ಚಿಕ್ಕಬಳ್ಳಾಪುರ : ಕರೊನಾ ಸೋಂಕಿತ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದ ನಾಲ್ಕು ವಾರ್ಡ್‌ಗಳನ್ನು ಜಿಲ್ಲಾಡಳಿತ ಸೀಲ್ ಡೌನ್ ಮಾಡಿದೆ.
ನಗರದ 17ನೇ ವಾರ್ಡ್‌ನ 65 ವರ್ಷದ ವೃದ್ಧ ಸೋಂಕಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈತನೊಂದಿಗೆ ನೇರ ಸಂಪರ್ಕದಲ್ಲಿದ್ದ ಐವರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಇದರ ನಡುವೆ ಸೋಂಕಿತ ವಾಸಿಸುತ್ತಿದ್ದ 17ನೇ ವಾರ್ಡಿನೊಂದಿಗೆ 12, 13 ಮತ್ತು 10ನೇ ವಾರ್ಡ್‌ಗಳನ್ನೂ ಸೀಲ್‌ಡೌನ್ ಮಾಡಲಾಗಿದ್ದು ಜನರು ಹೊರಗೆ ಬಾರದಂತೆ ಎಚ್ಚರಿಕೆ ನೀಡಲಾಗಿದೆ.ಪ್ರಮುಖ ವೃತ್ತಗಳಲ್ಲಿ ಪೇದೆಗಳನ್ನು ನಿಯೋಜಿಸಿ, ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಇದರ ಮೂಲಕ ಇತರ ವಾರ್ಡ್‌ಗಳೊಂದಿಗಿನ ಸಂಪರ್ಕ ಕಡಿತಗೊಳಿಸಿದ್ದು ಯಾರೂ ನಿಗದಿತ ವಾರ್ಡ್‌ಗಳಿಗೆ ತೆರಳುವಂತಿಲ್ಲ. ಹಾಗೆಯೇ ಅಲ್ಲಿನವರು ಬೇರೆ ಕಡೆ ಹೋಗುವಂತಿಲ್ಲ.
ನಾಲ್ವರು ನೋಡಲ್ ಅಧಿಕಾರಿ : 17ನೇ ವಾರ್ಡ್‌ನಲ್ಲಿ ಕ್ವಾರಂಟೈನಲ್ಲಿರಬೇಕಾದ ಶಂಕಿತರ ಸಂಖ್ಯೆ ಹೆಚ್ಚಾಗಿದೆ. ಇದೇ ವೇಳೆ ಮೃತ ಸೋಂಕಿತ ಮತ್ತು ಕುಟುಂಬದವರ ಟ್ರಾವೆಲ್ ಹಿಸ್ಟರಿಯನ್ನು ಅಧಿಕಾರಿಗಳು ಕೆದಕುತ್ತಿದ್ದು ಪ್ರಸ್ತುತ 38 ಮಂದಿ ಪತ್ತೆಯಾಗಿದ್ದಾರೆ. ಆದರೆ, ಇದರ ಸಂಖ್ಯೆ 103 ಆಗುವ ಸಾಧ್ಯತೆ ಇದೆ. ಇದರಲ್ಲಿ ಸಮರ್ಪಕ ಮಾಹಿತಿ ಪಡೆಯುವವರೆಗೂ ಮುಂಜಾಗ್ರತಾ ಕ್ರಮವಾಗಿ ಸೀಲ್‌ಡೌನ್ ಬಿಗಿಗೊಳಿಸಿದ್ದು ಇಲ್ಲಿ ಜನರು ಬಯಸುವ ಸೇವೆ ಮನೆ ಬಾಗಿಲ ಬಳಿಯೇ ಸಿಗುತ್ತಿದೆ. ದಿನಸಿ ಸೇರಿ ಅಗತ್ಯ ವಸ್ತುಗಳನ್ನು ಸ್ವಯಂಸೇವಕರೇ ತಲುಪಿಸುತ್ತಿದ್ದಾರೆ.ಈ ನಿಟ್ಟಿನಲ್ಲಿ 4ವಾರ್ಡ್‌ಗೂ ತಲಾ ಒಬ್ಬರು ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಸ್ಥಳೀಯ ಜನರ ಮೊಬೈಲ್ ನಂಬರ್ ಪಡೆದುಕೊಂಡು ವಾಟ್ಸ್ ಆ್ಯಪ್ ಗ್ರೂಪ್ ರಚಿಸಿದ್ದು ಸಹಾಯವಾಣಿ ಸಂಖ್ಯೆ ನೀಡಲಾಗಿದೆ. ಇದರ ಮೂಲಕ ಸಿಗುವ ಮಾಹಿತಿಯಿಂದ ಅಗತ್ಯ ನೆರವು ಒದಗಿಸುವುದರ ಜತೆಗೆ ಧೈರ್ಯ ತುಂಬಲಾಗುತ್ತಿದೆ.
ಹಿರಿಯ ಅಧಿಕಾರಿಗಳ ಭೇಟಿ : ಮೊದಲ ಬಾರಿಗೆ ಜಿಲ್ಲಾ ಕೇಂದ್ರದಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಜಿಪಂ ಸಿಇಒ ಬಿ.ೌಜಿಯಾ ತರನ್ನುಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸೀಲ್ ಡೌನ್ ವಾರ್ಡ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಪೊಲೀಸ್ ಭದ್ರತೆ, ಜನರ ಮೇಲೆ ನಿಗಾ, ಅಗತ್ಯ ಸೇವೆ ಒದಗಿಸುವುದು ಸೇರಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸಿಬ್ಬಂದಿಗೆ ಸಲಹೆ ಸೂಚನೆ ನೀಡಿದರು.