ಚಿಕ್ಕಬಳ್ಳಾಪುರ: ಜಿಲ್ಲಾಕೇಂದ್ರದಲ್ಲಿ ವಾಣಿಜ್ಯ ಪರವಾನಗಿ ನೀಡುವ ಪ್ರಕ್ರಿಯೆಯಲ್ಲಿನ ಅವ್ಯವಹಾರ ಇಲ್ಲಿನ ನಗರಸಭೆಯಲ್ಲಿ ಬುಧವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು.
ಹಲವು ವರ್ಷಗಳಿಂದಲೂ ಬಗೆಹರಿಯದ ಯುಜಿಡಿ ಕಿರಿಕಿರಿ, ಅಪಾಯಕಾರಿ ಸ್ಥಿತಿಯಲ್ಲಿ ವಿದ್ಯುತ್ ದೀಪಗಳ ಅಳವಡಿಕೆ, ಕುಡಿಯುವ ನೀರಿನ ಪೂರೈಕೆ ಮೀಟರ್ ಅಳವಡಿಕೆಯಲ್ಲಿ ನಿರ್ಲಕ್ಷ್ಯ ಸೇರಿ ಹಲವು ಸಮಸ್ಯೆಗಳ ಬಗ್ಗೆ ಗಮನ ಸೆಳೆದ ಸದಸ್ಯರು, ಅನುಮತಿಯಿಲ್ಲದೇ ಕಟ್ಟಡಗಳ ನಿರ್ಮಾಣ ಮತ್ತು ವಾಣಿಜ್ಯ ಪರವಾನಗಿ ನೀಡುವಲ್ಲಿನ ಅಕ್ರಮಗಳಿಗೆ ಆಕ್ರೋಶ ವ್ಯಕ್ತಪಡಿಸಿದರು.
ಅಗಲಗುರ್ಕಿಗೇಟ್‌ನಿಂದ ವಾಪಸಂದ್ರದವರೆಗಿನ ಎಂ.ಜಿ.ರಸ್ತೆಯುದ್ದಕ್ಕೂ ಹೊಸ ವಾಣಿಜ್ಯ ಕಟ್ಟಡಗಳು ತಲೆಎತ್ತಿವೆ. ಇವುಗಳಲ್ಲಿ ಎಷ್ಟು ವಾಣಿಜ್ಯ ಪರವಾನಗಿ ಪಡೆದಿವೆ? ನಗರಸಭೆಗೆ ಎಷ್ಟು ಆದಾಯ ಬಂದಿದೆ? ಎಂದು ಅಂಬರೀಷ್ ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಅಧ್ಯಕ್ಷ ಡಿ.ಎಸ್.ಆನಂದ್‌ರೆಡ್ಡಿ, ಈಗಾಗಲೇ ಪಟ್ಟಿ ತಯಾರಿಸಲಾಗಿದೆ. ಅವ್ಯವಹಾರದ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವ ಭರವಸೆ ನೀಡಿದರು. ಇಷ್ಟಕ್ಕೆ ಸಮಾಧಾನಗೊಳ್ಳದ ಗಜೇಂದ್ರ, ಪ್ರತಿ ಅಂಗಡಿಗೂ ತೆರಳಿ ಅಧಿಕಾರಿಗಳು ವಾಣಿಜ್ಯ ಪರವಾನಗಿ ವಿತರಣೆ ಮತ್ತು ಸುಂಕ ವಸೂಲಿಗೆ ಆಂದೋಲನ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸದಸ್ಯರು, ಅಧಿಕಾರಿಗಳು ಇದ್ದರು.
ಬೆಸ್ಕಾಂಗೆ ಸದಸ್ಯರ ತರಾಟೆ: ನಗರಸಭೆಯ ವ್ಯಾಪ್ತಿಯಲ್ಲಿನ ರಸ್ತೆಗಳಲ್ಲಿ ಮನಸ್ಸಿಗೆ ಬಂದಂತೆ ವಿದ್ಯುತ್ ಕಂಬಗಳ ಅಳವಡಿಕೆ ಹಾಗೂ ಅಪಾಯಕಾರಿ ಕಂಬಗಳ ತೆರವಿಗೆ ನಿರ್ಲಕ್ಷ್ಯ ತೋರುತ್ತಿರುವ ಬೆಸ್ಕಾಂ ವಿರುದ್ಧ ಸದಸ್ಯರು ಮುಗಿ ಬಿದ್ದರು. ಬೆಸ್ಕಾಂಗೆ ಪ್ರತಿವರ್ಷ ಒಂದೂವರೆ ಕೋಟಿ ರೂ. ಗೂ ಹೆಚ್ಚು ಹಣವನ್ನು ನಗರಸಭೆಯಿಂದ ಪಾವತಿಸಲಾಗುತ್ತಿದೆ. ಆದರೆ, ಸ್ಪಂದನೆ ಮಾತ್ರ ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ಎಸ್.ಎಂ.ರಫಿಕ್ ಕಿಡಿಕಾರಿದರೆ, ಕಂದವಾರಪೇಟೆಯ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಅಡ್ಡಲಾಗಿರುವ ಟ್ರಾನ್ಸ್‌ಫಾರ್ಮರ್ ತೆರವಿಗೆ 4 ವರ್ಷದಿಂದಲೂ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ನಿರ್ಮಲಪ್ರಭು ಆಕ್ರೋಶ ವ್ಯಕ್ತಪಡಿಸಿದರು. ಬೆಸ್ಕಾಂ ನಿರ್ಲಕ್ಷ್ಯಕ್ಕೆ ವಿದ್ಯುತ್ ಕಂಬದ ಬೆಂಕಿ ಅವಘಡದಿಂದ ಜನರು ಪಾರಾದ ಬಗ್ಗೆ ಆರ್.ಮಟಮಪ್ಪ ಗಮನ ಸೆಳೆದರು. ಆರೋಪಿಗಳಿಗೆ ಪ್ರತಿಕ್ರಿಯಿಸಿದ ಬೆಸ್ಕಾಂ ಅಧಿಕಾರಿ ಹರೀಶ್, ಪಟ್ಟಿ ತಯಾರಿಸಿ ಹಂತ ಹಂತವಾಗಿ ತೆರವುಗೊಳಿಸುವುದಾಗಿ ನುಣುಚಿಕೊಂಡರು.
