಲಿ ನಿರ್ವಹಣೆಯ ಬಗ್ಗೆ ಜನರ ಅಭಿಪ್ರಾಯ ಸಂಗ್ರಹಿಸುವ ಯಂತ್ರಗಳ ನಿರ್ವಹಣೆ, ನಗರಸಭೆ ವ್ಯಾಪ್ತಿಯಲ್ಲಿನ ರಸ್ತೆಗಳನ್ನು ಸ್ವಚ್ಛಗೊಳಿಸಲು 2 ಯಂತ್ರಗಳ ಖರೀದಿ ಮತ್ತು ಯುಜಿಡಿ 2 ವಾಹನಗಳ ಖರೀದಿಸಲಾಗುತ್ತಿದೆ ಎಂದು ಹಿರಿಯ ಆರೋಗ್ಯ ನಿರೀಕ್ಷಕ ಶ್ರೀನಾಥ್ ಬಾಬು ಸಭೆಗೆ ಮಾಹಿತಿ ನೀಡಿದರು.
ವಾರ್ಡ್‌ಗಳಲ್ಲಿ ಯುಜಿಡಿ ಬ್ಲಾಕ್, ದುರ್ವಾಸನೆ, ಮನೆಗೆ ಕೊಳಚೆ ನೀರು ಹರಿಯುವಿಕೆ, ದೂರಿಗೆ ಸಿಬ್ಬಂದಿ ಕಡೆಗಣನೆ ಬಗ್ಗೆ ಗ್ಯಾಸ್ ನಾಗರಾಜ್, ಭಾರತಿದೇವಿ ಆರೋಪಿಸಿದರು.
ಉಪಾಧ್ಯಕ್ಷೆ ವೀಣಾರಾಮು, ಪೌರಾಯುಕ್ತ ಮಹಾಂತೇಶ್ ಮತ್ತಿತರರು ಇದ್ದರು.
ಆತ್ಮಸಾಕ್ಷಿ ಒಪ್ಪುತ್ತಿಲ್ಲ : ಸ್ವಚ್ಛ ಸರ್ವೆಕ್ಷಣಾ ಯೋಜನೆಯಡಿ ನಗರದ ನೈರ್ಮಲ್ಯದ ಸುಧಾರಣೆಯ ರ‌್ಯಾಂಕಿಂಗ್ ಮತ್ತು ಪ್ರಶಸ್ತಿಯ ಶಿಫಾರಸಿಗೆ ಆತ್ಮಸಾಕ್ಷಿ ಒಪ್ಪಲಿಲ್ಲ ಎಂದು ಬಹುತೇಕ ಸದಸ್ಯರು ವ್ಯಂಗ್ಯವಾಡಿದರು. ಈಗಾಗಲೇ ನಗರಸಭೆಗೆ ಸ್ವಚ್ಛ ಸರ್ವೆಕ್ಷಣಾ ಯೋಜನೆಯಡಿ ಒಳ್ಳೆಯ ಪ್ರಶಸ್ತಿ ಸಿಕ್ಕಿದೆ. ಆದರೆ, ಇಲ್ಲಿ ವಾಸ್ತವ ಬೇರೆ ಇದೆ. ಇಲ್ಲಿನ ಅನೈರ್ಮಲ್ಯ, ಎಲ್ಲೆಂದರಲ್ಲಿ ಕಸ ಎಸೆಯುವಿಕೆ, ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಮತ್ತು ಯುಜಿಡಿ ಸಮಸ್ಯೆಯನ್ನು ನೋಡಿದಾಗ ಪ್ರಶಸ್ತಿಗೆ ಅರ್ಹತೆ ಇದೆಯೇ? ಎಂಬ ಅನುಮಾನ ಮೂಡುತ್ತದೆ ಎಂದು ಆರ್.ಮಟಮಪ್ಪ, ಅಂಬರೀಷ್ ತಿಳಿಸಿದರು.
ಸ್ವಚ್ಛ ಗೃಹ ಕಲಿಕಾ ಕೇಂದ್ರ ಸ್ಥಾಪನೆ: ಪೌರಾಡಳಿತ ನಿರ್ದೇಶನಾಲಯದ ಆದೇಶದಂತೆ ಜಿಲ್ಲಾ ಕೇಂದ್ರದಲ್ಲಿ ಸ್ವಚ್ಛ ಗೃಹ ಕಲಿಕಾ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಮಹಿಳಾ ಸ್ವಸಹಾಯ ಸಂಘ ಮತ್ತು ಎನ್‌ಜಿಒ ಸಂಸ್ಥೆಯ ಮೂಲಕ ಮಹಿಳೆಯರಿಗೆ ಮನೆಗಳಲ್ಲಿ ಸ್ವಚ್ಛತೆ ನಿರ್ವಹಣೆ, ಮಳೆ ಕೊಯ್ಲು, ಪೌರ ಕಾರ್ಮಿಕರಿಗೆ ಕರ್ತವ್ಯ ನಿರ್ವಹಣೆ ಸೇರಿ ವಿಶೇಷ ಕಾರ್ಯಾಗಾರ ಮತ್ತು ತರಬೇತಿಗೆ ಕಲಿಕಾ ಕೇಂದ್ರ ಸ್ಥಾಪಿಸಲಾಗುತ್ತದೆ. ಇದಕ್ಕೆ 30 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಹಿರಿಯ ಆರೋಗ್ಯ ನಿರೀಕ್ಷಕ ಶ್ರೀನಾಥ್ ಬಾಬು ತಿಳಿಸಿದರು.