ಗಿರಿಯಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಶಾಸಕ ಕೆ.ಎಸ್.ಆನಂದ್ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಸುಧಾ, ವಿ.ಸಿ.ಗೌರಮ್ಮ, ಅಶೋಕ್, ಕಲ್ಲೇಶ್ ಇತರರಿದ್ದರು. 
ಜಿಲ್ಲೆ

ಚಿಕ್ಕನಲ್ಲೂರು ಗೌಡನ ಕೆರೆ ಒತ್ತುವರಿ ಶೀಘ್ರ ತೆರವು

ಕಡೂರು: ಚಿಕ್ಕನಲ್ಲೂರು ಗ್ರಾಮದ ಗೌಡನ ಕೆರೆ ಒತ್ತುವರಿಯಾಗಿದೆ. ಸರ್ವೇ ಮಾಡಿ ಒತ್ತುವರಿ ತೆರವು ಮಾಡಬೇಕು. ಆದರೆ ಅಧಿಕಾರಿಗಳು ತೆರವು ಕಾರ್ಯಕ್ಕೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ ಎಂದು ಚಿಕ್ಕನಲ್ಲೂರು ಗ್ರಾಮದ ರೇವಣ್ಣ ದೂರಿದರು.

ಗಿರಿಯಾಪುರ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಮಳೆಯಿಲ್ಲದೆ ಕೆರೆ ಖಾಲಿಯಾಗಿದೆ. ಒತ್ತುವರಿ ತೆರವುಗೊಳಿಸಿಕೊಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ತಾಲೂಕಿನ 40 ಕ್ಕೂ ಹೆಚ್ಚು ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ. ಅದೇ ರೀತಿ ಚಿಕ್ಕನಲ್ಲೂರು ಗೌಡನಕೆರೆ ಒತ್ತುವರಿ ಶೀಘ್ರ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.

ಚಿಕ್ಕನಲ್ಲೂರು ಗ್ರಾಮದಲ್ಲಿ ಪರಿಶಿಷ್ಟರ ಸ್ಮಶಾನಕ್ಕೆ ಈ ಹಿಂದೆ ಮೂರು ಎಕರೆ ಜಾಗ ಮಂಜೂರಾಗಿದೆ. ಅದರ ಸರ್ವೇ ನಡೆಸಿ ಜಾಗ ಗುರುತಿಸಿಕೊಡುವಂತೆ ಗ್ರಾಮಸ್ಥರು ನೀಡಿದ್ದ ಅರ್ಜಿಗೆ ಉತ್ತರಿಸುವ ಸಂದರ್ಭ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಮಾತನಾಡಿ, ಮಂಜೂರಾತಿ ಪತ್ರ ಲಭ್ಯವಿಲ್ಲ. ಅಲ್ಲದೆ ಸ್ವಾಧೀನದಲ್ಲೂ ಇಲ್ಲ. ಹಾಗಾಗಿ ದುರಸ್ತಿ ಮಾಡಲು ಬರುವುದಿಲ್ಲ ಎಂದರು. ಮಧ್ಯ ಪ್ರವೇಶಿದ ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಮಂಜೂರಾತಿ ಪತ್ರ ಕಳೆದವರಾರು ಎಂದು ತಹಸೀಲ್ದಾರ್ ಅವರನ್ನು ಪ್ರಶ್ನಿಸಿದರು. ನಾವೇ ಎಂದು ತಹಸೀಲ್ದಾರ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ಮಂಜೂರಾತಿ ಪತ್ರ ನಿಮ್ಮ ಬಳಿ ಇರಬೇಕು. ಮಂಜೂರಾತಿ ಪತ್ರವನ್ನು ನೀವು ಕಳೆದು ಸಾರ್ವಜನಿಕರಿಗೆ ಮಂಜೂರಾತಿ ಪತ್ರ ತಂದುಕೊಡಿ ಎಂದರೆ ಅವರೆಲ್ಲಿಂದ ತಂದು ಕೊಡುತ್ತಾರೆ? ಈ ರೀತಿಯ ಸಬೂಬು ಹೇಳದೆ ಅವರಿಗೆ ಒಂದು ವಾರದೊಳಗೆ ಸರ್ವೇ ಮಾಡಿಸಿ ಜಾಗ ಗುರುತಿಸಿಕೊಡಿ ಎಂದು ನಿರ್ದೇಶನ ನೀಡಿದರು.