ಸರ್ವೆಗೆ ಸೂಚನೆ: ನಗರದಲ್ಲಿ ಹಲವು ವರ್ಷಗಳಿಂದಲೂ ಕಾಡುತ್ತಿರುವ ಯುಜಿಡಿ, ನೀರು ಮೀಟರ್ ಅಳವಡಿಕೆ ಮತ್ತು ವಿದ್ಯುತ್ ಕಂಬಗಳ ತೆರವಿಗೆ ಸಂಬಂಧಿಸಿದಂತೆ ಸರ್ವೇ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ಡಿ.ಎಸ್.ಆನಂದ್‌ರೆಡ್ಡಿ ತಿಳಿಸಿದರು. ಬಹುತೇಕ ವಾರ್ಡ್‌ಗಳಲ್ಲಿ ಮ್ಯಾನ್‌ಹೋಲ್, ಒಳಚರಂಡಿಯ ಕೊಳಚೆ ನೀರಿನ ಸಮಸ್ಯೆ ದೊಡ್ಡ ತಲೆನೋವಾಗಿದೆ ಎಂದು ಅಂಬರೀಷ್, ಗ್ಯಾಸ್ ನಾಗರಾಜ್, ರಫಿಕ್, ಗಜೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಮಾಧಿಯ ಗೋಪುರ ನಿರ್ಮಾಣಕ್ಕೆ ಅನುಮತಿ ಕಡ್ಡಾಯ: ನಗರದ ವಿವಿಧ ಸ್ಮಶಾನಗಳಲ್ಲಿ ಯಾವುದೇ ಸಮಾಧಿಗೆ ಗೋಪುರ, ಮಂಟಪ ನಿರ್ಮಿಸಲು ಸಂಬಂಧಪಟ್ಟವರು ನಗರಸಭೆಯ ಅನುಮತಿ ಪಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು. ಮೃತರ ಸಂಬಂಧಿಕರು ಸ್ಮಶಾನಗಳಲ್ಲಿ ಸಮಾಧಿಗೆ ದೊಡ್ಡ ಗೋಪುರ ಮತ್ತು ಮಂಟಪ ನಿರ್ಮಿಸುತ್ತಿದ್ದಾರೆ. ಇದರಿಂದ ಸ್ಥಳ ಅಭಾವ ಉಂಟಾಗುತ್ತಿದೆ. ಮುಂಬರುವ ದಿನಗಳಲ್ಲಿ ಅಂತ್ಯಸಂಸ್ಕಾರಕ್ಕೆ ತೊಂದರೆಯಾಗಬಹುದು. ಈ ನಿಟ್ಟಿನಲ್ಲಿ ಅನುಮತಿ ಕಡ್ಡಾಯಕ್ಕೆ ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯಿಂದ ಎದ್ದು ಹೋಗುವೆ: ಒಮ್ಮೆಲೆ ಎಲ್ಲ ಸದಸ್ಯರು ಮಾತು ಆರಂಭಿಸಿದ್ದರಿಂದ ಗದ್ದಲ ಉಂಟಾಯಿತಿ, ಇದಿರಂದ ಸಿಟ್ಟಿಗೆದ್ದ ಅಧ್ಯಕ್ಷ ಆನಂದ್‌ರೆಡ್ಡಿ, ಇದೇ ರೀತಿ ಗದ್ದಲ ಮಾಡುತ್ತಿದ್ದರೆ ಸಭೆಯಲ್ಲಿ ಎದ್ದು ಹೋಗುವೆ ಎಚ್ಚರಿಕೆ ನೀಡಿದರು. ಒಬ್ಬರು ಮಾತನಾಡುವಾಗ ಬೇರೆಯವರು ಸುಮ್ಮನೆ ಇರಬೇಕು. ಇಲ್ಲದಿದ್ದಲ್ಲಿ ಇಲ್ಲಿಂದ ಎದ್ದು ಹೋಗುವೆ. ನಿಮ್ಮ ಸಮಸ್ಯೆಗಳನ್ನು ಗಮನಕ್ಕೆ ತನ್ನಿ, ಚರ್ಚಿಸೋಣ, ಇದನ್ನು ಬಿಟ್ಟು ಎಲ್ಲರೂ ಒಂದೇ ಬಾರಿ ಮಾತನಾಡಿ ಗದ್ದಲ ಉಂಟು ಮಾಡುವುದು ಸರಿಯಲ್ಲ ಎಂದು ತಿಳಿಸಿದರು.