ಮಂಜುನಾಥರಾಜ್ ಅರಸ್, ಚಿಕ್ಕನಾಯಕನಹಳ್ಳಿ
ತಾಲೂಕು ಆಸ್ಪತ್ರೆ ಮೇಲ್ದರ್ಜೆಗೇರಿಸಿ ಐವತ್ತು ಹಾಸಿಗೆಗಳನ್ನು ನೂರಾಗಿಸುವಂತೆ 18 ವರ್ಷಗಳ ಹಿಂದೆಯೇ ಆದೇಶಿಸಿ, ಕಟ್ಟಡದ ಮೇಲೋಂದು ಕಟ್ಟಡ ನಿರ್ಮಿಸಲಾಗಿದೆಯಾದರೂ ಸರ್ಕಾರದಿಂದ ಅನುಮೋದನೆ, ಮೂಲಸೌಲಭ್ಯ ಸಿಗದೆ ರೋಗಿಗಳು ತಿಪಟೂರು, ತುಮಕೂರು ನಗರಗಳಿಗೆ ಅಲೆಯುವಂತಾಗಿದ್ದು, ರಾತ್ರಿ ವೇಳೆ ಅಪಘಾತ, ಅವಡಗಳಲ್ಲಿ ಗಂಭೀರ ಗಾಯಗೊಂಡವರು ವೈದ್ಯರು, ಶುಶ್ರೂಷಕಿಯರಿಲ್ಲದೆ, ಸಕಾಲಕ್ಕೆ ಚಿಕಿತ್ಸೆ ಸಿಗದೆ ಆಸ್ಪತ್ರೆಯಲ್ಲೇ ಉಸಿರು ಚೆಲ್ಲುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಇದು ಚಿಕ್ಕನಾಯಕನಹಳ್ಳಿ ತಾಲೂಕು ಆಸ್ಪತ್ರೆಯ ಅವ್ಯವಸ್ಥೆ.
ಹೌದು...! ಚಿಕ್ಕನಾಯಕನಹಳ್ಳಿ ತಾಲೂಕು ಸಾರ್ವಜನಿಕ ಆಸ್ಪತ್ರೆಯನ್ನು 50 ಹಾಸಿಗೆಗಳಿಂದ 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವಂತೆ 2007ರ ಜನೆವರಿ 25ರಂದು(ಅದೇಶ ಸಂಖ್ಯೆ ಆಕುಕ:1068:ಸಿಜಿಎಂ:2006) ಆದೇಶಿಸಲಾಗಿತ್ತು. ಈ ಆದೇಶದಂತೆ ಆಸ್ಪತ್ರೆಯ ಮೇಲ್ಭಾಗದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಿಸಲಾಗಿದೆ. ಆದರೆ ಸರ್ಕಾರದಿಂದ ಸಿಗಬೇಕಾದ ಅಧಿಕೃತ ಅನುಮೋದನೆಯಾಗಲಿ, ಮೂಲಸೌಲಭ್ಯಗಳಾಗಲಿ ಇನ್ನೂ ಸಿಕ್ಕಿಲ್ಲ. ಇದರ ಪರಿಣಾಮ ತಾಲೂಕಿನ ಜನ ಆರೋಗ್ಯ ಸಮಸ್ಯೆ ಎದುರಾದಾಗ ತಿಪಟೂರು, ತುಮಕೂರು ನಗರಗಳಿಗೆ ಅಲೆಯುವಂತಾಗಿದೆ. ಆಸ್ಪತ್ರೆಯಲ್ಲೇ ಅಗತ್ಯ ಚಿಕಿತ್ಸೆ ನೀಡಲು ಅವಕಾಶವಿದ್ದರೂ ಇಲ್ಲಿನ ವೈದ್ಯರು ತುಮಕೂರು, ತಿಪಟೂರು ಆಸ್ಪತ್ರೆಗಳಿಗೆ ರೋಗಿಗಳನ್ನು ಕಳುಹಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂಬ ಆರೋಪ ಇದೆ. ಆರೋಗ್ಯ ಸಚಿವರು ಇತ್ತೀಚೆಗೆ ಈ ಭಾಗಕ್ಕೆ ಭೇಟಿ ನೀಡಿದ್ದರೂ ಇಲ್ಲಿನ ತಾಲೂಕು ಆಸ್ಪತ್ರೆಗೆ ಸೌಜನ್ಯಕ್ಕೂ ಭೇಟಿ ನೀಡಿ. ಇಲ್ಲಿ ಸಮಸ್ಯೆಗಳನ್ನು ಆಲಿಸಲಿಲ್ಲ ಎಂದು ಜನಸಾಮಾನ್ಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಶೌಚಕ್ಕೂ ಪರದಾಟ: ಪ್ರತಿದಿನ 400ರಿಂದ 500ಜನ ಹೊರರೋಗಿಗಳು ಆಸ್ಪತ್ರೆಗೆ ಬಂದು ಹೋಗುತ್ತಾರೆ. ಇದರೊಂದಿಗೆ 35ರಿಂದ 40 ಮಂದಿ ಒಳರೋಗಿಗಳಿರುತ್ತಾರೆ. ಎಲ್ಲರಿಗೂ ಸೇರಿ 52 ಶೌಚಗೃಹಗಳಿದ್ದು, ಸ್ವಚ್ಛತೆ ಇಲ್ಲದೆ ಬಳಕೆಗೆ ಯೋಗ್ಯವಾಗಿಲ್ಲ. ರೋಗಿಗಳು, ರೋಗಿಗಳ ಆರೈಕೆಗೆ ಬರುವವರು ಶೌಚಕ್ಕಾಗಿ ಪರಿತಪಿಸುವಂತಾಗಿದೆ. ಅಲ್ಲದೆ ಆಸ್ಪತ್ರೆಗೆ ಯಾವುದೇ ರಕ್ಷಣಾ ಸಿಬ್ಬಂದಿ ಇಲ್ಲದೇ ಇರುವುದರಿಂದ ರಾತ್ರಿಯ ವೇಳೆ ಕುಡುಕರ ಹಾವಳಿ ಹೆಚ್ಚಿದೆ. ವೃತ್ತಿನಿರತ ಸಿಬ್ಬಂದಿ ಮೇಲೆ ಹಲ್ಲೆ ನಡೆದಿರುವ ಪ್ರಕರಣಗಳೂ ವರದಿಯಾಗಿವೆ. ಆದರೂ ಇಲಾಖೆ ಎಚ್ಚೆತ್ತುಕೊಂಡಿಲ್ಲ ಎಂದು ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಹುದ್ದೆಗಳು ಖಾಲಿ: ತಾಲೂಕು ಆಸ್ಪತ್ರೆಯಲ್ಲಿ 14 ಎ ವೃಂದದ ವೈದ್ಯರಲ್ಲಿ 10 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು, 4 ಹುದ್ದೆಗಳು ಖಾಲಿ ಇವೆ. ಅದರಲ್ಲೂ ಮುಖ್ಯವಾಗಿ 3 ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳು, ಚರ್ಮರೋಗ ತಜ್ಞರ ಹುದ್ದೆ ಖಾಲಿ ಇದೆ. ಕೀಲು ಮತ್ತು ಮೂಳೆ ತಜ್ಞರು ಕಳೆದೆರಡು ವರ್ಷಗಳಿಂದ ದೀರ್ಘಾವಧಿ ರಜೆಯಲ್ಲಿದ್ದಾರೆ. ಇದರೊಂದಿಗೆ ಶುಶ್ರೂಷಕ ಅಧೀಕ್ಷಕರು ದರ್ಜೆ 2ರ ಒಂದು ಹುದ್ದೆೆ, 20 ಮಂದಿ ಶುಶ್ರೂಷಕ ಅಧಿಕಾರಿಗಳ ಪೈಕಿ 18 ಮಂದಿ ಇದ್ದು, 2 ಖಾಲಿ ಇವೆ. ಹಿರಿಯ ಪ್ರಯೋಗ ಶಾಲಾ ತಂತ್ರಜ್ಞರು, ಕಿರಿಯ ಪ್ರಯೋಗ ಶಾಲಾ ತಂತ್ರಜ್ಞರ ತಲಾ ಒಂದು ಹುದ್ದೆ, ವಿಕಿರಣಶಾಸ್ತ್ರ ಚಿತ್ರಣಾ ಅಧಿಕಾರಿ ಒಬ್ಬರು, ಹಿರಿಯ ಫಾರ್ಮಸಿಸ್ಟ್ ಒಂದು, ಸಹಾಯಕ ಆಡಳಿತಾಧಿಕಾರಿ ಒಂದು, ಸಹಾಯಕ ಬೆರಳಚ್ಚುಗಾರರ ಒಂದು, ಒಬ್ಬರು ವಾಹನ ಚಾಲಕ, ಅಡುಗೆ ಸಿಬ್ಬಂದಿ ಒಂದು ಅಲ್ಲದೆ ಡಿ ದರ್ಜೆ ನೌಕರರ ಒಟ್ಟು 32 ಹುದ್ದೆಗಳ ಪೈಕಿ 31 ಹುದ್ದೆಗಳು ಖಾಲಿ ಇವೆ. ಇಡೀ ಆಸ್ಪತ್ರೆಯಲ್ಲಿ ಒಟ್ಟು 85 ಹುದ್ದೆಗಳಲ್ಲಿ ಕೇವಲ 40 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, 45 ಹುದ್ದೆಗಳು ಖಾಲಿ ಇವೆ. ಪರಿಣಾಮ ನಾಗರಿಕರಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ.
ಪಟ್ಟಣದಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಅನೇಕ ಸಮಸ್ಯೆಗಳು ತಾಂಡವವಾಡುತ್ತಿದ್ದು, ವೈದ್ಯರು ಸರಿಯಾದ ಸಮಯಕ್ಕೆ ಹಾಜರಾಗುವುದಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಈ ಬಗ್ಗೆ ಚರ್ಚಿಸಲು ಆರೋಗ್ಯ ಸಮಿತಿ ಸಭೆ ನಡೆಸಲಾಗುತ್ತಿದೆ. ಅಲ್ಲದೇ ವೈದ್ಯರ ಹಾಗೂ ಡಿ ಗ್ರೂಪ್ನೌಕರರ ಕೊರತೆ ನೀಗಿಸಲು ಸರ್ಕಾರದ ಗಮನಕ್ಕೆ ತರಲಾಗಿದೆ.
| ಕೆ.ಜಿ.ಕೃಷ್ಣೇಗೌಡ, ಆಸ್ಪತ್ರೆಯ ಆರೋಗ್ಯ ಸಮಿತಿ ಸದಸ್ಯ
ಪಟ್ಟಣದ ಆಸ್ಪತ್ರೆಯನ್ನು ನೂರು ಹಾಸಿಗೆಗೆ ಮೇಲ್ದರ್ಜೆಗೇರಿಸಿ ಹಲವು ವರ್ಷಗಳೇ ಕಳೆದರೂ ಇನ್ನೂ ಅಗತ್ಯ ಸೌಕರ್ಯ ಒದಗಿಸದಿರುವುದರ ಬಗ್ಗೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಆರೋಗ್ಯ ಸಚಿವರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ಸಮಸ್ಯೆಯನ್ನು ಬಗೆಹರಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ.
| ಸಿ.ಬಿ.ಸುರೇಶ್ಬಾಬು ಶಾಸಕ