ಚಿತ್ರದುರ್ಗ: ಶಿವಮೂರ್ತಿ ಮುರುಘಾ ಶರಣರ ಮೊದಲ ಪೋಕ್ಸೋ ಪ್ರಕರಣದ ಸಂತ್ರಸ್ತ ಬಾಲಕಿ, ಮನೆಯೊಳಗೆ ದೈಹಿಕ-ಮಾನಸಿಕ ಹಿಂಸೆ ನೀಡುತ್ತಿದ್ದಾರೆಂದು ಚಿಕ್ಕಪ್ಪನ ವಿರುದ್ಧವೇ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಳಿ ಮಂಗಳವಾರ ದೂರು ನೀಡಿದ್ದಾಳೆ.
ಮಕ್ಕಳ ಕಲ್ಯಾಣ ಸಮಿತಿ ಆಪ್ತ ಸಮಾಲೋಚನೆ ನಡೆಸಿದ್ದು, ಬಾಲಕಿಯ ಹೇಳಿಕೆ ಆಧರಿಸಿ ಚಿಕ್ಕಪ್ಪನ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸ್ ಇಲಾಖೆಗೆ ನಿರ್ದೇಶಿಸಿದೆ.
ಮೊದಲ ಪೋಕ್ಸೋ ಪ್ರಕರಣ ಬೆಳಕಿಗೆ ಬಂದ ನಂತರ ಮಕ್ಕಳ ಕಲ್ಯಾಣ ಸಮಿತಿಯ ರಕ್ಷಣೆಯಲ್ಲಿದ್ದ ಈ ಬಾಲಕಿಯನ್ನು ಪಾಲಕರಿಲ್ಲದ ಕಾರಣ ಚಿಕ್ಕಪ್ಪ-ಚಿಕ್ಕಮ್ಮನ ವಶಕ್ಕೆ ಒಪ್ಪಿಸುವಂತೆ ನ್ಯಾಯಾಲಯ ಆದೇಶಿಸಿತ್ತು. ಅದರಂತೆ ಸಮಿತಿ ನಡೆದುಕೊಂಡಿತ್ತು.
ಈಗ ಬಾಲಕಿಯೇ, ಚಿಕ್ಕಪ್ಪ ಮನೆಯಲ್ಲಿ ಹೊಡೆಯುತ್ತಾರೆ, ಬೈಯುತ್ತಾರೆ. ಅಲ್ಲದೆ, ನನ್ನ ತಮ್ಮನಿಗೂ ಇದೇ ರೀತಿ ದೈಹಿಕ-ಮಾನಸಿಕ ಹಿಂಸೆ ನೀಡಿದ್ದಾರೆ. ನಮಗೆ ಸೂಕ್ತ ರಕ್ಷಣೆ ನೀಡಿ ಎಂದು ರಕ್ಷಣಾಧಿಕಾರಿ ಸವಿತಾ ಮುಂದೆ ಅಳಲು ತೋಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ.
ಇದಕ್ಕೂ ಮುನ್ನ ಮೇ 22 ರಂದು ಮನೆಯಿಂದ ಕಾಣೆಯಾಗಿದ್ದ ಸಂತ್ರಸ್ತ ಬಾಲಕಿ ಮೈಸೂರಿನ ಒಡನಾಡಿ ಸಂಸ್ಥೆಯ ಮುಂದೆ ನೆರವು ಕೋರಿ ಅಲ್ಲಿಗೆ ಭೇಟಿ ನೀಡಿದ್ದಳು. ಸಂಸ್ಥೆಯ ಆಡಳಿತಾಧಿಕಾರಿ ಸ್ಟ್ಯಾನ್ಲಿ ಕೂಡ ಬಾಲಕಿಯೊಂದಿಗೆ ಕಚೇರಿಗೆ ಹಾಜರಾಗಿದ್ದಾರೆ.
ಈ ಕುರಿತು ಬಾಲಕಿಯರ ಬಾಲಭವನದಲ್ಲಿನ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು, ಸದಸ್ಯರು ಬಾಲಕಿಯ ಆಪ್ತ ಸಮಾಲೋಚನೆ ಮುಂದುವರಿಸಿದ್ದಾರೆ. ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಾಕ್ಷಿ ಹೇಳದಂತೆ ಒತ್ತಡ ಹಾಕಿದ್ರಾ?
ಇಡೀ ಪ್ರಕರಣ ಮುಚ್ಚಿಹಾಕಲು ಒಂದು ಸಿಂಡಿಕೇಟ್ ಕೆಲಸ ಮಾಡುತ್ತಿದೆ. ಸಾಕ್ಷಿ ಹೇಳದಂತೆ ಬಾಲಕಿ ಮೇಲೆ ಒತ್ತಡ ಹಾಕುತ್ತಿದೆ. ಪ್ರಾಣ ಬೆದರಿಕೆಯನ್ನು ಹಾಕಿದ್ದಾರೆ ಎಂದು ಸ್ಟ್ಯಾನ್ಲಿ ಸುದ್ದಿಗಾರರಿಗೆ ತಿಳಿಸಿದರು.
ಪ್ರಕರಣದ ಆರೋಪಿ ತಮ್ಮ ಆಪ್ತರ ಮೂಲಕ ಬಾಲಕಿಯನ್ನು ಹಣ, ಆಮಿಷದ ಮೂಲಕ ಕೊಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಮಗುವಿನ ಮೇಲೆ ತೋರಿಸುತ್ತಿರುವ ದೌರ್ಜನ್ಯದಿಂದ ಇದು ಬೆಳಕಿಗೆ ಬಂದಿದೆ ಎಂದು ದೂರಿದರು.
ದೈಹಿಕ-ಮಾನಸಿಕ ಹಿಂಸೆ ಸಂಬಂಧ ಬಾಲಕಿ ತನ್ನ ಚಿಕ್ಕಪ್ಪನ ವಿರುದ್ಧ ನೀಡಿದ ಹೇಳಿಕೆ ಆಧರಿಸಿ, ದೂರು ಸ್ವೀಕರಿಸಲಾಗಿದೆ. ಇಬ್ಬರಿಗೂ ರಕ್ಷಣೆ ನೀಡುವಂತೆ ಕೋರಿದ್ದು, ಸಿಡಬ್ಲ್ಯುಸಿ ಮುಂದೆ ಹಾಜರುಪಡಿಸಲಾಗಿದೆ. ಸಮಾಲೋಚನೆ ನಡೆಯುತ್ತಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ ತಿಳಿಸಿದ್ದಾರೆ.