ಜಿಲ್ಲೆ

ಚಿಕ್ಕನಹಳ್ಳಿಗೆ ಮೂಲಸೌಲಭ್ಯ ಕಲ್ಪಿಸಲು ಮೊರೆ

ದಾವಣಗೆರೆ:ಚಿಕ್ಕನಹಳ್ಳಿ ಗ್ರಾಮಕ್ಕೆ ರಸ್ತೆ, ಮೂಲ ಸೌಲಭ್ಯಗಳನ್ನು ಕಲ್ಪಿಸಲು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ತಾಲ್ಲೂಕು ಸಮಿತಿ, ಎಐಟಿಯುಸಿ ನೇತೃತ್ವದ ಕಟ್ಟಡ ಕಟ್ಟುವ ಕ್ವಾರಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಚಿಕ್ಕನಹಳ್ಳಿ ಗ್ರಾಮಸ್ಥರು ಶುಕ್ರವಾರ, ದಾವಣಗೆರೆಯ ಎತ್ತಿನ ಸಂತೆಗೆ ಸಂಪರ್ಕಿಸುವ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.

ಕಟ್ಟಡ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಎಚ್.ಜಿ. ಉಮೇಶ್ ಮಾತನಾಡಿ, ಆವರಗೆರೆ ಸರ್ವೇ ನಂ.321/11 ರಲ್ಲಿ 1 ಎಕರೆ 20 ಗುಂಟೆ ಜಮೀನಿನಲ್ಲಿ ವಾಸವಿರುವ ನಿರಾಶ್ರಿತ 76 ಜನರಿಗೆ ಆಶ್ರಯ ಸಮಿತಿಯಿಂದ ಹಕ್ಕುಪತ್ರ ನೀಡಲಾಗಿದೆ. ಆದರೆ ಈ ಕಾಲನಿಯ ಮುಖ್ಯ ರಸ್ತೆಗೆ ಸಂಪರ್ಕವೇ ಇಲ್ಲವಾಗಿದೆ. ಮಳೆಗಾಲದಲ್ಲಿ ಓಡಾಡಲು ಹರಸಾಹಸ ಮಾಡಬೇಕಿದೆ ಎಂದರು.

ಪಾಲಿಕೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿದಂತೆ ಖಾಸಗಿ ವ್ಯಕ್ತಿಯಿಂದ ರಸ್ತೆಗೆ ಅಗತ್ಯ ಜಾಗ ಸರ್ಕಾರಿ ನಿಯಮಾನುಸಾರ ಬಿಡಿಸಿಕೊಂಡು ಅಭಿವೃದ್ಧಿ ಪಡಿಸಿಕೊಡದೇ ನಿರ್ಲಕ್ಷಿಸಲಾಗಿದೆ. ಖಾಸಗಿ ಜಾಗದಲ್ಲಿ ರಸ್ತೆ ನಿರ್ಮಿಸುವಂತೆ ಎಸ್ಸಿಎಸ್ಟಿ ಕುಂದು ಕೊರತೆ ಸಭೆಯಲ್ಲಿ ಜಿಲ್ಲಾಧಿಕಾರಿ ಆದೇಶಿಸಿದ್ದರು. 52 ಲಕ್ಷ ರೂ. ಕ್ರೋಢೀಕರಿಸಿ ಮೀಸಲಿಟ್ಟರೂ ರಸ್ತೆ ನಿರ್ಮಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಆವರಗೆರೆ ವಾಸು, ಮಲ್ಲಮ್ಮ, ದೇವೇಂದ್ರಪ್ಪ, ಪರಶುರಾಮ, ಹನುಮಂತಪ್ಪ, ದಂಡೆಪ್ಪ, ಶಿವಪ್ಪ, ಬಸಣ್ಣ, ಗಂಗಪ್ಪ, ಬಸಣ್ಣ, ಕಿರಣ್, ಐರಣಿ ಚಂದ್ರು, ಯರಗುಂಟೆ ಸುರೇಶ್, ವಿ.ಲಕ್ಷ್ಮ್ಮಣ, ನೇತ್ರಾವತಿ, ನರೇಗಾ ರಂಗನಾಥ, ರಮೇಶ್ ದಾಸರ್, ಮಲ್ಲಮ್ಮ, ರೇಣುಕಮ್ಮ, ಹನುಮಕ್ಕ, ಹೊನ್ನಮ್ಮ, ಶಾರದಮ್ಮ ಇತರರು ಇದ್ದರು.