ಭದ್ರಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಚಿಕ್ಕನಲ್ಲೂರು ಗೌಡನಕೆರೆಗೆ ನೀರು ಬರುತ್ತದೆಯೇ ಎಂದು ವಿಶ್ವೇಶ್ವರಯ್ಯ ಜಲನಿಗಮದ ಇಂಜಿನಿಯರ್ ಅವರನ್ನು ಶಾಸಕ ಕೆ.ಎಸ್.ಆನಂದ್ ಪ್ರಶ್ನಿಸಿದರು. ಇಂಜಿನಿಯರ್ ಹೌದು ಅಥವಾ ಇಲ್ಲ ಎಂದು ಸ್ಪಷ್ಟವಾಗಿ ಹೇಳದಿದ್ದಾಗ, ಜನರ ಮುಂದೆ ಸುಳ್ಳು ಹೇಳಬೇಡಿ. ಸತ್ಯ ಹೇಳಿ ಎಂದು ಶಾಸಕ ತಾಕೀತು ಮಾಡಿದರು. ಆಗ ವಿಜೆಎನ್‌ಎಲ್ ಇಂಜಿನಿಯರ್ ಇಲ್ಲ ಸರ್. ಆ ಕೆರೆಗೆ ನೀರಿನ ಅಲಾಟ್‌ಮೆಂಟ್ ಇಲ್ಲ ಎಂದರು. ಚಿಕ್ಕನಲ್ಲೂರು ಕೆರೆಗೆ ನೀರು ಹರಿಸಲು ಅಡ್ಡಿಯಾಗಿರುವ ತಾಂತ್ರಿಕ ಕಾರಣಗಳನ್ನು ತಿಳಿಸಿ. ಶೀಘ್ರದಲ್ಲಿ ಸರ್ವೇ ನಡೆಸಿ ಪ್ರಸ್ತಾವನೆ ಕಳುಹಿಸಿದರೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ಶಾಸಕ ತಿಳಿಸಿದರು.

ಅರ್ಜಿದಾರರಿಗೆ ಉತ್ತರ ನೀಡುವ ಸಂದರ್ಭ ಪರಿಶೀಲಿಸಲಾಗುವುದು. ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂಬ ಕೆಲ ಅಧಿಕಾರಿಗಳ ಉತ್ತರದಿಂದ ಅಸಮಾಧಾನಗೊಂಡ ಶಾಸಕ ಕೆ.ಎಸ್.ಆನಂದ್, ಭರವಸೆಯ ಮಾತುಗಳನ್ನಾಡಬೇಡಿ. ಕೆಲಸ ಮಾಡಿಕೊಡುವ ನಿಗದಿತ ಸಮಯ ತಿಳಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಗಿರಿಯಾಪುರ ಗ್ರಾಮದ ಪೌತಿಖಾತೆ, ಇ-ಸ್ವತ್ತು, ಮನೆ ಮಂಜೂರಾತಿ, ರಸ್ತೆ ತೆರವು ಮಾಡಿಕೊಡುವುದು ಸೇರಿದಂತೆ 40ಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು.

ಗ್ರಾಪಂ ಅಧ್ಯಕ್ಷೆ ಸಿ.ಎಂ.ಸುಧಾ, ಉಪಾಧ್ಯಕ್ಷೆ ವಿ.ಸಿ.ಗೌರಮ್ಮ, ಜಿಲ್ಲಾ ಕೆಡಿಪಿ ಸದಸ್ಯ ಗುಮ್ಮನಹಳ್ಳಿ ಅಶೋಕ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ತಾಲೂಕು ಅಧ್ಯಕ್ಷ ಆಸಂದಿ ಕಲ್ಲೇಶ್, ಇಒ ಸಿ.ಆರ್.ಪ್ರವೀಣ್, ಸದಸ್ಯರಾದ ಲೋಕನಾಥ್, ಚೂಡಾಮಣಿ, ಶಾರದಮ್ಮ, ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾಮಸ್ಥರು ಇದ್ದರು.