ಜಿಲ್ಲೆ

ಚಿಕ್ಕಬಳ್ಳಾಪುರ ಜಿಲ್ಲಾದ್ಯಂತ ಸಡಗರದ ವರ್ಷಾಚರಣೆ

ಚಿಕ್ಕಬಳ್ಳಾಪುರ:ಎಲ್ಲೆಡೆ ಹೊಸ ವರ್ಷ 2020ರ ಅದ್ದೂರಿ ಸಂಭ್ರಮಾಚರಣೆ ಕಂಡು ಬಂದಿದ್ದು ಹಲವರು ಆತ್ಮೀಯರೊಂದಿಗೆ ಜಿಲ್ಲೆಯ ವಿವಿಧ ಪ್ರವಾಸಿ ತಾಣ ಮತ್ತು ಆಲಯಗಳಿಗೆ ತೆರಳಿ ಖುಷಿ ಅನುಭವಿಸಿದರು.

ನಂದಿ ಗಿರಿಧಾಮ, ಸ್ಕಂದಗಿರಿ, ಆವುಲಬೆಟ್ಟ, ವಿದುರಾಶ್ವತ್ಥ, ರಂಗಸ್ಥಳ, ಮುರಗಮಲ್ಲಾ ಸೇರಿ ವಿವಿಧೆಡೆ ಪ್ರವಾಸಿಗರು ಭೇಟಿ ನೀಡಿದರು. ನಂದಿ ಗಿರಿಧಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಡಿ.31ರ ಸಂಜೆ 4 ರಿಂದ ಜ.1ರ ಬೆಳಗ್ಗೆ 8ರವರೆಗೆ ಪ್ರವಾಸಿಗರಿಗೆ ಜಿಲ್ಲಾ ಪೊಲೀಸ್ ಇಲಾಖೆ ಪ್ರವೇಶ ನಿಷೇಧಿಸಿತ್ತು. ಬುಧವಾರ ಬೆಳಗ್ಗೆ 6ಕ್ಕೆ ಪ್ರವಾಸಿಗರು ಗಿರಿಧಾಮಕ್ಕೆ ಆಗಮಿಸಿದ್ದು 8 ಗಂಟೆ ಬಳಿಕ ಬೆಟ್ಟದ ತಪ್ಪಲಿನ ಚೆಕ್ ಪೋಸ್ಟ್‌ನಿಂದ ತೆರಳಲು ಪೊಲೀಸರು ಅವಕಾಶ ನೀಡಿದರು.

ರಾಜ್ಯ ಮಾತ್ರವಲ್ಲದೆ ನೆರೆ ರಾಜ್ಯಗಳಿಂದಲೂ ಐಟಿ ಬಿಟಿ ಕಂಪೆನಿ ಟೆಕ್ಕಿಗಳು, ಪ್ರೇಮಿಗಳು, ದಂಪತಿ ಮಕ್ಕಳು ಸೇರಿ ಹಲವರು ಬೆಟ್ಟದಲ್ಲಿ ತಿರುಗಾಡಿದರು. ಟಿಪ್ಪು ಡ್ರಾಪ್, ಬೇಸಿಗೆ ಅರಮನೆ, ನೆಹರೂ ನಿಲಯ, ಗಾಂಧಿನಿಲಯ, ಮಕ್ಕಳ ಉದ್ಯಾನ ವೀಕ್ಷಿಸಿದರಲ್ಲದೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಆಲಯ, ಚರ್ಚುಗಳಲ್ಲಿ ಜನ

ನಂದಿಯ ಭೋಗನಂದೀಶ್ವರ ಸ್ವಾಮಿ ಮತ್ತು ಯೋಗ ನಂದೀಶ್ವರ ಸ್ವಾಮಿ ದೇವಾಲಯ, ನಗರದ ವೆಂಕಟರಮಣಸ್ವಾಮಿ, ಶನಿಮಹಾತ್ಮಸ್ವಾಮಿ, ಅಯ್ಯಪ್ಪಸ್ವಾಮಿ, ಮರಳು ಸಿದ್ದೇಶ್ವರಸ್ವಾಮಿ ಸೇರಿ ವಿವಿಧ ಆಲಯಗಳಲ್ಲಿ ಅನೇಕರು ವಿಶೇಷ ಪೂಜೆ ಸಲ್ಲಿಸಿದರು. ನಗರದ ಸೆಂಥ್ ಕ್ಸೇವಿಯರ್, ಸಿಎಸ್‌ಐ ಚರ್ಚುಗಳಲ್ಲಿ ರಾತ್ರಿ ಸಾಮೂಹಿಕ ವಿಶೇಷ ಪ್ರಾರ್ಥನೆ ನಡೆಯಿತು. ಹಲವರು ಮೇಣದ ಬತ್ತಿಗಳನ್ನು ಅಂಟಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.

ಪರ್ಯಾಯ ಸ್ಥಳಗಳಲ್ಲಿ ಆಚರಣೆ

ಗಿರಿಧಾಮದಲ್ಲಿ ನಡುರಾತ್ರಿ ಹೊಸ ವರ್ಷಾಚರಣೆಗೆ ಅವಕಾಶ ನೀಡಿರಲಿಲ್ಲ. ಇದರಿಂದ ಯುವಕ ಯುವತಿಯರು ಖಾಸಗಿ ರೆಸಾರ್ಟ್, ವಿಲ್ಲಾ, ತೋಟದ ಮನೆ ಸೇರಿ ಪರ್ಯಾಯ ಸ್ಥಳಗಳಲ್ಲಿ ಕೇಕು ಕತ್ತರಿಸಿ ಕುಣಿದು ಕುಪ್ಪಳಿಸಿದರು. ರಾತ್ರಿ 12 ಆಗುತ್ತಿದ್ದಂತೆ ಅಲ್ಲಲ್ಲಿ ಪಟಾಕಿಗಳ ಸದ್ದು ಕೇಳಿ ಬಂತು.

ಪೊಲೀಸ್ ಬಿಗಿ ಭದ್ರತೆ

ಪೊಲೀಸ್ ಇಲಾಖೆ ಜಿಲ್ಲಾದ್ಯಂತ ಬಿಗಿ ಬಂದೋಬಸ್ತ್ ಕೈಗೊಂಡಿತ್ತು. ಪ್ರಮುಖ ರಸ್ತೆಗಳಲ್ಲಿ ಗಸ್ತು ವಾಹನಗಳು ಸಂಚರಿಸಿದವು. ಸಿಬ್ಬಂದಿಗೆ ರಜೆ ನೀಡದೆ ಬೀಟ್ ವ್ಯವಸ್ಥೆ ಚುರುಕುಗೊಳಿಸಲಾಗಿತ್ತು.